ಗುರುಪುರ ದೋಣಿಂಜೆ ಗುತ್ತು ಗಡಿ ಪ್ರಧಾನರಾದ ಪ್ರಮೋದ್ ಕುಮಾರ್ ರೈಯವರ ಅಧ್ಯಕ್ಷತೆಯಲ್ಲಿ, ಯತಿವರ್ಯ ಹಾಗೂ ತಂತ್ರಿವರ್ಯರ ಅನುಗ್ರಹ ಮಾರ್ಗದರ್ಶನ ಮತ್ತು ಪವಿತ್ರ ಸಾನ್ನಿಧ್ಯದಲ್ಲಿ ಡಿಸೆಂಬರ್ 21ರಂದು ನಗರದ ಉರ್ವಾ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ನಡೆಯಲಿರುವ ‘ಧರ್ಮಾವಲೋಕನ ಸಭೆ’ಯ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಶುಕ್ರವಾರ ಜರಗಿತು. ಈ ಕಾರ್ಯಕ್ರಮವನ್ನು ವಿಶ್ವ ಹಿಂದೂ ಪರಿಷತ್, ಹಿಂದೂ ಯುವಸೇನೆ ಮತ್ತು ತುಳುನಾಡ ರಕ್ಷಣಾ ವೇದಿಕೆಯ ಸಹಯೋಗದೊಂದಿಗೆ ಆಯೋಜಿಸಲಾಗಿದೆ. ಆಮಂತ್ರಣ ಪತ್ರಿಕೆ ಬಿಡುಗಡೆ ನಂತರ ಮಾತನಾಡಿದ ಗಡಿ ಪ್ರಧಾನ ಪ್ರಮೋದ್ ಕುಮಾರ್ ರೈ ಅವರು, ‘ಹಿಂದೂ ಧರ್ಮದ ಸಂರಕ್ಷಣೆ, ಧರ್ಮದ ಮೂಲ ಸಿದ್ಧಾಂತಗಳ ಅರಿವು ಮತ್ತು ಯುವ ಪೀಳಿಗೆಯಲ್ಲಿ ಧಾರ್ಮಿಕ ಜಾಗೃತಿ ಮೂಡಿಸಲು ಸಮಾಜದ ಎಲ್ಲ ವರ್ಗದ ಜನರನ್ನು ಒಂದೇ ವೇದಿಕೆಗೆ ತರಲು ಈ ಧರ್ಮಾವಲೋಕನ ಸಭೆಯನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಧರ್ಮದ ಒಳಿತು ಕೆಡುಕುಗಳ ಅಧ್ಯಯನ ಮತ್ತು ಚಿಂತನೆಗೆ ಇದು ಮಹತ್ತ್ವದ ವೇದಿಕೆ ಆಗಲಿದೆ’ ಎಂದು ಹೇಳಿದರು.

ಈ ಸಂದರ್ಭದಲ್ಲಿ ಹಿಂದೂ ಯುವಸೇನೆ ಗೌರವಾಧ್ಯಕ್ಷ ಭಾಸ್ಕರಚಂದ್ರ ಶೆಟ್ಟಿ, ವಿಶ್ವ ಹಿಂದೂ ಪರಿಷತ್ ಪ್ರಮುಖರಾದ ಪ್ರವೀಣ್ ಕುತ್ತಾರ್, ಜಗದೀಶ್ ಅಧಿಕಾರಿ, ತುಳುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು, ಸಾಹಿತಿ ಸಂಘಟಕ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ, ಧಾರ್ಮಿಕ ಚಿಂತಕರಾದ ಕಿರಣ್ ಉಪಾಧ್ಯಾಯ, ಪಮ್ಮಿ ಕೊಡಿಯಾಲ್ ಬೈಲ್, ವಿಜಯ್ ಶೆಟ್ಟಿ, ವಸಂತ ಶೇಣವ, ಚಂದ್ರಹಾಸ ಶೆಟ್ಟಿ, ವಕೀಲರಾದ ಪ್ರಶಾಂತ್, ಜನಾರ್ದನ ಆರ್ಕುಳ, ಪ್ರಶಾಂತ್ ಶೆಟ್ಟಿ, ಪತ್ರಕರ್ತ ಪ್ರಕಾಶ್ ಇಳಂತಿಲ, ಪ್ರಶಾಂತ್ ಭಟ್ ಕಡಬ ಹಾಗೂ ವಿವಿಧ ಅರಮನೆ, ಬೀಡು, ಗುತ್ತು ಮನೆತನಗಳ ಗಡಿಕಾರರು ಮತ್ತು ಯಜಮಾನರು ಉಪಸ್ಥಿತರಿದ್ದರು. ಧರ್ಮ, ಸಂಸ್ಕೃತಿ ಮತ್ತು ಸಮಾಜಮುಖಿ ಚಿಂತನೆಗಳ ಕುರಿತಾದ ವಿಶ್ಲೇಷಣಾತ್ಮಕ ವೇದಿಕೆಯಾಗಿ ಧರ್ಮಾವಲೋಕನ ಸಭೆ ಸಾರ್ವಜನಿಕರ ಗಮನ ಸೆಳೆಯಲಿದೆ. ಅಲ್ಲದೆ ಸಭೆಯ ಕೊನೆಯಲ್ಲಿ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ‘ಭಕ್ತಿ ಪಾರಮ್ಯ’ ಯಕ್ಷಗಾನ ತಾಳಮದ್ದಳೆಯೂ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
















































































































