ಮಹಾರಾಷ್ಟ್ರದ ಮಣ್ಣಿನಲ್ಲಿ ಕನ್ನಡದ ಕಂಪನ್ನು ಪಸರಿಸುತ್ತಿರುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಚಿಣ್ಣರ ಬಿಂಬ ಚಾರಿಟೇಬಲ್ ಟ್ರಸ್ಟ್ನ ಡೊಂಬಿವಲಿ, ಕಲ್ವಾ, ಘೋಡಬಂದರ್, ನವಿ ಮುಂಬೈ ಪ್ರಾದೇಶಿಕ ಸಮಿತಿಗಳನ್ನೊಳಗೊಂಡ ಈಶಾನ್ಯ ವಲಯದ ಮಕ್ಕಳ ಉತ್ಸವದ ಸಮಾರೋಪ ಸಮಾರಂಭವು ನವೆಂಬರ್ 16 ರಂದು ಐರೋಲಿಯ ಜ್ಞಾನ ವಿಕಾಸ್ ಮಂಡಲ ಮೆಹ್ತಾ ಕಾಲೇಜ್ ನ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕದ ಕಾರ್ಯನಿರತ ಪತ್ರಕರ್ತರ ಸಂಘ ಮಾಹಾರಾಷ್ಟ್ರ ಘಟಕದ ಅಧ್ಯಕ್ಷರಾದ ಡಾ| ಶಿವ ಮೂಡಿಗೆರೆಯವರು ಮಾತನಾಡುತ್ತಾ, ಚಿಣ್ಣರ ಬಿಂಬದಲ್ಲಿ ಕಲಿತ ಮಕ್ಕಳು ಉನ್ನತ ಹುದ್ದೆಯಲ್ಲಿ ಇರುವುದನ್ನು ಕಂಡು ತುಂಬಾ ಸಂತೋಷವಾಗುತ್ತದೆ. ಮಹಾರಾಷ್ಟ್ರ ಸರಕಾರವು ಚಿಣ್ಣರ ಬಿಂಬದ ಸಾಧನೆ ಗುರುತಿಸಿ ಗೌರವಿಸಿ ಸಹಕಾರ ನೀಡುವಂತಾಗಲಿ. ಹಾಗೆಯೇ ಸಂಸ್ಥೆಗೆ ಇನ್ನಷ್ಟು ಪ್ರಶಸ್ತಿ, ಪುರಸ್ಕಾರಗಳು ಲಭಿಸುತ್ತಿರಲಿ. ಅದಷ್ಟು ಬೇಗ ಮುಂಬಯಿಯಲ್ಲಿ ಚಿಣ್ಣರ ಭವನ ನಿರ್ಮಾಣವಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ನವಿ ಮುಂಬಯಿಯ ಮಾಜಿ ನಗರ ಸೇವಕ ಸಂತೋಷ್ ಡಿ. ಶೆಟ್ಟಿ ಮಾತನಾಡುತ್ತಾ, ಕಳೆದ 23 ವರ್ಷಗಳಿಂದ ಚಿಣ್ಣರ ಬಿಂಬದ ಕಾರ್ಯ ಚಟುವಟಿಗಳಲ್ಲಿ ಭಾಗಿಯಾಗುತ್ತಿದ್ದೇನೆ. ತಾಯ್ನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸವನ್ನು ಸಂಸ್ಥೆ ಮಾಡುತ್ತಿದೆ. ಕುಂಬಾರ ಮಣ್ಣಿನಿಂದ ಮಡಿಕೆಗೆ ರೂಪ ಕೊಟ್ಟ ಹಾಗೆ ಚಿಣ್ಣರ ಬಿಂಬ ಮಕ್ಕಳಿಗೆ ಸಂಸ್ಕಾರ ನೀಡಿ ಉತ್ತಮ ನಾಗರಿಕರನ್ನು ನಿರ್ಮಿಸುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕೆ.ಎನ್ ಪಾರ್ಕ್ ಆಫ್ ಹೊಟೇಲ್ಸ್ ಹಾಗೂ ಎಸ್.ಎಮ್ ಕನ್ಸ್ಟ್ರಕ್ಷನ್ ನ ಆಡಳಿತ ನಿರ್ದೇಶಕರಾದ ಸತೀಶ್ ಶೆಟ್ಟಿಯವರು, ಚಿಣ್ಣರ ಬಿಂಬದ ಕಾರ್ಯ ವೈಖರಿ ನೋಡುವಾಗ ತುಂಬಾ ಸಂತೋಷವಾಗುತ್ತದೆ. ಶಿಕ್ಷಕರ, ಪೋಷಕರ ಶ್ರಮ ಅಭಿನಂದನಾರ್ಹ. ಸಮಾಜಕ್ಕೆ ಒಳ್ಳೆಯ ಸುಸಂಸ್ಕೃತ ಮಕ್ಕಳನ್ನು ನಿರ್ಮಿಸುತ್ತಿರುವ ಚಿಣ್ಣರ ಬಿಂಬವು ಉನ್ನತಿಯನ್ನು ಹೊಂದಲಿ ಎಂದರು.
