ಒಂದು ಕಾಲದಲ್ಲಿ ನಮ್ಮೂರಿನ ಗುಡ್ಡ ಪ್ರದೇಶಗಳಲ್ಲಿ ಧಾರಾಳವಾಗಿ ಮುಳಿಹುಲ್ಲುಗಳು ಬೆಳೆಯುತ್ತಿದ್ದ ಕಾರಣ, ಹಳ್ಳಿಗಳ ಬಹುತೇಕ ಎಲ್ಲಾ ಮನೆಗಳೂ ಮುಳಿ ಹುಲ್ಲಿನದ್ದಾಗಿದ್ದವು. 1865 ರಲ್ಲಿ ಮಂಗಳೂರಿನಲ್ಲಿ ಜರ್ಮನಿಯ ಬಾಸೆಲ್ ಮಿಶನ್ ಕಂಪನಿಯವರು ನಮ್ಮಲ್ಲಿ ಧಾರಾಳವಾಗಿ ದೊರಕುತ್ತಿದ್ದ ಆವೆಮಣ್ಣಿನಿಂದ ಜರ್ಮನಿಯ ಛಾವಣಿ ಹಂಚು ತಯಾರಿಕಾ ತಂತ್ರಜ್ಞಾನವನ್ನು ಬಳಸಿ, ಹಂಚಿನ ಕಾರ್ಖಾನೆಯನ್ನು ಸ್ಥಾಪಿಸಿದರು. ಆವಾಗ ಕೆಲವೊಂದೆಡೆ ಬೆರಳೆಣಿಕೆಯ ಒಂದೆರಡು ಹಂಚಿನ ಮನೆಗಳು ಗೋಚರಿಸಲಾರಂಭಿಸಿದವು. ಬಳಿಕ ಮಂಗಳೂರಿನಲ್ಲಿ ಹಲವಾರು ಹಂಚಿನ ಕಾರ್ಖಾನೆಗಳು ತಲೆಯೆತ್ತಿ ಉತ್ಕೃಷ್ಟ ಗುಣಮಟ್ಟದ ಹಂಚುಗಳನ್ನು ತಯಾರಿಸಿ ಅವುಗಳು ಮಂಗಳೂರು ಹಂಚುಗಳೆಂದೇ ಜಗದ್ವಿಖ್ಯಾತಿಯನ್ನು ಪಡೆದವು. ಆ ಹೊತ್ತಿಗೆ ಹೆಚ್ಚಿನ ಹಳ್ಳಿಗಳ ಜನರೂ ವಿದ್ಯಾವಂತರಾಗಿ ಸುಸಂಸ್ಕೃತರಾಗಿ ಅಭಿವೃದ್ಧಿಯ ಪಥದಲ್ಲಿ ಸಾಗಲು ಪ್ರಾರಂಭಿಸಿದರು. ಕಾಲಕ್ರಮೇಣ ಹಳ್ಳಿಗಳಲ್ಲಿ ಮುಳಿ ಹುಲ್ಲಿನ ಮನೆಗಳೆಲ್ಲವೂ ಮಾಯವಾಗಿ ಹಂಚಿನ ಮನೆಗಳು ಗೋಚರಿಸಲಾರಂಭಿಸಿದವು. ಇಂದಿನ ಕಾಲಘಟ್ಟದಲ್ಲಿ ನಮ್ಮೂರಿನಲ್ಲಿ ಹಂಚಿನ ಮನೆಗಳೂ ಮಾಯವಾಗಿ ಬಲವರ್ಧಿತ ಸಿಮೆಂಟ್ ಕಾಂಕ್ರೀಟ್ ನ (Reinforced Cement Concrete -RCC) ಮನೆಗಳೇ ತಲೆಎತ್ತಿವೆ. ಆದರೆ ಕೆಲವೆಡೆ ಈಗಲೂ ಒಂದೆರಡು ಹಂಚಿನ ಮನೆಗಳು ಅಪರೂಪಕ್ಕೆ ಕಾಣ ಸಿಗುತ್ತವೆ. ಅಂದಿನ ದಿನಗಳಲ್ಲಿ ನಮ್ಮ ತುಳುನಾಡಿನ ಕುಶಲ ಕರ್ಮಿಗಳು ನಿರ್ಮಿಸುತ್ತಿದ್ದ ಇಂತಹ ಹಂಚಿನ ಮನೆಗಳಡೆಗೆ ಒಂದು ಇಣುಕು ನೋಟವನ್ನು ಹಾಯಿಸಿ, ಅವರ ಕೌಶಲ್ಯತೆಗಳನ್ನೊಮ್ಮೆ ಮೆಲುಕು ಹಾಕೋಣ. ಇಂತಹ ಹಂಚಿನ ಮನೆಗಳ ನಿರ್ಮಾಣಕ್ಕೆ ಬಹಳಷ್ಟು ಮರಮಟ್ಟುಗಳು ಬೇಕಾಗುತ್ತಿತ್ತು. ಮರದ ಕೆಲಸವನ್ನು ಮಾಡುತ್ತಿದ್ದ ವಿಶ್ವಕರ್ಮ ಸಮುದಾಯದ ಬಡಗಿಗಳು ಒಂದು