ಬಾಂಬೆ ಬಂಟ್ಸ್ ಅಸೋಸಿಯೇಷನ್ ನ ಮಹಿಳಾ ವಿಭಾಗದ ವತಿಯಿಂದ ಸೆಪ್ಟೆಂಬರ್ 26 ರಂದು ಮಹಿಳಾ ಕಾರ್ಯಾಧ್ಯಕ್ಷೆ ಶಾಂತ ಎನ್ ಶೆಟ್ಟಿಯವರ ಮುತಾಲಿಕೆಯಲ್ಲಿ ಲಲಿತ ಸಹಸ್ರನಾಮ, ಭಜನೆ ಹಾಗೂ ದಸರಾ ಮಹೋತ್ಸವದ ಅಂಗವಾಗಿ ಕೀರ್ತನೆ ಮತ್ತು ದಾಂಡಿಯ ನೃತ್ಯ ಕಾರ್ಯಕ್ರಮ ನಡೆಯಿತು. ಬಾಂಬೆ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷ ಅಡ್ವೋಕೇಟ್ ಡಿ.ಕೆ ಶೆಟ್ಟಿಯವರು ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಸಂಸ್ಥೆಯ ಮಹಿಳೆಯರ ಉತ್ಸಾಹದ ಲವಲವಿಕೆಯನ್ನು ಕಂಡು, ನಮ್ಮ ಸಂಸ್ಕಾರ, ಸಂಸ್ಕೃತಿಯನ್ನು ಉಳಿಸಿ ಬೆಳೆಸಿ ನಮ್ಮ ಕರ್ತವ್ಯವನ್ನು ನಾವು ಮಾಡುತ್ತಿರಬೇಕು. ಇದು ನಮ್ಮ ಮುಂದಿನ ಪೀಳಿಗೆಗೆ ಮಾದರಿ ಆಗಬೇಕು ಎಂದು ನುಡಿದರು.

ಈ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಹಿರಿಯ ಮಹಿಳಾ ಸದಸ್ಯೆ ವಸಂತಿ ಸಿ ಶೆಟ್ಟಿಯವರು ಆಗಮಿಸಿದ್ದರು. ಅಲ್ಲದೇ ಉಪಾಧ್ಯಕ್ಷರಾದ ಐಕಳ ಕಿಶೋರ್ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಅಡ್ವೊಕೇಟ್ ಶೇಖರ್ ಆರ್ ಶೆಟ್ಟಿ, ಸಮಿತಿ ಸದಸ್ಯರಾದ ರತ್ನಾಕರ ಶೆಟ್ಟಿ ಐಕಳ, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆಯವರಾದ ಶೈಲಜಾ ಎ.ಶೆಟ್ಟಿ, ಶಾರದಾ ಎಸ್ ಶೆಟ್ಟಿ, ತೇಜಾಕ್ಷಿ ಎಸ್ ಶೆಟ್ಟಿ, ಮತ್ತು ಹಿರಿಯ ಸದಸ್ಯೆ ಜಯಂತಿ ಎನ್ ಶೆಟ್ಟಿ, ನಂದಾ ಡಿ ಶೆಟ್ಟಿ ಅಲ್ಲದೇ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪದಾಧಿಕಾರಿಗಳು, ಸದಸ್ಯೆಯರು ಉಪಸ್ಥಿತರಿದ್ದರು. ಸದಸ್ಯರೆಲ್ಲರೂ ಸಂತೋಷದಿಂದ ಪಾಲ್ಗೊಂಡು ಕಾರ್ಯಕ್ರಮವು ಯಶಸ್ವಿಯಾಗುವಂತೆ ಸಹಕರಿಸಿದರು. ನವರಾತ್ರಿಯ ನಿಮಿತ್ತ ಒಂಬತ್ತು ಹೆಣ್ಣು ಮಕ್ಕಳನ್ನು ಕರೆದು ಕನ್ಯಾ ಪೂಜೆಯನ್ನು ಕೂಡಾ ನೆರವೇರಿಸಲಾಗಿತ್ತು. ಮಹಿಳೆಯರೆಲ್ಲರೂ ಗರ್ಬಾ ನೃತ್ಯದಲ್ಲಿ ಪಾಲ್ಗೊಂಡು ಸಂತೋಷವನ್ನು ಅನುಭವಿಸಿದರು. ಕಾರ್ಯಕ್ರಮದ ಕೊನೆಗೆ ಲಘು ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.