ಡಾ| ದಯಾನಂದ ಪೈ, ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಕರ್ನಾಟಕ ಯಕ್ಷಭಾರತಿ ( ರಿ.) ಪುತ್ತೂರು ಇವರ ಸಹಯೋಗದೊಂದಿಗೆ ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆಯು ಮಂಗಳೂರು ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಏರ್ಪಡಿಸಿದ 13ನೇ ವರ್ಷದ ಯಕ್ಷಗಾನ ತಾಳಮದ್ದಳೆ ಸಪ್ತಾಹದ ನಾಲ್ಕನೇ ದಿನ ಹಿರಿಯ ವಿದ್ವಾಂಸ ಮತ್ತು ಯಕ್ಷಗಾನ ತಾಳಮದ್ದಳೆ ಅರ್ಥಧಾರಿ ದಿ| ವಿದ್ವಾನ್ ಕೆ. ಕಾಂತ ರೈ ಮೂಡುಬಿದಿರೆ ಅವರ ಸಂಸ್ಮರಣಾ ಕಾರ್ಯಕ್ರಮ ನಡೆಯಿತು. ಮಂಗಳೂರು ಎಸ್.ಕೆ. ಗೋಲ್ಡ್ ಸ್ಮಿತ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಉಪೇಂದ್ರ ಆಚಾರ್ಯ ಪೆರ್ಡೂರು ಸಂಸ್ಮರಣಾ ಜ್ಯೋತಿ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ‘ಯಕ್ಷಗಾನವನ್ನು ಪ್ರೀತಿಸುವವರು ತಮ್ಮ ಹಿರಿಯರನ್ನು ಯಾವತ್ತೂ ಗೌರವಿಸುತ್ತಾರೆ. ಯಕ್ಷಗಾನ ವಾಙ್ಮಯಕ್ಕೆ ಅಪೂರ್ವ ಕೊಡುಗೆ ನೀಡಿದ ಹಿರಿಯ ಅರ್ಥಧಾರಿ ವಿದ್ವಾನ್ ಕಾಂತ ರೈಯವರ ಬಂಧುಗಳು ಪ್ರತಿ ವರ್ಷ ಅದ್ದೂರಿ ಕಾರ್ಯಕ್ರಮದ ಮೂಲಕ ಅವರನ್ನು ಸ್ಮರಿಸಿಕೊಳ್ಳುತ್ತಿರುವುದು ಇದಕ್ಕೆ ಜ್ವಲಂತ ಸಾಕ್ಷಿ’ ಎಂದರು.

ಉಳ್ಳಾಲ ಬಂಟರ ಸಂಘದ ಅಧ್ಯಕ್ಷ ಕೆ. ರವೀಂದ್ರ ರೈ ಕಲ್ಲಿಮಾರ್ ಸಂಸ್ಮರಣಾ ಭಾಷಣ ಮಾಡಿದರು. ಕೆನರಾ ಪದವಿ ಪೂರ್ವ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಪ್ರೊ. ಜಿ ಶಂಕರ ಶೆಟ್ಟಿ, ಲಯನ್ಸ್ ಕ್ಲಬ್ ರೀಜನಲ್ ಅಂಬಾಸಿಡರ್ ಶ್ರೀನಾಥ್ ಕೊಂಡೆ, ಡಿಂಕಿ ಡೈನ್ ಮಾಲಿಕ ಸ್ವರ್ಣ ಸುಂದರ್, ವಿಶ್ವಾಸ್ ಟ್ರಾನ್ಸ್ ಪೋರ್ಟ್ ನ ಗೋಪಾಲ ಶೆಟ್ಟಿ ಅರಿಬೈಲು, ಬ್ರಿಟಿಷ್ ಬಯಾಲಾಜಿಕಲ್ ಸಂಸ್ಥೆಯ ಸಿ.ಯಸ್. ಭಂಡಾರಿ ಇರಾ, ವಿಶಾಲಕೀರ್ತಿ ರೈ ಮೂಡಬಿದಿರೆ ಮುಖ್ಯ ಅತಿಥಿಗಳಾಗಿದ್ದರು. ನವೆಂಬರ್ 25 ರಂದು ತನ್ನ 90ನೇ ವಯಸ್ಸಿನಲ್ಲಿ ಅಗಲಿ ಹೋದ ಪ್ರಸಿದ್ಧ ಪ್ರಸಂಗಕರ್ತ, ಶಿಕ್ಷಕ ಹಾಗೂ ಹಿರಿಯ ಕಲಾವಿದ ಕಂದಾವರ ರಘುರಾಮ ಶೆಟ್ಟಿ ಅವರ ನಿಧನಕ್ಕೆ ಯಕ್ಷಾಂಗಣದ ವತಿಯಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು. ಯಕ್ಷಗಾನ ಅರ್ಥಧಾರಿ ಪ್ರೊ ಭಾಸ್ಕರ ರೈ ಕುಕ್ಕುವಳ್ಳಿ ನುಡಿನಮನ ಸಲ್ಲಿಸಿ, ದಿ| ರಘುರಾಮ ಶೆಟ್ಟರೊಂದಿಗಿನ ತಮ್ಮ ಬಾಂಧವ್ಯ ಹಾಗೂ ಯಕ್ಷಗಾನ ರಂಗಕ್ಕೆ ಸಂದ ಅವರ ಕೊಡುಗೆಯನ್ನು ಸ್ಮರಿಸಿದರು.
ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯ ಸೇನಾನಿ ಉಳ್ಳಾಲದ ರಾಣಿ ಅಬ್ಬಕ್ಕನ 500 ನೇ ವರ್ಷದ ಸರಣಿ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಕರ್ನಾಟಕ ರಾಜ್ಯ ಮಹಾವಿದ್ಯಾಲಯಗಳ ಶಿಕ್ಷಕ ಸಂಘದ ಪ್ರತಿನಿಧಿ ಡಾ. ಮಾಧವ ಎಂ.ಕೆ. ಅವರನ್ನು ಅಭಿನಂದಿಸಲಾಯಿತು. ಅಲ್ಲದೇ ಕಲಾಪೋಷಕ ಉಮೇಶ ಶೆಣೈ ರಾಮನಗರ ಉಪ್ಪಿನಂಗಡಿ ಅವರನ್ನು ಗೌರವಿಸಲಾಯಿತು. ಯಕ್ಷಾoಗಣದ ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿ, ಸುಧಾಕರ ರಾವ್ ಪೇಜಾವರ ವಂದಿಸಿದರು. ಸಂಚಾಲಕಿ ನಿವೇದಿತಾ ಎನ್. ಶೆಟ್ಟಿ ಬೆಳ್ಳಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಪದಾಧಿಕಾರಿಗಳಾದ ಕೆ. ಲಕ್ಷ್ಮೀನಾರಾಯಣ ರೈ ಹರೇಕಳ, ಸಿದ್ಧಾರ್ಥ ಅಜ್ರಿ ಮತ್ತು ಸುಮಾ ಪ್ರಸಾದ್ ಉಪಸ್ಥಿತರಿದ್ದರು. ಬಳಿಕ ಉಪ್ಪಿನಂಗಡಿ ಶ್ರೀ ಕಾಳಿಕಾಂಬಾ ಯಕ್ಷಕಲಾ ಟ್ರಸ್ಟ್ (ರಿ) ಸಂಯೋಜಿಸಿದ ‘ಶಲ್ಯ ಪರ್ವ’ ತಾಳಮದ್ದಳೆ ಜರಗಿತು.










































































































