ಹುಟ್ಟು ನಿಶ್ಚಿತ ಸಾವು ಖಚಿತ ಆದರೆ ಅದಕ್ಕೊಂದು ಕರುಣೆ ಇಲ್ಲ. ವಯಸ್ಸಿನ ಲೆಕ್ಕಾಚಾರವನ್ನು ಹಾಕಲ್ಲ. ಬೈಕಾಡಿ ಜೀವನ್ ಶೆಟ್ರು ಉಡುಪಿ ಜಿಲ್ಲೆಯ ಪ್ರಸಿದ್ಧ ಪಿಡಬ್ಲ್ಯೂಡಿ ಗುತ್ತಿಗೆದಾರರು. ಅದೆಷ್ಟೋ ಜನರು ತಮ್ಮೂರಿಗೊಂದು ರಸ್ತೆ ಸ್ಯಾಂಕ್ಷನ್ ಆದಾಗ ಅದರ ಗುತ್ತಿಗೆ ಬೈಕಾಡಿ ಜೀವನಣ್ಣನಿಗೆ ಸಿಗಲಿ ಅಂತ ಪ್ರಾರ್ಥಿಸಿದವರಿದ್ದಾರೆ. ಎಲ್ಲೇ ರಸ್ತೆ ನಿರ್ಮಾಣ ಕಾಮಗಾರಿ ಆದರೂ ಕೂಡ ಎಲ್ಲಾ ಗುತ್ತಿಗೆದಾರರಿಗಿಂತ ಹೆಚ್ಚು ಹಣವನ್ನು ರಸ್ತೆಗೆ ಹಾಕಿ ಗುಣಮಟ್ಟದ ಕಾಮಗಾರಿಯನ್ನು ಮಾಡಿ ಎಲ್ಲಾ ಸ್ಥರದ ಜನರಿಂದಲೂ ಸೈ ಅನಿಸಿಕೊಂಡವರು. ನೀಳಕಾಯದ ನಗುಮೊಗದ ಶುಭ್ರ ವಸ್ತ್ರಧಾರಿಯಾಗಿರುತ್ತಿದ್ದ ಜೀವನಣ್ಣನನ್ನು ನೋಡುವಾಗಲೇ ಎಂಥವರಲ್ಲೂ ಗೌರವ ಹೊರ ಹೊಮ್ಮುತ್ತಿತ್ತು. ಎಳ್ಳಂಪಳ್ಳಿ ರಸ್ತೆ ಕಾಮಗಾರಿಯಾಗುವಾಗ ಮುಂಜಾನೆ ಬಂದು ಅರ್ಧ ತೋಳಿನ ಬಿಳಿಯಂಗಿಯನ್ನು ತೊಟ್ಟು ಕೆಲಸಗಾರರಿಗೆ ಸೂಚನೆಯನ್ನು ಕೊಡುತ್ತಿದ್ದ ಅವರಿಗೊಂದು ನಮಸ್ಕಾರ ಮಾಡಿ ನಾನು ಶಾಲಾ ಕರ್ತವ್ಯಕ್ಕೆ ಮುಂದುವರಿಯುತ್ತಿದ್ದೆ. ಅವರಿಗೆ ನಮಸ್ಕರಿಸುವುದೇ ನಮ್ಮಂಥವರಿಗೆ ಹೆಮ್ಮೆಯ ವಿಷಯವಾಗಿತ್ತು

ಮುರಳಿ ಕೃಷ್ಣ ನಾಮಾಂಕಿತದೊಂದಿಗೆ ಕರಾವಳಿಯಲ್ಲಿ ಮಿಂಚಿದ ಪ್ರಸಿದ್ಧ ಕನ್ಸ್ಟ್ರಕ್ಷನ್ ಕಂಪೆನಿ ಇವರದ್ದು. ತಮ್ಮ ಸಂಸ್ಥೆಯ ಮುಖಾಂತರವಾಗಿ ಅದೆಷ್ಟೋ ಜನರಿಗೆ ವೃತ್ತಿ ನೀಡಿ ಅವರ ಸಂಸಾರದ ಬದುಕಿಗೆ ನೊಗವಾದವರು, ವ್ಯವಹಾರದಲ್ಲಿಯೂ ಕೂಡ ಅದೃಷ್ಟದ ಹಸ್ತ ಇವರದ್ದು. ಇವರು ಮುಟ್ಟಿದ್ದೆಲ್ಲ ಚಿನ್ನವಾಗುತ್ತೆ ಅಂತ ಸಾಕಷ್ಟು ಜನ ಇವರ ಬಗ್ಗೆ ಮಾತಾಡಿಕೊಳ್ಳುತ್ತಿದ್ರು. ಇಷ್ಟೆಲ್ಲ ಇದ್ದರೂ ಕೂಡ ಸರಳತೆಯ ಭೂಷಣವಂತಿದ್ದ ಜೀವನಣ್ಣನ ಮೇಲೆ ಅದ್ಯಾವ ಮಾಯೆಯಲ್ಲಿ ವಿಧಿಯ ವಕ್ರದೃಷ್ಟಿ ಬಿತ್ತೊ ಗೊತ್ತಿಲ್ಲ ಅರ್ಬುದರೋಗ ಇವರನ್ನು ಆವರಿಸಿಕೊಂಡು ಬಿಟ್ಟಿತ್ತು. ಇವರ ಸಂಸ್ಥೆಯಲ್ಲಿ ಸುದೀರ್ಘ 7 ವರ್ಷಗಳ ಕಾಲ ಕೆಲಸ ಮಾಡಿದಂತಹ ನನ್ನ ಪ್ರಾಣ ಸ್ನೇಹಿತ ವೆಂಕಟೇಶ್ ಶೆಟ್ರ ಬಳಿ ಸಾಹುಕಾರರು ಹೇಗಿದ್ದಾರೆ ಅಂತ ವಿಚಾರಿಸುತ್ತಿದ್ದಾಗ ಔಷಧೋಪಚಾರ ನಡೆಯುತ್ತಿದೆ ಈವಾಗ ಸುಧಾರಿಸಿಕೊಂಡಿದ್ದಾರೆ ಹುಷಾರ್ ಆಗ್ತಾರೆ ವೈದ್ಯರು ಗ್ಯಾರಂಟಿ ಕೊಟ್ಟಿದ್ದಾರೆ ಅಂತ ಹೇಳುತ್ತಿದ್ದ. ಆದರೆ ಯಾರ ಪ್ರಾರ್ಥನೆಯೂ ಕೂಡ ಫಲಿಸಲಿಲ್ಲ. 2023ರಲ್ಲಿ ನಾವು ಎಳ್ಳಂಪಳ್ಳಿಯಲ್ಲಿ ಮೊಟ್ಟಮೊದಲ ಬಾರಿಗೆ ಸಾಂಸ್ಕೃತಿಕ ಕಲರವ ಕಾರ್ಯಕ್ರಮವನ್ನು ಮಾಡಲು ಹೊರಟಾಗ ಮಹಾಪೋಷಕರಾಗಿ ಜೊತೆಯಾದವರು, ಕಾರ್ಯಕ್ರಮದ ದಿನವೇ 28 ಜನವರಿ 2023 ರಂದು ನೀಲಾವರದ ಕಲ್ಕುಡನ ಸನ್ನಿಧಾನದಲ್ಲಿ ಸಿಕ್ಕಿ ಒಂದಿಷ್ಟು ಮೊತ್ತವನ್ನು ನಮಗೆ ನೀಡಿ ಕಾರ್ಯಕ್ರಮ ಯಶಸ್ಸಾಗಲೆಂದು ಶುಭ ಹಾರೈಸಿದವರು. ಮತ್ತೊಬ್ಬರಿಗೆ ತಿಳಿಯದಂತೆ ನೊಂದವರಿಗೆ ಸಹಾಯ ಮಾಡಿದವರು, ತನ್ನ ಕಾರ್ಯ ಚಟುವಟಿಕೆ ಸಮಾಜಮುಖಿ ಚಿಂತನೆ ಸರಳ ವ್ಯಕ್ತಿತ್ವದ ಮುಖಾಂತರವೇ ಗುರುತಿಸಿಕೊಂಡಿರುವಂತಹ ಬೈಕಾಡಿ ಜೀವನಣ್ಣ ಇನ್ನಿಲ್ಲವೆಂಬುದು ವಿಷಾದನೀಯ. ನಮ್ಮ ಮನೆಗೆ ಹೋಗುವ ದಾರಿಯಲ್ಲಿ ಸಂಚರಿಸುವಾಗ ಸದಾ ನಿಮ್ಮ ನೆನಪಾಗುತ್ತೆ. ಹೋಗಿ ಬನ್ನಿ…
ಬರಹ : ಎಳ್ಳಂಪಳ್ಳಿ ಸಂತೋಷ್ ಶೆಟ್ಟಿ












































































































