ಮನುಷ್ಯನ ಅಸ್ತಿತ್ವ ಇರುವುದೇ ಭಗವಂತನ ಕೈಯಲ್ಲಿ. ದೇವರ ಅನುಗ್ರಹದಿಂದ ನಮ್ಮ ಜೀವನ ಸಾರ್ಥಕ ಬದುಕನ್ನು ಕಾಣಬಹುದು. ಶರವನ್ನರಾತ್ರಿಯ ವಿಜಯ ದಶಮಿಯ ಪಾವಿತ್ರತೆಯ ಈ ಶುಭ ಅವಸರದ ಸಂದರ್ಭದಲ್ಲಿ ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ಯುವ ವಿಭಾಗದವರು ಆಯೋಜಿಸಿದ ಈ ಕಾರ್ಯಕ್ರಮ ಶ್ಲಾಘನೀಯ. ಮುಂಬಯಿ ಬಂಟರ ಸಂಘ ಹಾಗೂ ಅದರ ಪ್ರಾದೇಶಿಕ ಸಮಿತಿಗಳಲ್ಲಿ ಅದೆಷ್ಟೋ ಉತ್ತಮ ಕೆಲಸ ಕಾರ್ಯಗಳು ಸಮಾಜದ ಪರವಾಗಿ ನಡೆಯುತ್ತಿದೆ. ನಮ್ಮ ಸಮಾಜ ಬಾಂಧವರಲ್ಲಿ ಸಂಘದ ಆಗು ಹೋಗುಗಳ ಬಗ್ಗೆ ಅರಿವು ಮೂಡಬೇಕಾದರೆ ಕೆಲವಾದರೂ ಕಾರ್ಯಕ್ರಮಗಳಲ್ಲಿ ಅವರ ಉಪಸ್ಥಿತಿ ಅತ್ಯಗತ್ಯ ಎಂದು ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿಯವರು ಕರೆಯಿತ್ತರು. ಅವರು ಅಕ್ಟೋಬರ್ 2 ರಂದು ಭಯಂದರ್ ಗೋಲ್ಡನ್ ನೆಸ್ಟ್ ಸರ್ಕಲ್ ಸಮೀಪದ ದಿ ಕ್ರೌನ್ ಬ್ಯುಸಿನೆಸ್ ಹೊಟೇಲ್ ಸಭಾಂಗಣದಲ್ಲಿ ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ರವೀಂದ್ರ ಶೆಟ್ಟಿ ಕೊಟ್ರಪಾಡಿಯವರ ನೇತೃತ್ವದಲ್ಲಿ ಮತ್ತು ಯುವ ವಿಭಾಗದ ಕಾರ್ಯಾಧ್ಯಕ್ಷ ವೃಷಭ್ ಕೆ ಶೆಟ್ಟಿಯವರ ಮುಂದಾಳತ್ವದಲ್ಲಿ ಆಯೋಜಿಸಿದ ದಾಂಡಿಯಾ ರಾಸ್ ಹಾಗೂ ಗರ್ಬಾ ನೈಟ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ, ಬಂಟರ ಸಂಘದಲ್ಲಿ ನನ್ನ 35 ವರ್ಷಗಳ ಬದುಕಿನಲ್ಲಿ ನಮ್ಮ ಹಿರಿಯರು ಮಾಡಿಟ್ಟ ಆಸ್ತಿಯನ್ನು ನನ್ನ ಅಧ್ಯಕ್ಷ ಸ್ಥಾನದವಧಿಯಲ್ಲಿ ನಿರ್ದಿಷ್ಟ ಗುರಿಯನ್ನು ತಲುಪುವಲ್ಲಿ ಎಲ್ಲರ ಸಹಕಾರದೂಂದಿಗೆ ಮುಂದುವರಿಯುತ್ತಿದ್ದೇನೆ. ನಾವೆಲ್ಲಾ ಸದಾ ಒಗ್ಗಟ್ಟಾಗಿ ಪ್ರೀತಿ ಪಾತ್ರರಾಗಿ ಸಮಾಜಕ್ಕಾಗಿ ಯೋಗದಾನವನ್ನು ಮಾಡುತ್ತಿರಬೇಕು. ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯವರು ಸಂಘಟಿತವಾಗಿ ಉತ್ತಮ ಧೋರಣೆಗಳತ್ತ ಮುಂದುವರಿಯುತ್ತಿದ್ದಾರೆ. ಅವರ ಎಲ್ಲಾ ಕೆಲಸ ಕಾರ್ಯಗಳು ಯಶಸ್ವೀ ಪಥದಲ್ಲಿ ಮುಂದುವರಿಯಲಿ ಎಂದರು. ಸಮಿತಿಯಲ್ಲಿ ಕಾರ್ಯಕ್ರಮಗಳಿಗೆ ಸದಾ ಶ್ರಮಿಸುತ್ತಿರುವ ರವೀಂದ್ರ ಶೆಟ್ಟಿ ದೇರಳಕಟ್ಟೆ ಹಾಗೂ ಕರುಣಾಕರ ಶೆಟ್ಟಿ ಕುಕ್ಕುಂದೂರುರವರ ಯೋಗದಾನವನ್ನು ಶ್ಲಾಘಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಇಸ್ಸಾರ್ ಸರ್ವಿಸಸ್ ಪ್ರೈ. ಲಿ. ನ ಸಿಎಂಡಿ ಡಾ| ಆರ್.ಕೆ ಶೆಟ್ಟಿಯವರು ಮಾತನಾಡುತ್ತಾ, ಬಂಟರ ಸಮಾಜದ ಪ್ರತಿಯೊಬ್ಬ ವರ್ಗದ ವ್ಯಕ್ತಿಗೂ ಅತ್ಯುತ್ತಮ ದರ್ಜೆ ಸಿಗಬೇಕು. ಹಿರಿಯರು ಕಿರಿಯರು ಬಂಟರ ಸಂಘದಲ್ಲಿ ನಡೆಯುತ್ತಿರುವ ಆನೇಕ ರೀತಿಯ ಬೇರೆ ಬೇರೆ ಸಮಾರಂಭಗಳಲ್ಲಿ ಪಾಲ್ಗೊಂಡು ಸಂಘಟಿತರಾಗಿ ಪ್ರೀತಿ ಪಾತ್ರರಾಗಿ ಬೆರೆಯುತ್ತಿರಬೇಕು. ಪಾಶ್ಚಾತ್ಯ ಮುಂದುವರಿದ ದೇಶಗಳಲ್ಲಿ ಸಾಮಾನ್ಯ ವರ್ಗದವರೆಂಬುದೇ ಇಲ್ಲ. ಅವರಂತೆ ನಮ್ಮ ಸಮಾಜದಲ್ಲೂ ಅಂತಹ ವರ್ಚಸ್ಸು ಮೂಡಿ ಬರಬೇಕಾಗಿದೆ. ಬಂಟರ ಸಂಘದಿಂದ ದೊರೆಯುತ್ತಿರುವ ಅದೆಷ್ಟೋ ಸವಲತ್ತುಗಳನ್ನು ನಮ್ಮ ಸಾಮಾನ್ಯ ವರ್ಗದ ಜನರಿಗೆ ತಲುಪಬೇಕು. ನನ್ನ ಸಂಜೀವಿನಿ ಟ್ರಸ್ಟ್ ನಲ್ಲಿ ನಮ್ಮಿಗರಿಗಾಗಿ ವಿದ್ಯೆ, ಉದ್ಯೋಗಗಳ ಮಹತ್ವಾಕಾಂಶಗಳಿಗಾಗಿ ಶೇ. 50 ರ ದರದಲ್ಲಿ ವಿಶೇಷ ರೀತಿಯ ಸವಲತ್ತುಗಳನ್ನು ಹಮ್ಮಿಕೊಳ್ಳಲಾಗಿದೆ. ಇದರ ಮಹತ್ವ ಹಾಗೂ ಲಾಭವನ್ನು ನಮ್ಮಿಗರು ಅರಿತವರಿಂದ ತಿಳಿದುಕೊಂಡು ಅದರ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿದೆ. ನಮ್ಮ ಸಮಾಜದ ಪ್ರತಿಯೊಬ್ಬರೂ ಜೀವನ ಸಾರ್ಥಕತೆಯ ಉನ್ನತ ಸ್ಥಾನವನ್ನು ಪಡೆದು ಇತರ ವರ್ಗದವರಿಗೆ ಮಾದರಿಯಾಗುವಂತಾಗಬೇಕು. ಕ್ಷಿಪ್ರ ಗತಿಯಲ್ಲಿ ಮುಂದುವರಿಯುತ್ತಿರುವ ಮುಂಬಯಿ ಬಂಟರ ಸಂಘದ ಆಸ್ತಿಯಲ್ಲಿ ಬಂಟರ ಕಟ್ಟ ಕಡೆಯ ವ್ಯಕ್ತಿಗೂ ಲಾಭ ಸಿಗುವಂತಾಗಬೇಕು ಎಂದರು.
