ತಂದೆ ತಾಯಿ ನೀಡಿದ ಸಂಸ್ಕಾರ, ಗುರು ನೀಡಿದ ವಿದ್ಯೆ, ಕಲಿಕೆಯಲ್ಲಿ ಸಮರ್ಪಣೆ ಇದ್ದಾಗ ವಿದ್ಯಾರ್ಥಿಗಳು ಕಲೆಯಲ್ಲಿ ಔನ್ನತ್ಯವನ್ನು ತಲುಪಲು ಸಾಧ್ಯ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕ ವಿದ್ಯಾವತಿ ಭಜಂತ್ರಿ ಅಭಿಪ್ರಾಯ ಪಟ್ಟರು. ಬೆಳಗಾವಿಯ ಕೆ.ಎಲ್.ಇ ಸಂಸ್ಥೆಯ ಬಿಎಸ್ ಜೀರಗೆ ಸಭಾಂಗಣದಲ್ಲಿ ನಡೆದ ಅಭಿನಯ ಕಲಾಸಂಸ್ಥೆಯ ದಶಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಭರತನಾಟ್ಯ ಕಲೆ ಅಷ್ಟು ಸುಲಭದಲ್ಲಿ ಒಳಿದು ಬರುವ ಕಲೆಯಲ್ಲ. ಅತ್ಯಂತ ಪರಿಶ್ರಮದಿಂದ ಪಡೆದುಕೊಳ್ಳಬೇಕು. ಈ ಕಲೆಯಲ್ಲಿ ಶ್ರದ್ದೆ, ಏಕಾಗ್ರತೆ ತುಂಬಾ ಮುಖ್ಯ. ಇದು ಕಲೆಯಲ್ಲಿ ಅಸಾಮಾನ್ಯವಾದದು, ಅಗ್ರಮಾನ್ಯವಾದದು. ದೇಶದಲ್ಲಿ ಅಷ್ಟೇ ಅಲ್ಲ ವಿದೇಶದಲ್ಲಿಯೂ ಅದರ ವೈಭವವನ್ನು ಕಾಣುತ್ತೇವೆ ಎಂದರು. ಅಭಿನಯ ಕಲಾ ಸಂಸ್ಥೆಯನ್ನು ಸ್ಥಾಪಿಸಿದ ವಿದುಷಿ ಡಾ| ದೀಪ್ತಿ ಶೆಟ್ಟಿ ಮತ್ತು ವಿದುಷಿ ಧನ್ಯ ಶೆಟ್ಟಿ ಅವರು ಅಭಿನಂದನಾರ್ಹರು. ಭರತನಾಟ್ಯ ಸಂಸ್ಥೆಯನ್ನು ಬೆಳಗಾವಿಯಲ್ಲಿ ಸ್ಥಾಪಿಸಿ ಆ ಮೂಲಕ ಮಕ್ಕಳಿಗೆ ಕಲಾ ಸಂಸ್ಕಾರ ನೀಡುವ ಅವರ ಕಾರ್ಯ ಶ್ಲಾಘನೀಯವಾದುದು. ಬೆಳಗಾವಿಯ ರವಿ ನೃತ್ಯ ಕಲಾಮಂದಿರದ ಮುಖ್ಯಸ್ಥ ಕರ್ನಾಟಕ ಕಲಾಶ್ರೀ ವಿದ್ವಾನ್ ರವೀಂದ್ರ ಶರ್ಮ ಅವರು ಭರತನಾಟ್ಯ ಕಲೆಯು ಅದ್ಭುತವಾದ ಕಲೆ. ಇದು ನಮ್ಮ ಸಂಸ್ಕೃತಿಯನ್ನು ಅನಾವರಣಗೊಳಿಸುತ್ತದೆ. ಗುರುವಿನಲ್ಲಿ ಶ್ರದ್ದೆ ಭಕ್ತಿಯನ್ನಿಟ್ಟು ಕಲಿಯಬೇಕು ಎಂದರು.ಉಡುಪಿಯ ನೃತ್ಯ ಕಲಾ ಕುಟೀರದ ಮುಖ್ಯಸ್ಥೆ ವಿದುಷಿ ಮಂಜರಿ ಚಂದ್ರ ಪುಷ್ಪರಾಜ ಮಾತನಾಡಿ, ಕಲೆ ಮನುಷ್ಯನ ಅಂತರಾಳವನ್ನು ಬೆಳಗುತ್ತದೆ. ಮಾನವೀಯ ಮೌಲ್ಯಗಳನ್ನು ತುಂಬುತ್ತದೆ. ಮನುಷ್ಯನಿಗೆ ಸಮಾಜದಲ್ಲಿ ಹೇಗೆ ಬದುಕಬೇಕೆಂಬುದನ್ನು ಕಲಿಸುತ್ತದೆ. ದೇಶದಲ್ಲಿ ಸತ್ಪ್ರಜೆಗಳಾಗಿ ಬದುಕಲು ಕಲೆ ಸಾಹಿತ್ಯ ಪ್ರೇರೇಪಿಸುತ್ತದೆ. ದೀಪ್ತಿ ಮತ್ತು ಧನ್ಯ ಶೆಟ್ಟಿ ನಾಟ್ಯ ಶಾರದೆಯ ಪುತ್ರಿಯರು. ಇಷ್ಟು ಕಡಿಮೆ ವಯಸ್ಸಿನಲ್ಲಿ ಇಂತಹ ಸಂಸ್ಥೆಯನ್ನು ಕಟ್ಟಿ ನೂರಾರು ಮಕ್ಕಳಿಗೆ ಕಲೆಯನ್ನು ಧಾರೆಯೆರೆಯುವುದು ಅಮೋಘ ಸಾಧನೆ. ಅವರ ಕಲಾ ಸೇವೆ ಹೀಗೆ ಮುಂದುವರೆಯಲಿ ಎಂದರು. ರಾಮದೇವ್ ಹೋಟೆಲ್ ನ ತಾರಾನಾಥ ಶೆಟ್ಟಿ, ಅಶೋಕ ಶೆಟ್ಟಿ, ಬೆಳಗಾವಿ ಬಂಟರ ಸಂಘದ ಅಧ್ಯಕ್ಷ ವಿಜಯ ಶೆಟ್ಟಿ, ವಾಣಿ ಶೆಟ್ಟಿ, ರವಿರಾಜ್ ಶೆಟ್ಟಿ, ವಸಂತಿ ಶೆಟ್ಟಿ ಇದ್ದರು. ಶಾಂತಲಾ ನಾಟ್ಯಾಲಯ ಮುಖ್ಯಸ್ಥೆ ರೇಖಾ ಹೆಗಡೆ, ಉಡುಪಿ ಸೃಷ್ಟಿಕಲಾ ಕುಟೀರದ ಡಾ| ವಿದುಷಿ ಮಂಜರಿ ಚಂದ್ರ ಪುಷ್ಪರಾಜ ಅವರನ್ನು ಸನ್ಮಾನಿಸಲಾಯಿತು. ಧನ್ಯ ಶೆಟ್ಟಿ ಪ್ರಾರ್ಥಿಸಿದರು. ಚೇತನ್ ಶೆಟ್ಟಿ ಸ್ವಾಗತಿಸಿದರು ಉಳ್ತೂರು ಅಜಿತ್ ಶೆಟ್ಟಿ ನಿರೂಪಿಸಿದರು. ದೀಪ್ತಿ ಶೆಟ್ಟಿ ವಂದಿಸಿದರು.
