ಬ್ರಹ್ಮಾವರ: ಅ 2: ಇಲ್ಲಿನ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ನಲ್ಲಿ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿಯನ್ನು ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿಯವರು ಮಹಾನ್ ನಾಯಕರ ಭಾವಚಿತ್ರಕ್ಕೆ ಪುಷ್ಪನಮನವನ್ನು ಸಲ್ಲಿಸಿ ಮಾತನಾಡಿ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಲಕ್ಷಾಂತರ ಮಂದಿ ಪ್ರಾಣವನ್ನು ತ್ಯಾಗಮಾಡಿದ್ದಾರೆ. ಆದರೆ ಗಾಂಧೀಜಿಯವರನ್ನು ಮಾತ್ರ ರಾಷ್ಟ್ರಪಿತ ಎಂದು ಕರೆಯುತ್ತೇವೆ. ಅವರು ತಮ್ಮ ಅಹಿಂಸಾ ತತ್ವದಿಂದ ಪ್ರಪಂಚದ ಎಲ್ಲಾ ಜನರ ಮನಸ್ಸನ್ನು ಗೆದ್ದವರು. ಅದೇ ರೀತಿ ಲಾಲ್ ಬಹದ್ದೂರ್ ಶಾಸ್ತ್ರೀಯವರು ತಮ್ಮ ಸರಳತೆಯ ಜೊತೆಗೆ ದೇಶವನ್ನು ಕಾಯುವ ಸಶಸ್ತ್ರ ಪಡೆಗಳಿಗೆ ಹೆಚ್ಚಿನ ಗೌರವ ಮತ್ತು ಪ್ರಾಮುಖ್ಯತೆಯನ್ನು ನೀಡಿದ್ದರು. ಅವರ ‘ಜೈ ಜವಾನ್ ಜೈ ಕಿಸಾನ್’ ಘೋಷವಾಕ್ಯ ರೈತರು ಹಾಗೂ ಸೈನಿಕರ ಕುರಿತು ಅವರಿಗಿರುವ ಕಾಳಜಿ ಮತ್ತು ಗೌರವವನ್ನು ಎತ್ತಿ ತೋರಿಸುತ್ತದೆ ಎಂದರು. ಶಾಲಾ ದೈಹಿಕ ಶಿಕ್ಷಕರಾದ ಸೀತರಾಮ ಗೌಡ ಲಾಲ್ ಬಹದ್ದೂರ್ ಶಾಸ್ತ್ರೀಯವರು ದೇಶಕ್ಕೆ ನೀಡಿದ ಕೊಡುಗೆಗಳು ಹಾಗೂ ದಿನೇಶ್ರವರು ಗಾಂಧೀಜಿಯವರ ಜೀವನ ಸಾಧನೆ, ತತ್ವಗಳ ಕುರಿತು ಮಾಹಿತಿ ನೀಡಿದರು. ಶಾಲಾ ಸಿಬ್ಬಂದಿವರ್ಗ ಮಹಾನ್ ನಾಯಕರ ಸಂದೇಶಗಳನ್ನು ಪಾಲಿಸಿ, ಪರಿಸರ ಸಂರಕ್ಷಣೆಯನ್ನು, ದೇಶದ ಸಮಗ್ರತೆಯನ್ನು ಎತ್ತಿ ಹಿಡಿಯುವುದಾಗಿ ಪ್ರತಿಜ್ಞೆಯನ್ನು ಮಾಡಿದರು. ಅಂತಿಮವಾಗಿ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕವೃಂದ, ಸಹ ಸಿಬ್ಬಂದಿವರ್ಗ, ವಸತಿ ನಿಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