ಅತಿಥಿಯಾಗಿ ಆಗಮಿಸಿದ ಬಂಟರ ಸಂಘ ಮುಂಬಯಿಯ ಜತೆ ಕಾರ್ಯದರ್ಶಿ ಹಾಗೂ ಉದ್ಯಮಿ ಗಿರೀಶ್ ಶೆಟ್ಟಿ ತೆಳ್ಳಾರ್ ತಮ್ಮ ಅನಿಸಿಕೆಯಲ್ಲಿ ಯುವಕರು ಸಮಾಜದಲ್ಲಿ ಮುಂದುವರಿಯಬೇಕು. ಇಂದಿನ ದಿನಗಳಲ್ಲಿ ಯುವ ಪೀಳಿಗೆಗಳ ಪಾತ್ರ ಅತೀ ಹಿರಿದಾದುದು. ಬಂಟರ ಸಂಘದಲ್ಲಿ ಆಗುತ್ತಿರುವ ಎಲ್ಲಾ ಕಾರ್ಯಕ್ರಮಗಳಲ್ಲಿ ನಮ್ಮ ಯುವ ಜನತೆ ಸ್ವಲ್ಪ ಸಮಯವನ್ನು ಮೀಸಲಿಡಬೇಕಾಗಿದೆ. ಸಂಘದ ಚಟುವಟಿಕೆಗಳ ಬಗ್ಗೆ ಯುವಕರು ಗಮನ ಹರಿಸಬೇಕಾದುದು ಅತ್ಯಗತ್ಯ. ಯುವ ವರ್ಗದವರು ಪ್ರತಿಯೊಂದು ಸಂಘದ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಯುವಕರ ಪಾತ್ರ ಕೇವಲ ಒಂದು ದಿನಕ್ಕೆ ಸೀಮಿತವಾಗಿರಬಾರದು. ಅವರ ಪಾತ್ರ ನಮ್ಮ ಮಾತೃ ಸಂಘಕ್ಕೆ ಕೊಡುಗೆಯಾಗಿ ಮಾತ್ರವಲ್ಲದೇ ಭಾಗವಹಿಸುವಿಕೆ ನಿರಂತರವಾಗಿರಬೇಕು ಎಂದು ಹೆಚ್ಚು ಸಂಖ್ಯೆಯಲ್ಲಿ ನೆರದ ಯುವಕರನ್ನು ಪ್ರೇರೇಪಿಸಿದರು. ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ಮಹಿಳೆಯರ ಪಾತ್ರವನ್ನು ಕೊಂಡಾಡಿದ ಅವರು ಯುವಕರು ಸದಾ ಸಂಘದ ಚಟುವಟಿಕೆಗಳಲ್ಲಿ ಕ್ರೀಯಾಶೀಲರಾಗಿರುವಂತೆ ಯುವಕರ ಮಹತ್ವದ ಬಗ್ಗೆ ವಿಮರ್ಶನೀಯವಾಗಿ ಮಾತಾಡಿದರು.
ಇನ್ನೋರ್ವ ಅತಿಥಿ ಬಂಟರ ಸಂಂಘ ಮುಂಬಯಿಯ ಜತೆ ಕೋಶಾಧಿಕಾರಿ ಶಶಿಧರ್ ಶೆಟ್ಟಿ ಇನ್ನಂಜೆಯವರು ತನ್ನ ಅಭಿಪ್ರಾಯದಲ್ಲಿ ನಮ್ಮಿಗರ ಯುವ ಜನಾಂಗ ಪ್ರತಿಯೊಂದು ಕಾರ್ಯದಲ್ಲಿ ಮುನ್ನಡೆಯುತ್ತಿರಬೇಕು. ನಮ್ಮ ಆಚಾರ ವಿಚಾರ ಸಂಸ್ಕೃತಿಯ ಬಗ್ಗೆ ಯುವ ಜನತೆಯಲ್ಲಿ ಅರಿವು ಮೂಡಬೇಕಾದರೆ ಇಂತಹ ಧಾರ್ಮಿಕ ಕಾರ್ಯಕ್ರಮಗಳ ಯುವಕರ ಪಾತ್ರ ಅತ್ಯಗತ್ಯ. ಮಾತ್ರವಲ್ಲದೆ ಯುವಕರಿಂದ ನಮ್ಮ ಸಂಘ ಗಟ್ಟಿಯಾಗಿ ಬೆಳೆಯುವಲ್ಲಿ ನಿಸ್ಸಂದೇಹ ಎಂದು, ಪರ್ವ ಕಾಲದಲ್ಲಿ ನಡೆಯುವಂತಹ ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯಕ್ರಮಗಳನ್ನು ಶ್ಲಾಘಿಸಿದರು.
ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ರವೀಂದ್ರ ಶೆಟ್ಟಿ ಕೊಟ್ರಪಾಡಿಯವರು ಬಂಟರ ಸಂಘದ 9 ವಲಯಗಳಲ್ಲಿ ಇಲ್ಲಿನ ಪ್ರಾದೇಶಿಕ ಸಮಿತಿಯ ಯುವ ವಿಭಾಗದವರನ್ನು ಕೊಂಡಾಡಿದರು. ನಮ್ಮ ಸಮ್ಮಿತಿಯು ಉಳ್ಳವರಿಗೆ ಮಣೆ ಹಾಕದೆ ಪ್ರತೀ ಸಾಮಾನ್ಯ ವರ್ಗದವರನ್ನೂ ಆದರಿಸಿ ಗೌರವಿಸುತ್ತಿದೆ. ಯುವ ಜನತೆ ನಮ್ಮಿಗರ ಹೆಮ್ಮೆಯ ಪ್ರತೀಕವಾಗಿರಲಿ ಎಂದು ಆಶಿಸಿದರು. ಪ್ರಾರಂಭದಲ್ಲಿ ಗಣ್ಯರು ಶೃಂಗಾರವಾದ ದುರ್ಗಾ ಮಾತೆಯ ಮಂಟಪದಲ್ಲಿ ಜ್ಯೋತಿ ಬೆಳಗಿಸಿ ವಂದಿಸಿದರು. ತದನಂತರ ಸಭಾ ಕಾರ್ಯಕ್ರಮದಲ್ಲಿ ಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ಬಂಟರ ಸಂಘದ ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷರಾದ ಮಾಣಿಗುತ್ತು ಶಿವಪ್ರಸಾದ್ ಶೆಟ್ಟಿ ಹಾಗೂ ಯುವ ವಿಭಾಗದ ಕಾರ್ಯಾಧ್ಯಕ್ಷ ಸವಿನ್ ಜೆ. ಶೆಟ್ಟಿ ಪ್ರಾದೇಶಿಕ ಸಮಿತಿಯ ಗೌ. ಕಾರ್ಯದರ್ಶಿ ಕಿಶೋರ್ ಕುಮಾರ್ ಕುತ್ಯಾರು, ಜತೆ ಕಾರ್ಯದರ್ಶಿ ರಮೇಶ್ ಶೆಟ್ಟಿ ಸಿದ್ದಕಟ್ಟೆ, ಯುವ ವಿಭಾಗದ ಉಪ ಕಾರ್ಯಾಧ್ಯಕ್ಷ ಸುಶಾಂತ್ ಶೆಟ್ಟಿ, ಕಾರ್ಯದರ್ಶಿ ನಿರೀಕ್ಷಾ ಶೆಟ್ಟಿ, ಖಜಾಂಚಿ ವಿನಾಯಕ್ ಶೆಟ್ಟಿ, ಜತೆ ಕಾರ್ಯದರ್ಶಿ ತತ್ವಜ್ನ ಶೆಟ್ಟಿ, ಕರುಣಾಕರ್ ಶೆಟ್ಟಿ ಕುಕ್ಕುಂದೂರು, ಪ್ರಾದೇಶಿಕ ಸಮಿತಿಯ ಯುವ ವಿಭಾಗದ ಕಾರ್ಯಾಧ್ಯಕ್ಷ ವೃಷಬ್ ಶೆಟ್ಟಿಯವರು ಸ್ವಾಗತಿಸಿದರೆ, ವೇದಿಕೆಯಲ್ಲಿ ಪ್ರಾದೇಶಿಕ ಸಮಿತಿಯ ಗೌ. ಕಾರ್ಯದರ್ಶಿ ಕಿಶೋರ್ ಕುಮಾರ್ ಕುತ್ಯಾರು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಸಂತಿ ಎಸ್. ಶೆಟ್ಟಿ ಮತ್ತಿತರಿದ್ದರು.
ಕಾರ್ಯಕ್ರಮದ ಯಶಸ್ವಿಯಲ್ಲಿ ಆಡಳಿತ ಸಮಿತಿ, ಮಹಿಳಾ ವಿಭಾಗ ಹಾಗೂ ಯುವ ವಿಭಾಗದ ಸದಸ್ಯರು ಶ್ರಮಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಅಶ್ವಿನಿ ಶೆಟ್ಟಿ ನಿರ್ವಹಿಸಿದರೆ, ಮಮತಾ ಭಂಡಾರಿಯವರು ದನ್ಯವಾದ ಸಮರ್ಪಣೆಗೈದರು. ತದನಂತರ ದಾಂಡಿಯಾ ರಾಸ್ ಹಾಗೂ ಗರ್ಬಾ ನೈಟ್ ಕಾರ್ಯಕ್ರಮವು ನೆರೆದ ಸಭಾ ಸಭಿಕರನ್ನು ರಂಜಿಸಿತು. ಕಾರ್ಯಕ್ರಮದ ಕೊನೆಯಲ್ಲಿ ಅನ್ನ ಪ್ರಸಾದದ ಆಯೋಜನೆಯನ್ನು ಏರ್ಪಡಿಸಲಾಗಿತ್ತು.
ಚಿತ್ರ, ವರದಿ: ವೈ.ಟಿ ಶೆಟ್ಟಿ ಹೆಜಮಾಡಿ