ಮುಂಬೈ ಮಹಾನಗರದ ಪ್ರತಿಷ್ಠಿತ ಸಾಮಾಜಿಕ ಸಂಸ್ಥೆ ಬೋಂಬೆ ಬಂಟ್ಸ್ ಅಸೋಸಿಯೇಷನ್ ನ ಮಹಿಳಾ ವಿಭಾಗದ ಆಯೋಜನೆಯಲ್ಲಿ ನವಿ ಮುಂಬೈಯ ಜೂಹಿನಗರದ ಬಂಟ್ಸ್ ಸೆಂಟರ್ ನಲ್ಲಿ ವಸ್ತ್ರಾಭರಣಗಳ ಪ್ರದರ್ಶನ ಮತ್ತು ಮಾರಾಟವು ಬೋಂಬೆ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷ ಅಡ್ವೋಕೇಟ್ ಡಿ.ಕೆ ಶೆಟ್ಟಿ ಅವರ ನೇತೃತ್ವ ಹಾಗೂ ಅಧ್ಯಕ್ಷತೆಯಲ್ಲಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಂತ ನಾರಾಯಣ ಶೆಟ್ಟಿ ಅವರ ನೇತೃತ್ವ ಹಾಗೂ ಪದಾಧಿಕಾರಿಗಳ ಮುಂದಾಳತ್ವದೊಂದಿಗೆ ಅಕ್ಟೋಬರ್ 11 ರಂದು ನಡೆಯಿತು. ಕಾರ್ಯಕ್ರಮವನ್ನು ಬೋಂಬೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಅಡ್ವೋಕೇಟ್ ಡಿ.ಕೆ ಶೆಟ್ಟಿ, ಹೇಮಲತಾ ಡಿ.ಕೆ ಶೆಟ್ಟಿ, ಶಾಲಿನಿ ಸತೀಶ್ ಶೆಟ್ಟಿ ಅವರು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿದರು.

ಬೋಂಬೆ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷ ಅಡ್ವೋಕೇಟ್ ಡಿ.ಕೆ ಶೆಟ್ಟಿ ಅವರು ಮಾತನಾಡಿ, ಅಸೋಸಿಯೇಷನ್ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪ್ರಚಲಿತವಾಗಿದೆ. ಮಹಿಳಾ ವಿಭಾಗದ ಶಾಂತ ಎನ್ ಶೆಟ್ಟಿ ಮತ್ತು ಅವರ ತಂಡದಿಂದ ವಿವಿಧ ಪ್ರಕಾರಗಳ ಸೀರೆಗಳು, ವಜ್ರಾಭರಣಗಳು ಹಾಗೂ ದಿನೋಪಯೋಗಿ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಅಭಿನಂದನೆಯ. ಮಹಿಳೆಯರಿಗೆ ಸೀರೆಯೇ ಭೂಷಣ. ವಿಧವಿಧದ ಸೀರೆ ಮತ್ತು ಆಭರಣಗಳನ್ನು ಧರಿಸುವುದರಿಂದ ಮಹಿಳೆಯರ ಸೌಂದರ್ಯವೂ ಇಮ್ಮಡಿಯಾಗುತ್ತದೆ ಎಂದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಂತ ನಾರಾಯಣ ಶೆಟ್ಟಿ ಅವರು ಮಾತನಾಡಿ, ಇನ್ನು ಕೆಲವೇ ದಿನಗಳಲ್ಲಿ ದೀಪಾವಳಿಯ ಪರ್ವಕಾಲದ ಹಬ್ಬ ಆಗಮನವಾಗುವುದು. ಈ ಸಂದರ್ಭ ದೀಪಗಳನ್ನು ಬೆಳಗುವುದರೊಂದಿಗೆ ಪ್ರತಿಯೊಂದು ಮನೆಗಳಲ್ಲಿ ಹೊಸ ಬಟ್ಟೆಗಳನ್ನು, ಸೀರೆಗಳನ್ನು ಕೊಂಡುಕೊಳ್ಳುವುದು ವಾಡಿಕೆ. ಇದಲ್ಲದೆ ಬಂಗಾರದ ಆಭರಣಗಳನ್ನು ಕೂಡಾ ಕೊಂಡುಕೊಳ್ಳುತ್ತಾರೆ. ನಮ್ಮ ಮಹಿಳಾ ವಿಭಾಗದ ಆಯೋಜನೆಯಲ್ಲಿ ಟಿಡಿಎಫ್ ಡೈಮಂಡ್ ಆಭರಣದ ಅಂಗಡಿ ಮತ್ತು ವಿವಿಧ ಪ್ರಕಾರದ ಸೀರೆಗಳ ಅಂಗಡಿಗಳನ್ನು ಇಲ್ಲಿ ತೆರೆಯಲಾಗಿದೆ. ಇವುಗಳನ್ನು ಖರೀದಿಸಿ ಪ್ರದರ್ಶನ ಮತ್ತು ಮಾರಾಟದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸುವೆನು ಎಂದರು.
