ಧರ್ಮ ಶ್ರದ್ದೆಯೊಂದಿಗೆ ಮಕ್ಕಳಲ್ಲಿ ಧರ್ಮ ಜಾಗೃತಿ ಮೂಡಿಸುವ ಕೆಲಸ ಅಗಬೇಕಿದೆ. ಧರ್ಮ ಎಂಬುದು ಚಲನಶೀಲವಾದುದು. ಜಗತ್ತಿನಲ್ಲಿ ಧರ್ಮ ಜಾಗೃತಿ ಇನ್ನೂ ದೊಡ್ಡ ಮಟ್ಟದಲ್ಲಿ ಮಾಡುವ ಅಗತ್ಯತೆ ಇದೆ. ರಾಮಾಯಣ ಮತ್ತು ಮಹಾಭಾರತ ಎರಡು ಮಹಾ ಕಾವ್ಯಗಳಲ್ಲಿ ಸೇವೆ ಮತ್ತು ಧರ್ಮ ಎಂಬುದು ಹೇಗೆ ಎಂಬುದನ್ನು ತಿಳಿಸಿಕೊಡುತ್ತದೆ. ಧರ್ಮ ಜಾಗೃತಿ ಆದರೆ ಪ್ರಜ್ಞಾವಂತ ಸಮಾಜದ ನಿರ್ಮಾಣ ಮತ್ತು ದೇಶ ಸದೃಡವಾಗಬಹುದು. ನಮ್ಮನ್ನು ನಾವು ತಿಳಿದುಕೊಂಡು ಸಮಾಜದಲ್ಲಿ ಉತ್ತಮ ಕಾರ್ಯ ಸಿದ್ದಿಯೊಂದಿಗೆ ಸೇವಾ ಮನೋಭಾವದಿಂದ ನಡೆದರೆ ಶ್ರೇಷ್ಠನಾಗಬಹುದು. ಸಮಾಜಕ್ಕೆ ಆದರ್ಶವಾಗಬಹುದು. ನಾವು ಬಂದ ದಾರಿ ಮತ್ತು ಮುಂದೆ ಹೋಗುವ ದಾರಿ ಎರಡನ್ನೂ ತಿಳಿದುಕೊಂಡು ಸಿಂಹವಾಲೋಕನ ಮಾಡಿ ನಡೆದರೆ ನಮ್ಮ ಬದುಕು ಅಥವಾ ನಾವು ಕಟ್ಟಿದ ಸಂಘಟನೆ ಸರಿ ದಾರಿಯಲ್ಲಿ ನಡೆಯಲು ಸಾದ್ಯ. ಜ್ಞಾನ ನಮ್ಮ ಬೌದ್ಧಿಕ ತಿಳುವಳಿಕೆ ಮತ್ತು ಕಲಿಕೆಯ ಮೇಲೆ ಅವಲಂಬಿತವಾಗಿದೆ. ಸಾಂಪ್ರದಾಯಿಕ ಜ್ಞಾನ ಸಂಪಾದನೆಯಿಂದ ನಮ್ಮ ಪ್ರಾಪಂಚಿಕ ಸ್ಥಾನಮಾನವನ್ನು ಸಂಪಾದಿಸಲು ಸಾದ್ಯವಾಗುತ್ತದೆ. ಸಂಸ್ಕಾರವಿಲ್ಲದ ಶಿಕ್ಷಣ ಅಸಂಪೂರ್ಣ. ಮಕ್ಕಳು ಚಾರಿತ್ರ್ಯವಂತರಾಗಲು, ಗುಣವಂತರಾಗಲು, ಸಂಸ್ಕಾರವಂತರಾಗಲು ಮನೆಯಲ್ಲಿನ ನಮ್ಮ ಧರ್ಮ ಸಂಸ್ಕ್ರತಿ ಏನಿದೆಯೋ ಅದರ ಅರಿವನ್ನು ತಿಳಿಸಿಕೊಡುವ ಜೊತೆಯಲ್ಲಿ ಧರ್ಮದ ಜ್ಞಾನ, ಪ್ರಜ್ಞೆಯನ್ನು ಮೂಡಿಸಬೇಕು. ಇಂದಿನ ಕಾಲದಲ್ಲಿ ಪ್ರೀತಿ ವಾತ್ಸಲ್ಯ ಕಡಿಮೆಯಾಗಲು ಕಾರಣ ಸಂಸ್ಕಾರದ ಕೊರತೆ. ಮಕ್ಕಳನ್ನೇ ಸಂಪತ್ತು