ಧರ್ಮಸ್ಥಳದ ವಿರುದ್ಧ ಅಪಪ್ರಚಾರದ ಬಗ್ಗೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಮೂಡಬಿದ್ರೆಯ ಸಂಪಿಗೆ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿದ್ದು, ಈ ಪತ್ರಿಕಾಗೋಷ್ಠಿಯಲ್ಲಿ ಸರ್ಕಾರಕ್ಕೆ ತನ್ನ ಕರ್ತವ್ಯ, ಅಪಪ್ರಚಾರ ಮಾಡುವವರಿಗೆ ಹಾಗೂ ಮಾಡಿದವರಿಗೆ ಸಾಕ್ಷಿಗಳನ್ನು ನೀಡಲು ಡಿಸೆಂಬರ್ 31ರ ತನಕ ಡೆಡ್ ಲೈನ್ ನೀಡಿದರು. ಧರ್ಮಸ್ಥಳ ಕ್ಷೇತ್ರ, ಅದರ ಆಡಳಿತ ಮಂಡಳಿ ಅಥವಾ ಅದರ ಕುಟುಂಬ ಸದಸ್ಯರ ವಿರುದ್ಧ ಯಾವುದೇ ಅತ್ಯಾಚಾರ ಅಥವಾ ಕೊಲೆ ಘಟನೆ ಆವರಣದಲ್ಲಿ ಅಥವಾ ಅದರ ಸುತ್ತಮುತ್ತ ನಡೆದಿದೆ ಎಂದು ಆರೋಪಿಸುತ್ತಿರುವವರು ಡಿಸೆಂಬರ್ 31ರ ಒಳಗೆ ಅದಕ್ಕೆ ಸಂಬಂಧಪಟ್ಟ ಸ್ಪಷ್ಟವಾದ ಸಾಕ್ಷ್ಯವನ್ನು ಸಲ್ಲಿಸಬೇಕು. ಒಂದು ವೇಳೆ ಆರೋಪ ಮಾಡುತ್ತಿರುವವರು ಸಾಕ್ಷ್ಯ ಸಲ್ಲಿಸಲು ಸಾಧ್ಯವಾಗದಿದ್ದಲ್ಲಿ ಧರ್ಮಸ್ಥಳದ ವಿರುದ್ಧ ನಡೆಸುತ್ತಿರುವ ಎಲ್ಲಾ ಆರೋಪಗಳು ಸತ್ಯಕ್ಕೆ ದೂರವಾದುದು ಹಾಗೂ ಧರ್ಮಸ್ಥಳ ಕ್ಷೇತ್ರದ ವಿರುದ್ಧ ನಡೆಸುತ್ತಿರುವ ಸುಳ್ಳು ಆರೋಪಗಳ ಪ್ರಕರಣವನ್ನು ಮುಚ್ಚಲಾಗಿದೆ ಎಂದು ಕರ್ನಾಟಕ ರಾಜ್ಯದ ಗೃಹ ಸಚಿವರು ಅಧಿಕೃತವಾಗಿ ಘೋಷಿಸಬೇಕು ಎಂದು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಆಗ್ರಹಿಸಿದೆ. ಪ್ರಸ್ತುತ ಪೊಲೀಸ್ ಇಲಾಖೆ, ನ್ಯಾಯಾಂಗ, ಕರ್ನಾಟಕ ರಾಜ್ಯದ ಗೃಹ ಸಚಿವರು ಮತ್ತು ಭಾರತದ ಗೃಹ ಸಚಿವರ ಪ್ರಮುಖ ಕರ್ತವ್ಯವೇನೆಂದರೆ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿ ಅಪಪ್ರಚಾರ ನಡೆಸುತ್ತಿರುವ ಪ್ರತಿಯೊಬ್ಬರಿಂದ ಅವರ ಆರೋಪಗಳಿಗೆ ಸೂಕ್ತವಾದ ಸಾಕ್ಷ್ಯವನ್ನು ಕೇಳಬೇಕು.

ಸಮಿತಿಯ ಸ್ಥಾಪಕ ತೋನ್ಸೆ ಜಯಕೃಷ್ಣ ಎ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಮೂರು ತಿಂಗಳುಗಳ ಹಿಂದೆ ಮಾಧ್ಯಮಗಳಿಗೆ ಸಂಬಂಧಿಸಿದ ಪ್ರಕಾರ ಧರ್ಮಸ್ಥಳ ಕ್ಷೇತ್ರದ ವಿರುದ್ಧ ಕೆಲವು ದುರುದ್ದೇಶ ಶಕ್ತಿಗಳು ರಾಜಕೀಯ ಮತ್ತು ವೈಯುಕ್ತಿಕ ಸ್ವಾರ್ಥಕ್ಕಾಗಿ ಇಲ್ಲಸಲ್ಲದ ಆರೋಪವನ್ನು ಮಾಡುತ್ತಿದೆ. ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರಕ್ಕೆ ನಾವು ಸ್ಪಷ್ಟವಾಗಿ ಹೇಳುವುದು ಇಷ್ಟೇ, ಶ್ರೀ ಕ್ಷೇತ್ರ ಧರ್ಮಸ್ಥಳದ ವಿಚಾರವನ್ನು ಕೆಲವರು ಉದ್ದೇಶಪೂರ್ವಕವಾಗಿ ಭಾರತ ಹಾಗೂ ವಿಶ್ವಾದ್ಯಂತ ತಪ್ಪಾಗಿ ಬಿಂಬಿಸುತ್ತಿದ್ದಾರೆ. ಆದ್ದರಿಂದ ಊಹಾಪೋಹಗಳಿಗೆ ಶೀಘ್ರವೇ ತೆರೆ ಎಳೆಯಬೇಕೆಂಬುದು ಬೇಡಿಕೆಯಾಗಿದೆ ಎಂದರು. ಈ ಪ್ರತಿಭಟನಾಕಾರರು ಧರ್ಮಸ್ಥಳ ದೇವಸ್ಥಾನದ ವಿರುದ್ಧ ಸುಳ್ಳು ಆರೋಪವನ್ನು ಮಾಡುತ್ತಿದ್ದಾರೆ. ಯಾವ ಕಾರಣಕ್ಕಾಗಿ ಈ ರೀತಿಯ ಸುಳ್ಳು ಆರೋಪವನ್ನು ಮಾಡುತ್ತಿದ್ದಾರೆ ಎಂಬ ನಿಜವಾದ ಕಾರಣ ಅವರಿಗೆ ಮಾತ್ರ ತಿಳಿದಿದೆ ಎಂದರು. ಈ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಂಯೋಜಕ ಜಗದೀಶ ಅಧಿಕಾರಿ, ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ನಾಗೇಶ್ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಸುರೇಂದ್ರ ಮೆಂಡನ್ ಮತ್ತಿತರರು ಉಪಸ್ಥಿತರಿದ್ದರು.