ಅತಿಥಿಗಳಾಗಿ ಆಗಮಿಸಿದ ಶಾಲಿನಿ ಸತೀಶ್ ಶೆಟ್ಟಿ ಅವರು ಮಾತನಾಡಿ, ಹಿಂದಿಯಲ್ಲಿ ‘ಸೋಲಾ ಸಿಂಗಾರ’ ಎಂಬಂತೆ 16 ಪ್ರಕಾರದ ಶೃಂಗಾರಗಳನ್ನು ಮಹಿಳೆಯರು ಮಾಡಬಹುದಾಗಿದೆ. ಬೋಂಬೆ ಬಂಟ್ಸ್ ಅಸೋಸಿಯೇಷನ್ ನ ಮಹಿಳಾ ವಿಭಾಗದವರು ಮಹಿಳೆಯರನ್ನು ಸಿಂಗಾರಿಸಬಹುದಾದಂತಹ ಸೀರೆ, ಆಭರಣ ಇನ್ನಿತರ ವಸ್ತುಗಳು ಸೇರಿದಂತೆ ಅನೇಕ ಪ್ರಕಾರದ ವಸ್ತುಗಳನ್ನು ಇಲ್ಲಿ ಪ್ರದರ್ಶನಕ್ಕೆ ಮತ್ತು ಮಾರಾಟಕ್ಕಿಟ್ಟಿದ್ದಾರೆ. ಎಲ್ಲರೂ ಇದರ ಸದುಪಯೋಗವನ್ನು ಪಡೆಯಬೇಕು ಎಂದರು. ಅತಿಥಿಗಳಾಗಿ ಆಗಮಿಸಿದ ಹೇಮಲತಾ ಡಿ.ಕೆ ಶೆಟ್ಟಿಯವರು ಮಾತನಾಡಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಂತ ಎನ್ ಶೆಟ್ಟಿ ಹಾಗೂ ಅವರ ತಂಡದವರಿಂದ ಇಂದು ಇಲ್ಲಿ ಸೀರೆ ಮತ್ತು ಆಭರಣಗಳ ಪ್ರದರ್ಶನ ಮತ್ತು ಮಾರಾಟ ಕಾರ್ಯಕ್ರಮ ನಡೆಯುತ್ತಿರುವುದು ಉತ್ತಮ ಬೆಳವಣಿಗೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಇದು ನಡೆಯುತ್ತಿರುವುದು ಉತ್ತಮವಾಗಿದೆ. ಮುಂಗಡವಾಗಿ ಎಲ್ಲರಿಗೂ ದೀಪಾವಳಿ ಹಬ್ಬದ ಹಾಗೂ ನೂತನ ವರ್ಷದ ಶುಭಾಶಯಗಳು ಎಂದರು.
ಉದ್ಘಾಟನಾ ಸಂದರ್ಭ ಅಡ್ವೋಕೇಟ್ ಡಿ.ಕೆ ಶೆಟ್ಟಿ, ಕಿಶೋರ್ ಶೆಟ್ಟಿ ಐಕಳ, ಅಡ್ವೋಕೇಟ್ ಶೇಖರ್ ಶೆಟ್ಟಿ, ಸಿಎ ವಿಶ್ವನಾಥ್ ಶೆಟ್ಟಿ, ಶ್ರೀಧರ್ ಶೆಟ್ಟಿ, ಸತೀಶ್ ಶೆಟ್ಟಿ, ಶಶಿಧರ್ ಶೆಟ್ಟಿ ನಂದಳಿಕೆ, ಶೈಲಜಾ ಅಶೋಕ್ ಶೆಟ್ಟಿ, ಅಡ್ವೋಕೇಟ್ ಗುಣಕರ್ ಶೆಟ್ಟಿ, ದಯಾನಂದ ಶೆಟ್ಟಿ ಮತ್ತು ಮಹಿಳಾ ವಿಭಾಗದ ಶಾಂತ ನಾರಾಯಣ ಶೆಟ್ಟಿ, ಸಹಾನಿ ಶೆಟ್ಟಿ, ಉಷಾ ಆರ್ ಶೆಟ್ಟಿ, ನಾಗವೇಣಿ ಶ್ರೀಧರ್ ಶೆಟ್ಟಿ,ರೇಖಾ ಗುಣಕರ ಶೆಟ್ಟಿ, ಸುನೀತಾ ಸದಾನಂದ ಶೆಟ್ಟಿ, ಶ್ರೀಮತಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಚಿತ್ರ, ವರದಿ : ಗುರುದತ್ತ್ ಪೂಂಜಾ ಮುಂಡ್ಕೂರು