ಮಾಡಿಕೊಳ್ಳಿ. ಮಕ್ಕಳಿಗಾಗಿ ಸಂಪತ್ತು ಮಾಡಿ ಇಡಬೇಡಿ. ತಂದೆ ತಾಯಿಯ ಹೃದಯದಲ್ಲಿ ನೋವು, ಕಣ್ಣಿರು ತಂದರೆ ಯಾರಿಗೂ ಸುಖ ಶ್ರೇಯಸ್ಸು ಸಿಗಲು ಸಾದ್ಯವಿಲ್ಲ. ಜೀವ ಭಾವ, ದೇವ ಭಾವ ಎರಡು ಭಾವದಂತೆ ಸೇವಾಭಾವ ಮನೋಭಾವನೆ ನಮ್ಮಲ್ಲಿರಬೇಕು. ಅರ್ಪಣಾ ಭಾವದ ಸೇವೆಯೇ ಶ್ರೇಷ್ಠವಾದುದು ಎಂದು ಒಡಿಯೂರು ಶ್ರೀ ಗುರುದೇವ ಸಂಸ್ಥಾನದ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಜಿಯವರು ಅಶೀರ್ವಚನ ನೀಡಿದರು.

ನವೆಂಬರ್ 9 ರಂದು ಪುಣೆಯ ಬಾಣೇರ್ ನಲ್ಲಿರುವ ಬಂಟರ ಭವನದ ಓಣಿಮಜಲು ಜಗನ್ನಾಥ ಶೆಟ್ಟಿ ಸಾಂಸ್ಕ್ರತಿಕ ಕೇಂದ್ರದಲ್ಲಿ ಜರಗಿದ ಪುಣೆ ಶ್ರೀ ಗುರುದೇವ ಸೇವಾ ಬಳಗ ಮತ್ತು ಶ್ರೀ ವಜ್ರ ಮಾತಾ ಮಹಿಳಾ ವಿಕಾಸ ಕೇಂದ್ರದ 22 ನೇ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಭಗವದ್ಭಕ್ತರನ್ನು ಉದ್ದೇಶಿಸಿ ಅಶೀರ್ವಚನ ನೀಡಿದ ಶ್ರೀಗಳು ಮೌಲ್ಯಯುತವಾದ ಉತ್ತಮ ವಿಚಾರಗಳು ನಮ್ಮಲ್ಲಿರಬೇಕು. ಸೇವಾ ಭಾವ, ಪರೋಪಕಾರ ಭಾವ ನಮ್ಮಲ್ಲಿರಬೇಕು. ಇಂತಹ ಸೇವಾ ಭಾವದ ಸಂಘಟನೆಯೇ ಗುರುದೇವ ಸೇವಾ ಬಳಗ ಮತ್ತು ವಜ್ರಮಾತ ಮಹಿಳಾ ವಿಕಾಸ ಕೇಂದ್ರಗಳು ಇಲ್ಲಿ ದೊಡ್ಡ ಮಟ್ಟದಲ್ಲಿ ಸೇವೆ ಮಾಡುತ್ತಿವೆ. ಮಕ್ಕಳಿಗೆ ನಮ್ಮ ಸಂಸ್ಕ್ರತಿ, ಸಂಸ್ಕಾರ ಕಲಿಸುವ ಕಾರ್ಯ ಮುಂದುವರಿಯಲಿ ಹಾಗೂ ಭಕ್ತಿಯ ಮಾರ್ಗ ಮತ್ತು ಶ್ರದ್ಧೆ ಮೂಡುವಂತೆ ಧಾರ್ಮಿಕ ಕಾರ್ಯಗಳು ಉತ್ತಮವಾಗಿ ನಡೆಯುತ್ತಿದೆ. ಭಗವದ್ಭಕ್ತತರಿಗೆ ಶ್ರೀ ದತ್ತಾತ್ರೇಯ ಶ್ರೀ ಹನುಮಂತನ ಕೃಪೆ ಸದಾ ಇರಲಿ ಎಂದು ನುಡಿದರು.
