ಟೀಮ್ ಯುವ ಬ್ರಿಗೇಡ್ ಮೀರಾ ಭಯಂದರ್ ಎನ್ನುವ ಈ ಸಂಸ್ಥೆಯು ಸಾಮಾಜಿಕ, ಧಾರ್ಮಿಕ, ಸಾಂಸ್ಕ್ರತಿಕ ಹಾಗೂ ಶೈಕ್ಷಣಿಕ ಸೇವಾ ಕಾರ್ಯಗಳನ್ನು ಮಾಡುತ್ತಾ ಬಂದಿರುವ ಒಂದು ಬಲಿಷ್ಠ ಸಂಘಟನೆ ಎಂದು ಅಭಿಮಾನದೊಂದಿಗೆ ಹೇಳುವಂತಿದೆ. ಇದಕ್ಕೆ ಇವರ ಕಾರ್ಯವೈಖರಿ ನಿದರ್ಶನ. ಅದರಲ್ಲೂ ಕಲೆಗೆ ನೀಡುವ ಪ್ರೋತ್ಸಾಹದ ಜೊತೆಗೆ ಇಂದು ಮುಂಬಯಿಯಲ್ಲಿ ಅದ್ದೂರಿಯ ಯಕ್ಷಗಾನ ಪ್ರದರ್ಶನ ನಡೆಯುವುದಿದ್ದರೆ ಅದರ ಸಂಪೂರ್ಣ ಶ್ರೇಯಸ್ಸು ಟೀಮ್ ಯುವ ಬ್ರಿಗೇಡ್ ಮೀರಾ ಭಯಂದರ್ ಬಳಗಕ್ಕೆ ಸಲ್ಲುವಂತಿದೆ ಎಂದು ಬಂಟರ ಸಂಘ ಮುಂಬಯಿ ಇದರ ಉಪಾಧ್ಯಕ್ಷ ಮಹೇಶ್ ಎಸ್ ಶೆಟ್ಟಿಯವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಅವರು ಅಕ್ಟೋಬರ್ 11ರ ಶನಿವಾರ ರಾತ್ರಿ ಮೀರಾ ಭಯಂದರ್ ರೋಡ್ ನ ಮೇವರ್ ವಾಟಿಕಾ ಸಭಾಗೃಹದಲ್ಲಿ ಮಹಾರಾಷ್ಟ್ರ ರಾಜ್ಯದ ಯಕ್ಷಗಾನ ಬಯಲಾಟದ ಇತಿಹಾಸದಲ್ಲೇ ಯಕ್ಷಗಾನ ಪ್ರದರ್ಶನಕ್ಕೆ ಜನಸಾಗರದ ಮೂಲಕ ದಾಖಲೆ ಬರೆದ ಟೀಮ್ ಯುವ ಬ್ರಿಗೇಡ್ ಮೀರಾ ಭಯಂದರ್ ವತಿಯಿಂದ ಪ್ರಖರ ಹಿಂದುತ್ವವಾದಿ ಮಹೇಶ್ ಶೆಟ್ಟಿ ತೆಳ್ಳಾರು ಕುಡುಪುಲಾಜೆಯರವರ ಮಾರ್ಗದರ್ಶನದಲ್ಲಿ ಬಿಜೆಪಿ ನಾಯಕ ಸಚ್ಚಿದಾನಂದ ಶೆಟ್ಟಿಯವರ ನೇತೃತ್ವದಲ್ಲಿ ಅರುಣ್ ಶೆಟ್ಟಿ ಪಣಿಯೂರು ಇವರ ಮುಂದಾಳತ್ವದಲ್ಲಿ ಯಕ್ಷ ಕಾಮಧೇನು ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರ ಗಾನಾಮೃತದೊಂದಿಗೆ ಪುಷ್ಪಾಲಂಕಾರದಿಂದ ಕಂಗೊಳಿಸಿದ ತುಳುನಾಡಿನ ಶೈಲಿಯ ರಂಗಸ್ಥಳದಲ್ಲಿ ಸ್ವರ್ಗೀಯ ಕೀರ್ತಿಶೇಷ ಡಾ| ಶ್ರೀಧರ್ ಭಂಡಾರಿ ಸ್ಮರಣಾರ್ಥ ವೇದಿಕೆಯಲ್ಲಿ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಕೃಪಾಪೋಷಿತ ಯಕ್ಷಗಾನ ಮಂಡಳಿ ಪಾವಂಜೆ ಮೇಳದ ಸುಪ್ರಸಿದ್ದ ಕಲಾವಿದರ ಸಂಗಮದಲ್ಲಿ ಏಳನೇ ವರ್ಷದ ಅದ್ದೂರಿಯಲ್ಲಿ ಜರಗಿದ “ಶ್ರೀ ದೇವಿ ಮಹಾತ್ಮೆ” ಯಕ್ಷಗಾನ ಪ್ರದರ್ಶನದ ಮಧ್ಯೆ ಜರಗಿದ ಸಮಾರೋಪ ಸಮಾರಂಭದ ಮುಖ್ಯ ಅತಿಥಿ ಸ್ಥಾನವನ್ನು ವಹಿಸಿ ಮಾತನಾಡುತ್ತಿದ್ದರು. ಇದೇ ವೇಳೆ ಮಹೇಶ್ ಶೆಟ್ಟಿ ತೆಳ್ಳಾರು ಕುಡುಪುಲಾಜೆಯವರಿಗೆ ಹಿಂದುತ್ವದ ಬಗ್ಗೆ ಇರುವ ಅಭಿಮಾನ, ಗೌರವದ ಬಗ್ಗೆ ಪಟ್ಲ ಸತೀಶ್ ಶೆಟ್ಟಿಯವರ ಅನುಪಮ ಯಕ್ಷಗಾನ ಸೇವೆಯ ಬಗ್ಗೆ ಹಾಗೆಯೇ ತ್ರಿರಂಗ ಸಂಗಮದ ರೂವಾರಿಗಳಾದ ಕರ್ನೂರು ಮೋಹನ್ ರೈ, ಅಶೋಕ್ ಪಕ್ಕಳ ಮತ್ತು ನವೀನ್ ಶೆಟ್ಟಿ ಇನ್ನಬಾಳಿಕೆ ಇವರ ಕಲಾ ಸಂಘಟಣೆಯ ಬಗ್ಗೆ ಮಹೇಶ್ ಎಸ್ ಶೆಟ್ಟಿಯವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಇನ್ನೋರ್ವ ಪ್ರಮುಖ ಅತಿಥಿ ಬಂಟರ ಸಂಘ ಮುಂಬಯಿಯ ಪೊವಾಯಿ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ರತ್ನಾಕರ್ ಶೆಟ್ಟಿ ಮುಂಡ್ಕೂರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸುತ್ತಾ, ಯುವ ಬ್ರಿಗೇಡ್ ಇದೊಂದು ಹಿಂದೂಗಳಿಗೆ ನವ ಚೈತನ್ಯ ಶಕ್ತಿಯನ್ನು ತುಂಬುವ ಸಂಘಟಣೆಯಾಗಿದೆ. ಅದರಲ್ಕೂ ಹಿಂದೂ ಬಾಂಧರನ್ನೆಲ್ಲರನ್ನೂ ಒಗ್ಗೂಡಿಸುವ ಒಂದು ಮಹತ್ತರ ಶಕ್ತಿ ಸಾಮರ್ಥ್ಯವನ್ನು ಹೊಂದಿದ ನಾಯಕ ನಮ್ಮಲ್ಲಿದ್ದರೆ ಅದು ಮಹೇಶ್ ಶೆಟ್ಟಿ ತೆಳ್ಳಾರು ಕುಡುಪುಲಾಜೆ. ಅಂತಹ ನಾಯಕನ ಮಾರ್ಗದರ್ಶನದಲ್ಲಿ ಈ ಸಂಸ್ಥೆ ಮುನ್ನಡೆಯುತ್ತಿರುವುದು ಅಭಿಮಾನದ ಸಂಗತಿ ಎಂದೆನ್ನುತ್ತಾ, ಛತ್ರಪತಿ ಶಿವಾಜಿ ಮಹಾರಾಜ ಪ್ರಶಸ್ತಿಯನ್ನು ಸ್ಬೀಕರಿಸಿದ ಡಾ. ಸುರೇಶ್ ರಾವ್ ರವರನ್ನು ಯಕ್ಷಗಾನ ಕ್ಷೇತ್ರದಲ್ಲಿ ಮಹತ್ತರ ಸಾಧನೆಗೈದ ಪಟ್ಲ ಸತೀಶ್ ಶೆಟ್ಟಿಯವರನ್ನು ಈ ಸಂದರ್ಭದಲ್ಲಿ ಅಭಿನಂದಿಸಿದರು. ಗೌರವಾನ್ವಿತ ಅತಿಥಿ ಸ್ಥಾನದಲ್ಲಿ ಉಪಸ್ಥಿತರಿದ್ದವರಲ್ಲಿ ಬೊಂಬೇ ಬಂಟ್ಸ್ ಅಸೋಸಿಯೇಶನ್ ಇದರ ನಿಕಟಪೂರ್ವ ಅಧ್ಯಕ್ಷ ಸಿಎ ಸುರೇಂದ್ರ ಕೆ. ಶೆಟ್ಟಿಯವರು ಮಾತನಾಡುತ್ತಾ, ನಮ್ಮ ಭಾರತೀಯ ಧಾರ್ಮಿಕ ಸಂಸ್ಕೃತಿಯ ಸಂದೇಶವನ್ನು ಸಾರುವ ಒಂದು ದೇವಿ ಕಲೆಯೊಂದಿದ್ದರೆ ಅದು ಯಕ್ಷಗಾನ. ದೇವಿಗೆ ಅತೀ ಪ್ರೀಯವಾದ ಕಲೆಯೂ ಹೌದು. ಈ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಯುವ ಬ್ರೀಗೇಡ್ ನವರ ಕಾರ್ಯ ಶ್ಲಾಘನೀಯ ಎಂದರು.
ಮತ್ತೋರ್ವ ಅತಿಥಿ ಮಾನವ ಸೇವಾ ಸಂಘ ಮಹಾರಾಷ್ಟ್ರ ಅಧ್ಯಕ್ಷ ಡಾ| ಹರೀಶ್ ಶೆಟ್ಟಿಯವರು ಮಾತನಾಡುತ್ತಾ, ಇಂದಿನ ಕಾಲಘಟ್ಟದಲ್ಲಿ ನಮ್ಮಹಿಂದೂ ಸಮಾಜವನ್ನು ಬಲಪಡಿಸುವ ಸನಾತನ ಧರ್ಮವನ್ನು ಉಳಿಸಿ ಬೆಳೆಸುವ ಅಗತ್ಯವಿದೆ. ಈ ಕಾರ್ಯದಲ್ಲಿ ಯುವ ಬ್ರಿಗೇಡ್ ನವರ ಕಾರ್ಯ ಶ್ಲಾಘನೀಯ ಎಂದರು. ಅತಿಥಿ ಮೆಜೆಸ್ಟಿಕ್ ಸೂಟ್ಸ್ ಇದರ ಡೈರೆಕ್ಟರ್ ಉದಯ ಶೆಟ್ಟಿ ಪೆಲತ್ತೂರು ಇವರು ಮಾತನಾಡುತ್ತಾ, ಕರಾವಳಿಯ ಕೆಲವೊಂದು ಯುವಕರನ್ನು ಒಗ್ಗೂಡಿಸಿಕೊಂಡು ಹಿರಿಯರನ್ನು ಮಾರ್ಗದರ್ಶಕರನ್ನಾಗಿರಿಸಿಕೊಂಡು ಕಿರಿಯರಿಗೆ ಮಾರ್ಗದರ್ಶನವನ್ನು ನೀಡುತ್ತಾ, ಹಿಂದೂ ಧರ್ಮ ಸಂಸ್ಕೃತಿಯನ್ನು ಸಾರುವ ಯಾವುದೇ ಕಾರ್ಯಕ್ರಮವಿದ್ದರೆ ಅಲ್ಲಿ ಸ್ಬಯಂ ಸೇವಕರಾಗಿ ಸೇವೆ ಸಲ್ಲಿಸುವ ಒಂದು ಸಂಘಟಣೆ ಇದ್ದರೆ ಅದು ಯುವ ಬ್ರಿಗೇಡ್ ಎನ್ನಲು ತುಂಬಾ ಸಂತೋಷವಾಗುತ್ತದೆ ಎಂದು ಸಂಸ್ಥೆಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಡಾ. ಸುರೇಶ್ ರಾವ್ ರವರಿಗೆ ಪೇಟ ತೊಡಿಸಿ ಶಾಲು ಹೊದಿಸಿ, ಫಲಪುಷ್ಪ ನೆನಪಿನ ಕಾಣಿಕೆ, ಸನ್ಮಾನ ಪತ್ರದಿಂದ ಕೂಡಿದ ಛತ್ರಪತಿ ಶಿವಾಜಿ ಮಹಾರಾಜ ಪ್ರಶಸ್ತಿ ಪುರಸ್ಕಾರವನ್ನು ನೀಡಿ ಅದ್ದೂರಿಯಾಗಿ ಸನ್ಮಾನಿಸಲಾಯಿತು. ಭಾಗವತಿಕೆ ಕ್ಷೇತ್ರದಲ್ಲಿ 25 ವರ್ಷವನ್ನು ಪೂರೈಸಿ ಬೆಳ್ಳಿ ಹಬ್ಬದ ಸಂಭ್ರದಲ್ಲಿರುವ ಯಕ್ಷಧ್ರುವ ಫೌಂಡೇಶನ್ ನ ಸಂಸ್ಥಾಪಕ ಭಾಗವತ ಪಟ್ಲ ಸತೀಶ್ ಶೆಟ್ಟಿಯವರನ್ನು ಸಂಸ್ಥೆಯ ವತಿಯಿಂದ ಅತಿಥಿ ಗಣ್ಯರ ಹಸ್ತದಿಂದ ಶಾಲು ಹೊದಿಸಿ, ಹೂಗುಚ್ಚ ನೀಡಿ ಗೌರವಿಸಲಾಯುತು. ಸಾಯಿ ಪ್ಯಾಲೇಸ್ ಗ್ರೂಪ್ ಅಪ್ ಹೊಟೇಲ್ ನ ಸಿಎಂಡಿ ರವಿ ಸುಂದರ್ ಶೆಟ್ಟಿ, ಮಹೇಶ್ ಶೆಟ್ಟಿ ಕುಡುಪುಲಾಜೆಯವರ ಅನುಪಸ್ಥಿತಿಯಲ್ಲಿ ಅವರ ಧರ್ಮಪತ್ನಿ ಜಯಶ್ರೀ ಮಹೇಶ್ ಶೆಟ್ಟಿ, ಡಾ| ದಿ. ಶ್ರೀಧರ್ ಭಂಡಾರಿಯವರ ಸಹಧರ್ಮಿಣಿ ಉಷಾ ಶ್ರೀಧರ್ ಭಂಡಾರಿ, ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಬಾಬಾ ರಂಜನ್ ಶೆಟ್ಟಿಯವರನ್ನು ಈ ಸಂದರ್ಭದಲ್ಲಿ ಶಾಲು ಹೊದಿಸಿ, ಹೂಗುಚ್ಚ ನೀಡಿ ಗೌರವಿಸಲಾಯಿತು.
ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಇತರ ಅತಿಥಿ ಗಣ್ಯರ ಸಾಲಿನಲ್ಲಿ ಹಿಪ್ರೋ ಟೂಲಿಂಗ್ ಸಿಸ್ಟಮ್ ನ ಸಿ.ಎಮ್.ಡಿ ಕಾಶಿ ಮೀರಾ ಭಾಸ್ಕರ್ ಶೆಟ್ಟಿ, ಅಶೋಕ್ ಇಂಡಸ್ಟ್ರೀಸ್ ವಸಾಯಿಯ ಸಿ.ಎಮ್.ಡಿ ಅಶೋಕ್ ಶೆಟ್ಟಿ, ರಘು ಸಿಯ ಉಡುಪಿ ಬ್ರಿಸ್ಟ್ರೋ ಇಲ್ಲಿನ ನಿರ್ದೇಶಕರಾದ ರಾಜೇಶ್ ಶೆಟ್ಟಿ ತೆಳ್ಳಾರ್, ಡಿ.ಎಸ್.ಪಿ ಎಂಟರ್ಪ್ರೈಸಸ್ ನ ನಿರ್ದೇಶಕರಾದ ಮಿಜಾರು ಪ್ರಸಾದ್ ನಿಲಯ ಶಕ್ತಿ ಪ್ರಸಾದ್ ಶೆಟ್ಟಿ, ರಿಗಾಲಿಯ ಗ್ರೂಪ್ ಅಪ್ ಹೊಟೇಲ್ಸ್ ನ ಸಾಯಿಪ್ರಸಾದ್ ಪೂಂಜಾ, ಕಂಬಳ ಕ್ಷೇತ್ರದಲ್ಲಿ ತಮ್ಮನ್ನು ತಾವು ಗುರುತಿಸಿ ಕೊಂಡ ಮಹಿಳೆ ಮಲ್ಲಿಕಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಈ ಎಲ್ಲಾ ಅತಿಥಿ ಗಣ್ಯರನ್ನು ಟೀಮ್ ಯುವ ಬ್ರಿಗೇಡ್ ನ ಅಧ್ಯಕ್ಷ ಅರುಣ್ ಶೆಟ್ಟಿ ಪಣಿಯೂರು, ಪದಾಧಿಕಾರಿಗಳಾದ ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿ ಗುತ್ತು, ಸುರೇಶ್ ಶೆಟ್ಟಿ ಗಂಧರ್ವ ಸೇರಿದಂತೆ ಕಾರ್ಯಕಾರಿ ಸಮಿತಿಯವರು, ಬಳಗದ ಸದಸ್ಯರು ಶಾಲು ಹೊದಿಸಿ, ಹೂಗುಚ್ಚ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಮಹೇಶ್ ಶೆಟ್ಟಿ ತೆಳ್ಳಾರ್ ರವರ ಸಹಧರ್ಮಿಣೆ ಜಯಶ್ರೀ ಶೆಟ್ಟಿ ಅತಿಥಿ ಗಣ್ಯರನ್ನು ಪರಿಚಯಿಸಿ, ಸಂಪೂರ್ಣ ಸಭಾ ಕಾರ್ಯಕ್ರಮವನ್ನು ತ್ರಿರಂಗ ಸಂಗಮದ ರೂವಾರಿಗಳಲ್ಲೊರ್ವರಾದ ಅಶೋಕ್ ಪಕ್ಕಳರವರು ನಿರೂಪಿಸಿದರು. ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿ ಗುತ್ತು ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಅದ್ದೂರಿಯ “ದೇವಿ ಮಹಾತ್ಮೆ” ಯಕ್ಷಗಾನವು ಸಾವಿರಾರು ಸಂಖ್ಯೆಯಲ್ಲಿ ನೆರೆದ ಯಕ್ಷ ಕಲಾ ರಸಿಕರ ಸಮ್ಮುಖದಲ್ಲಿ ಪ್ರದರ್ಶಿಸಲ್ಪಟ್ಟಿತು. ಕಾರ್ಯಕ್ರಮದ ಕೊನೆಯಲ್ಲಿ ಪ್ರೀತಿ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಚಿತ್ರ, ವರದಿ : ವೈ ಟಿ ಶೆಟ್ಟಿ ಹೆಜಮಾಡಿ