ಯಕ್ಷ ಮಿತ್ರರು ದುಬೈ ಇವರ 22 ನೇ ವರ್ಷದ ದುಬೈ “ಯಕ್ಷ ಸಂಭ್ರಮ – 2025” ಕಾರ್ಯಕ್ರಮದಲ್ಲಿ ತಂಡದ ಹಿರಿಯ ಸದಸ್ಯ ಜಯಂತ್ ಶೆಟ್ಟಿ ದುಬೈಯವರನ್ನು ಗೌರವಿಸಿ ಸನ್ಮಾನಿಸಲಾಯಿತು. ಸೆಪ್ಟೆಂಬರ್ 14 ರಂದು ನಗರದ ಎಮಿರೇಟ್ಸ್ ಥೀಯೇಟರ್ ನಲ್ಲಿ ಯಕ್ಷ ಸಂಭ್ರಮದ ಸಭಾ ವೇದಿಕೆಯಲ್ಲಿ ದುಬೈನಲ್ಲಿ ಕಳೆದ ಮೂವತ್ತೇಳು ವರ್ಷಗಳಿಂದ ವಿವಿಧ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡು ಉತ್ತಮ ಸಂಘಟಕರ ಎಂಬ ಖ್ಯಾತಿ ಪಡೆದಿರುವ ಜಯಂತ್ ಶೆಟ್ಟಿಯವರನ್ನು ಶಾಲು ಹೊದಿಸಿ ಫಲಪುಷ್ಪ ಸ್ಮರಣಿಕೆ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಉದ್ಯಮಿಗಳಾದ ದಿವಾಕರ ಶೆಟ್ಟಿ, ಪುತ್ತಿಗೆ ವಾಸುದೇವ ಭಟ್, ಸತೀಶ್ ಶೆಟ್ಟಿ, ಪದ್ಮರಾಜ್ ಎಕ್ಕಾರ್, ದಯಾ ಕಿರೊಡಿಯನ್, ರವಿ ಕೋಟ್ಯಾನ್ ಉಪಸ್ಥಿತರಿದ್ದರು. ನಂತರ ತಂಡದ ಕಲಾವಿದರು ಹಾಗೂ ಊರಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ “ಶಬರಿಮಲೆ ಸ್ವಾಮಿ ಅಯ್ಯಪ್ಪ” ಯಕ್ಷಗಾನ ಪ್ರದರ್ಶನಗೊಂಡಿತು.
ಮುಂಬಯಿ ಮಹಾನಗರದಲ್ಲಿ ಐತಪ್ಪ ಶೆಟ್ಟಿ ಮತ್ತು ಭವಾನಿ ಶೆಟ್ಟಿಯವರ ಮಗನಾಗಿ ಜನಿಸಿದ ಜಯಂತ್ ಶೆಟ್ಟಿಯವರು ಅರ್ಥಶಾಸ್ತ್ರ ವಿಭಾಗದಲ್ಲಿ ಪದವಿಯನ್ನು ಮುಂಬಯಿಯಲ್ಲಿ ಪಡೆದು ಉದರ ನಿಮಿತ್ತ ಉದ್ಯೋಗ ಅರಸಿಕೊಂಡು ಬಂದದ್ದು ಮರಳುನಾಡು ದುಬೈಗೆ. ಕಳೆದ ಮೂರು ದಶಕಗಳಿಂದ ಅಧಿಕ ದುಬೈಯ ಹಲವಾರು ಕಂಪನಿಗಳಲ್ಲಿ ದುಡಿದು ಸದ್ಯ ಜೆಮಿನಿ ರೀಯಲ್ ಎಸ್ಟೇಟ್ ಸಂಸ್ಥೆಯಲ್ಲಿ ದುಡಿಯುತ್ತಿದ್ದಾರೆ. ಶಾಲಾ ಜೀವನದ ಸಂದರ್ಭದಲ್ಲಿ ಒಳ್ಳೆಯ ಕ್ರೀಡಾಪಟು ಆಗಿದ್ದ ಶೆಟ್ಟಿಯವರು ಕಾಲೇಜು ಶಿಕ್ಷಣದ ಸಮಯದಲ್ಲಿ ವೈಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ಆಗಿ ಹೆಸರುಗಳಿಸಿದ್ದರು. ಕಳೆದ ಮೂವತ್ತೇಳು ವರ್ಷಗಳಿಂದ ನಗರದ ಕನ್ನಡ ತುಳು ಸಂಘ ಸಂಸ್ಥೆಗಳಲ್ಲಿ ತನ್ನನ್ನೂ ತಾನು ತೊಡಗಿಸಿಕೊಂಡ ಜಯಂತ್ ಶೆಟ್ಟಿಯವರು ಸಂಸ್ಥೆಗಳ ಹಲವಾರು ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಸಂಘ ದುಬೈಯ ಸ್ಥಾಪಕ ಸದಸ್ಯರಾಗಿಯೂ ಸದ್ಯ ಸಂಘದ ಗೌರವ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಸಂಘ ಸಂಸ್ಥೆಗಳಲ್ಲಿ ದುಡಿದ ಇವರ ಸೇವೆಯನ್ನು ಗುರುತಿಸಿ ಅಬುಧಾಬಿ ಕರ್ನಾಟಕ ಸಂಘದ ವತಿಯಿಂದ “ಕುವೆಂಪು ವಿಶ್ವ ಮಾನವ ಪ್ರಶಸ್ತಿ”, ಮುಂಬಯಿಯ ಸಯನ್ ಕನ್ನಡ ಸಂಘ ವತಿಯಿಂದ “ರಾಜ ತರಂಗ ಪ್ರಶಸ್ತಿ”, ಕೀರ್ತಿಶೇಷ ಶ್ರೀ ಗೋಪಾಲಕೃಷ್ಣ ಆಸ್ರಣ್ಣ ಸಮಿತಿ ಮುಂಬಯಿ ಮತ್ತು ಯುಎಇ ಸಮಿತಿಯ ವತಿಯಿಂದ ಗೌರವ ಪುರಸ್ಕಾರ ಹೀಗೆ ಹಲವಾರು ಸಂಘ ಸಂಸ್ಥೆಗಳು ಇವರನ್ನು ಗೌರವಿಸಿದೆ. ಪತ್ನಿ ಉಷಾ, ಮಕ್ಕಳಾದ ಸೌರಭ್ ಮತ್ತು ರಿಷಬ್ ನೊಂದಿಗೆ ಸುಖ ಜೀವನ ನಡೆಸುತ್ತಿರುವ ಜಯಂತ್ ಅಣ್ಣನಿಗೆ ನಮ್ಮ ಮಾಧ್ಯಮದ ವತಿಯಿಂದ ಅಭಿನಂದನೆಗಳು.
ಲೇಖನ : ವಿಜಯಕುಮಾರ್ ಶೆಟ್ಟಿ ಗಾಣದಮೂಲೆ (ದುಬೈ)