ಗೌರವಾನ್ವಿತ ಅತಿಥಿಗಳಾಗಿ ಆಗಮಿಸಿದ್ದ ಶ್ರೀದೇವಿ ಹಾಸ್ಪಿಟಾಲಿಟಿ ಸರ್ವಿಸಸ್ ಸಿಎಮ್ ಡಿ ಅಶೋಕ್ ಶೆಟ್ಟಿ, ಮಕ್ಕಳ ಭಜನೆ, ಭಾಷಣ, ಚರ್ಚೆ, ಹಾಡು ಕೇಳಿ ತುಂಬಾ ಸಂತೋಷವಾಯಿತು. ಮಕ್ಕಳನ್ನು ತಯಾರು ಮಾಡುವಲ್ಲಿ ಪಾಲಕರಲ್ಲಿ ತುಂಬಾ ಶ್ರಮವಿದೆ. ನಮ್ಮ ಕಲೆ, ಸಂಸ್ಕೃತಿಯನ್ನು ಉಳಿಸುತ್ತಿರುವ ಚಿಣ್ಣರ ಬಿಂಬದ ಸಾಧನೆ ಶ್ಲಾಘನೀಯವಾದುದು ಎಂದು ಪ್ರಶಂಸಿದರು. ಹೋಟೆಲ್ ಉದ್ಯಮಿ ಹಾಗೂ ತುಳುಕೂಟ ಐರೋಲಿ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಸಂತೋಷ್ ಶೆಟ್ಟಿ ಮಾತನಾಡುತ್ತಾ, ವೇದಿಕೆಯ ಕಂಪನವಿಲ್ಲದೆ ಮಕ್ಕಳು ಮಾತನಾಡುವುದನ್ನು ನೋಡಿದಾಗ ತುಂಬಾ ಸಂತೋಷವಾಗುತ್ತದೆ. ಜೀವನದಲ್ಲಿ ಆತ್ಮವಿಶ್ವಾಸ ಹಾಗೂ ನಂಬಿಕೆ ಇದ್ದರೆ ಎಂಥಾ ಸಮಸ್ಯೆಯಿಂದಲೂ ಪಾರಾಗಬಹುದು. ನನ್ನ ಇಬ್ಬರು ಮಕ್ಕಳು ಚಿಣ್ಣರ ಬಿಂಬದಲ್ಲಿ ಕಲಿತು ನಿರರ್ಗಳವಾಗಿ ಕನ್ನಡದಲ್ಲಿ ಮಾತನಾಡುತ್ತಾರೆ. ಹಾಗೆ ಮನೆಯಲ್ಲಿ ಭಜನೆ, ವಿಷ್ಣು ಸಹಸ್ರನಾಮ ಹೇಳುತ್ತಾರೆ. ತಂದೆ ತಾಯಂದಿರನ್ನು ವೃದ್ದಾಪ್ಯದಲ್ಲಿ ಚೆನ್ನಾಗಿ ನೋಡಬೇಕಾದರೆ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಅಗತ್ಯ ಎಂದರು. ಹೋಟೆಲ್ ಉದ್ಯಮಿಗಳಾದ ಬಾಲಕೃಷ್ಣ ಶೆಟ್ಟಿ ಹಾಗೂ ಉದಯ್ ಹೆಗ್ಡೆ ಶುಭ ಹಾರೈಸಿದರು. ಸಂಚಾಲಕಿ ಗೀತಾ ಹೇರಳ ಪ್ರೋತ್ಸಾಹದ ಮಾತುಗಳನ್ನಾಡಿದರು. ವಲಯ ಮುಖ್ಯಸ್ಥೆ ಮಂಜುಳಾ ಶೆಟ್ಟಿ ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಭಾಸ್ಕರ್ ಶೆಟ್ಟಿ ತಾಳಿಪಾಡಿಗುತ್ತು, ಆಶಾ ಪೂಜಾರಿ, ಮೈನಾ ಶೆಟ್ಟಿ, ಸುಜಾತ ಶೆಟ್ಟಿ, ಆಶಾಲತಾ ಕೊಠಾರಿ, ಜ್ಯೋತಿ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಎಲ್ಲಾ ಶಿಬಿರದ ಕನ್ನಡ ಮತ್ತು ಭಜನೆ ಶಿಕ್ಷಕಿಯರು, ಶಿಬಿರ ಮುಖ್ಯಸ್ಥರು ಮತ್ತು ಸಾಂಸ್ಕೃತಿಕ ಮುಖ್ಯಸ್ಥರನ್ನು, ವಲಯ ಹಾಗೂ ಪ್ರಾದೇಶಿಕ ಮುಖ್ಯಸ್ಥರನ್ನು ಗೌರವಿಸಲಾಯಿತು.10ನೇ ಮತ್ತು 12ನೆಯ ತರಗತಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ದಕ್ಷಿಣ ಕನ್ನಡ ರಾಜ್ಯೋತ್ಸವ ಪ್ರತಿಭಾ ಪುರಸ್ಕಾರ ಪಡೆದ ಲಾಸ್ಯ ಪೂಜಾರಿ ಹಾಗೂ ನಿನಾದ್ ಶೆಟ್ಟಿಯವರನ್ನು ಗೌರವಿಸಲಾಯಿತು. ಚಿಣ್ಣರಾದ ವಂಶಿಕ್ ಪೂಜಾರಿ ಮತ್ತು ಪ್ರತ್ಯುಷಾ ಬಲ್ಲಾಳ್ ಸಭಾ ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕಿ ಕುಮುದ ಕೆ. ಆಳ್ವ ಇವರಿಗೆ ಸಹಕರಿಸಿದರು. ಸುಹಾಸಿನಿ ರಾವ್, ಸುಜಾತಾ ಉದಯ್ ಶೆಟ್ಟಿ, ಸುಕುಮಾರಿ ಶೆಟ್ಟಿ, ಪ್ರಮೀಳಾ ಹೆಗ್ಡೆ ಪಾಲಕರ ಸಮೂಹ ಗೀತೆ ಹಾಗೂ ಜಾನಪದ ನೃತ್ಯದ ನಿರೂಪಣೆ ಮಾಡಿದರು. ಚಿಣ್ಣರಾದ ಸ್ವಸ್ತಿಕ್ ಶೆಟ್ಟಿ, ನಿಹಾನ್ ದೇವಾಡಿಗ, ಮಿತೀಶ್ ಶೆಟ್ಟಿ, ರಿದ್ಯಾ ಶೆಟ್ಟಿ, ಶಿವಂ ಶೆಟ್ಟಿ, ವಿಹಾ ಶೆಟ್ಟಿ, ಆತ್ಮೀ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಡೊಂಬಿವಲಿ ಶಿಬಿರದ ಮಕ್ಕಳು ಪ್ರಾರ್ಥನೆಗೈದರು. ವಲಯ ಮುಖ್ಯಸ್ಥೆ ಜ್ಯೋತಿ ಶೆಟ್ಟಿ ಧನ್ಯವಾದಗೈದರು.











































































