ಶ್ರೀಗಳನ್ನು ವಾದ್ಯಘೋಷದಿಂದ ಬರಮಾಡಿಕೊಂಡು ಬಳಗದ ಅದ್ಯಕ್ಷರಾದ ಪ್ರಭಾಕರ ವಿ ಶೆಟ್ಟಿ ದಂಪತಿಗಳು ಹೂ ಹಾರ ಹಾಕಿ ಹಾಗೂ ಸಾದ್ವಿ ಶ್ರೀ ಮಾತಾನಂದಮಯಿಯವರನ್ನು ಕೇಂದ್ರದ ಅಧ್ಯಕ್ಷೆ ಜಯಲಕ್ಷ್ಮಿ ಪಿ ಶೆಟ್ಟಿಯವರು ಹೂ ಹಾರ ಹಾಕಿ ಸ್ವಾಗತಿಸಿದರು. ಪಾದುಕಾ ಪೂಜೆಯನ್ನು ಭಕ್ತರ ಪರವಾಗಿ ಪುಣೆಯ ಪ್ರತಿಷ್ಟಿತ ಬಂಟರ ಸಂಘದ ಅಧ್ಯಕ್ಷರಾದ ಶ್ರೀ ಅಜಿತ್ ಹೆಗ್ಡೆ ಮತ್ತು ಬಂಟರ ಸಂಘದ ಮಹಿಳಾ ಕಾರ್ಯಾಧ್ಯಕ್ಷೆ ಶಮ್ಮಿ ಎ ಹೆಗ್ಡೆ ದಂಪತಿಗಳು ನೆರವೇರಿಸಿದರು. ಮುತ್ತೈದೆಯರು ಆರತಿ ಬೆಳಗಿದರು. ವೀಣಾ ಪಿ ಶೆಟ್ಟಿ, ಸುಜಾತಾ ಶೆಟ್ಟಿಯವರು ಆರತಿ ಗೀತೆ ಹಾಡಿದರು. ನಂತರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಸ್ವಾಮೀಜಿ ಮತ್ತು ಗಣ್ಯರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಾದ್ವಿ ಶ್ರೀ ಮಾತಾನಂದಮಯೀಯವರು, ಧಾರ್ಮಿಕ ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗದ ಪುಣೆ ಬಂಟರ ಸಂಘದ ಅಧ್ಯಕ್ಷರಾದ ಅಜಿತ್ ಹೆಗ್ಡೆ ಕೆಂಜಾರು ಗುತ್ತು, ಗೌರವ ಅತಿಥಿಗಳಾಗದ 2016-17ರ ಸಾಲಿನ ಪುಣೆ ಡಿಸ್ಟ್ರಿಕ್ಟ್ ಗವರ್ನರ್, ಲಯನ್ಸ್ ಇಂಟರ್ನ್ಯಾಷನಲ್ ಮತ್ತು ಕನ್ನಡ ಸಂಘದ ಟ್ರಸ್ಟಿ ಎಂಜೆಎಫ್ ಲಯನ್ ಡಾ| ಚಂದ್ರಹಾಸ್ ಶೆಟ್ಟಿ, ಮೀರಾ ಭಯಂದರ್ ತುಳುನಾಡ ಸಮಾಜ ಸೇವಾ ಸಂಘದ ಅಧ್ಯಕ್ಷ, ತುಳು ಸಾಹಿತ್ಯ ಅಕಾಡೆಮಿ ಸಮಿತಿ ಸದಸ್ಯರಾದ ಡಾ| ರವಿರಾಜ್ ಸುವರ್, ಪುಣೆ ದೇವಾಡಿಗ ಸಂಘದ ಅಧ್ಯಕ್ಷ ಸತೀಶ್ ದೇವಾಡಿಗ, ಪುಣೆ ಬಳಗದ ಅಧ್ಯಕ್ಷರಾದ ಪ್ರಭಾಕರ ಶೆಟ್ಟಿ, ಮಾಜಿ ಅಧ್ಯಕ್ಷರಾದ ಸದಾನಂದ ಕೆ ಶೆಟ್ಟಿ, ಪ್ರಧಾನ ಕಾರ್ಯ ದರ್ಶಿ ರೋಹಿತ್ ಶೆಟ್ಟಿ ನಗ್ರಿಗುತ್ತು, ಪುಣೆ ಕನ್ನಡ ಸಂಘದ ಅಧ್ಯಕ್ಷ ಕುಶಲ್ ಹೆಗ್ಡೆ, ಪುಣೆ ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ಶ್ರೀಮತಿ ಜಯಲಕ್ಷ್ಮಿ ಪಿ ಶೆಟ್ಟಿಯವರು ಉಪಸ್ಥಿತರಿದ್ದರು. ಶೋಭಾ ಯು ಶೆಟ್ಟಿ ಮತ್ತು ಸರೋಜಿನಿ ಡಿ ಬಂಗೇರ ಪ್ರಾರ್ಥನೆಗೈದರು.
ಪುಣೆ ಬಳಗದ ಪ್ರಧಾನ ಕಾರ್ಯದರ್ಶಿ ರೋಹಿತ್ ಶೆಟ್ಟಿ ನಗ್ರಿಗುತ್ತುರವರು ಸ್ವಾಗತಿಸಿದರು. ಅಥಿತಿ ಗಣ್ಯರನ್ನು ಬಳಗದ ಅಧ್ಯಕ್ಷರಾದ ಪ್ರಭಾಕರ ಶೆಟ್ಟಿ, ಪ್ರಮುಖರಾದ ಉಷಾಕುಮಾರ್ ಶೆಟ್ಟಿ, ನಾರಾಯಣ ಶೆಟ್ಟಿ, ರಂಜಿತ್ ಶೆಟ್ಟಿ, ಉಮೇಶ್ ಶೆಟ್ಟಿಯವರು ಫಲ ತಾಂಬೂಲ ನೀಡಿ ಗೌರವಿಸಿದರು ಹಾಗೂ ಪೂಜ್ಯ ಸ್ವಾಮೀಜಿಯವರು ಅತಿಥಿ ಗಣ್ಯರಿಗೆ ಫಲ ಮಂತ್ರಾಕ್ಷತೆ ನೀಡಿ ಹರಸಿದರು. ಬಳಗದ ಅದ್ಯಕ್ಷರಾದ ಪ್ರಭಾಕರ ಶೆಟ್ಟಿಯವರು ಪ್ರಾಸ್ತಾವಿಕವಾಗಿ ಮಾತಾನಾಡಿದರು. ಸಾದ್ವಿ ಮಾತಾನಂದಮಯಿ ಅಶೀರ್ವಚನ ನೀಡಿದರು. ವೇದಿಕೆಯಲ್ಲಿದ್ದ ಗಣ್ಯರು ಶುಭ ನುಡಿಗಳನ್ನಾಡಿದರು. ಈ ಸಂದರ್ಭದಲ್ಲಿ ಯುವ ವೈದ್ಯರುಗಳಾದ ಡಾ. ಪ್ರಖ್ಯಾತ್ ಪ್ರಭಾಕರ್ ಶೆಟ್ಟಿ, ಡಾ. ವಿಜಯಲಕ್ಷ್ಮಿ ಪ್ರಜ್ವಲ್ ಶಾಂತಿ, ಡಾ. ಖುಶಿ ಉಷಾಕುಮಾರ್ ಶೆಟ್ಟಿ, ಡಾ. ಶ್ರದ್ಧಾ ನಾಗರಾಜ್ ಶೆಟ್ಟಿಯವರನ್ನು ಒಡಿಯೂರು ಶ್ರೀಗಳ ಆಶೀರ್ವಾದ ಗುರು ಪ್ರಸಾದದೊಂದಿಗೆ ಬಳಗದ ವತಿಯಿಂದ ಶಾಲು, ಫಲಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಬಳಗದ ಪ್ರಮುಖ ಸೇವಾಕರ್ತರಾದ ಸಿದ್ದಾಂತ್ ಸುಧಾಕರ್ ಶೆಟ್ಟಿಯವರನ್ನು ಗೌರವಿಸಲಾಯಿತು. ವಿವಿಧ ಕ್ಷೇತ್ರದ ಗಣ್ಯರು ಸಂಘ ಸಂಸ್ಥೆಗಳ ಅಧ್ಯಕ್ಷರು ಪದಾಧಿಕಾರಿಗಳನ್ನು ಶ್ರೀಗಳು ಮಂತ್ರಾಕ್ಷತೆ ನೀಡಿ ಹರಸಿದರು. ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಗುರುದೇವ ಸೇವಾ ಬಳಗ ಮತ್ತು ವಜ್ರಮಾತ ಮಹಿಳಾ ವಿಕಾಸ ಕೇಂದ್ರದ ಸದಸ್ಯೆಯರಿಂದ ಭಜನೆ, ಕಲ್ಲಡ್ಕ ವಿಟಲ್ ನಾಯಕ್ ಮತ್ತು ತಂಡದವರಿಂದ ಗೀತಾ ಸಾಹಿತ್ಯ ಸಂಭ್ರಮ ಮತ್ತು ಪುಣೆಯ ಕಲಾವಿದರು, ಮಕ್ಕಳು ಮತ್ತು ಮಹಿಳೆಯರಿಂದ ಶ್ರೀಮತಿ ಶ್ವೇತಾ ಎಚ್ ಮೂಡಬಿದ್ರಿ ನಿರ್ದೇಶನದಲ್ಲಿ ಭಕ್ತಿ ನಾಟ್ಯ ವೈಭವ ಎಂಬ ಪಂಡರಾಪುರ ಕ್ಷೇತ್ರ ಬಣ್ಣನೆಯ ವಿಶೇಷ ಕಾರ್ಯಕ್ರಮ ನಡೆಯಿತು. ಮುಂಬಯಿ, ನಾಸಿಕ್, ಔರಂಗಾಬಾದ್ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ ಭಗವದ್ಭಕ್ತರು ಪ್ರಸಾದ ಸ್ವೀಕರಿಸಿದರು. ಈ ವಾರ್ಷಿಕೋತ್ಸವದ ಯಶಸ್ವಿಗೆ ಪುಣೆ ಬಳಗದ ಸದಸ್ಯರು ಹಾಗೂ ಮಹಿಳಾ ಕೇಂದ್ರದ ಸದಸ್ಯೆಯರು ಶ್ರಮಿಸಿದರು. ಶ್ರೀಮತಿ ಅಕ್ಷತಾ ಸುಜಿತ್ ಶೆಟ್ಟಿ ಮತ್ತು ತಾರನಾಥ್ ಶೆಟ್ಟಿ ಮಡಂತ್ಯಾರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಚಿತ್ರ, ವರದಿ: ಹರೀಶ್ ಮೂಡಬಿದ್ರಿ, ಪುಣೆ








































































