ಮನೆಯನ್ನು ಪೂರ್ಣಗೊಳಿಸಲು ಕೆಲವು ತಿಂಗಳುಗಳ ಕಾಲ ಕೆಲಸ ಮಾಡುತ್ತಿದ್ದರು. ಚೌಕಾಕಾರದ ಅಥವಾ ಆಯತಾಕಾರದ ಮನೆಗಳಿಗೆ ನಾಲ್ಕೂ ಬದಿಗಳಿಂದ ಇಳಿಜಾರಾಗಿರುವ ಮೇಲ್ಛಾವಣಿ (ಮಾಡು) ಯನ್ನು ಹೊದಿಸುವುದು ಸುಲಭದ ವಿಷಯವಲ್ಲ. ಕೆಲವು ಮನೆಗಳ ಎದುರಿನಲ್ಲಿರುತ್ತಿದ್ದ ಫೋರ್ಟಿಗೋ, ಹಿಂಬಾಗಲ್ಲಿರುವ ಪಡಸಾಲೆ, ಊಟದ ಮನೆ, ಪಕ್ಕದಲ್ಲಿ ಮನೆಗೆ ಜೋಡಿಸಿದ ಬಚ್ಚಲು ಹಾಗೂ ಶೌಚಾಲಯಗಳಿಗೆ ಅರ್ಧ ಅಥವಾ ತುಂಡು ಛಾವಣಿ (ತುಂಡು ಮಾಡು) ಗಳನ್ನು ಸರಿಯಾಗಿ ಜೋಡಿಸುವುದೂ ಒಂದು ಅದ್ಭುತ ಕಲೆ. ಒಂದೆರಡಂತಸ್ತಿನ ಮಾಳಿಗೆ ಮನೆಯಾದರೆ ಛಾವಣಿ ಹೊದಿಸುವುದೂ ಇನ್ನೂ ಹರ ಸಾಹಸ ಹಾಗೂ ಅಷ್ಟೇ ಅಪಾಯಕಾರಿ. ಛಾವಣಿ ಹೊದಿಸಲು ಬೇಕಾಗಿರುವ ಮರದ ಕೆಲಸವನ್ನು ಸುಡು ಬಿಸಿಲಿನಲ್ಲಿಯೇ ಮಾಡ ಬೇಕಾಗಿರುತ್ತಿತ್ತು.

ಮನೆಗಳ ನಿರ್ಮಾಣಕ್ಕೆ ಈಗಿನಂತೆ ಆವಾಗ ಯಾವ ವಾಸ್ತು ತಜ್ಞರೂ, ಇಂಜಿನಿಯರ್ ಗಳು, ಆರ್ಕಿಟೆಕ್ಟ್, ಇಂಟೀರಿಯರ್ ಡೆಕೋರೇಟರ್ ಯಾರೂ ಇರಲಿಲ್ಲ. ಊರಿನ ಶ್ರೀನಿವಾಸ ಭಟ್ಟರು!? ನಾರಾಯಣ ಭಟ್ಟರು!? ಜಿನ್ನಪ್ಪ ಆಚಾರಿ!? ಲಿಂಗಪ್ಪ ಆಚಾರಿ!? ಶೀನ ಆಚಾರಿ!? ಜನಾರ್ಧನ ಆಚಾರಿ!? ಬೂಬ ಮೇಸ್ತ್ರಿ !? ಅಣ್ಣು ಮೇಸ್ತ್ರಿ, ಗಫೂರ್ ಸಾಹೇಬ್, ಮಹಮ್ಮದ್ ಬ್ಯಾರಿ ಮುಂತಾದವರೇ ಅಂದಿನ ಎಲ್ಲಾ ರೀತಿಯ ತಜ್ಞರು. ಆರ್ಕಿಟೆಕ್ಟ್, ಇಂಟೀರಿಯರ್, ಎಕ್ಟೀರಿಯರ್ ಎಲ್ಲವೂ. ಊರಿನಲ್ಲಿ ಒಬ್ಬರು ಮನೆಕಟ್ಟುವುದೆಂದು ತೀರ್ಮಾನಿಸಿದ ಕೂಡಲೇ ಮೊದಲು ಸಂಪರ್ಕಿಸುವುದು ಊರಿನ ಆಚಾರಿಯವರನ್ನು. ಪಂಚಾಂಗ ನಿರ್ಮಿಸುವವರನ್ನು. ಕಲ್ಲುಕಟ್ಟುವ ಹಾಗೂ ಸಾರಣೆಯ ಮೇಸ್ತ್ರಿಯವರನ್ನು. ಅವರೇ ಮನೆಗೆ ಕಲ್ಲು, ಹೊಯಿಗೆ, ಜಲ್ಲಿ, ಸಿಮೆಂಟ್, ಮರ ಎಷ್ಟು ಬೇಕೆಂದು ಎಸ್ಟಿಮೇಟ್ ಕೊಡುವವರು. ಆಚಾರಿಗಳು (ವಿಶ್ವಕರ್ಮರು) ಮನೆ ಕಟ್ಟುವ ಮೊದಲೇ ಎಷ್ಟು ಉದ್ದ ಹಾಗೂ ದಪ್ಪ ಇರುವ ವಾಲ್ ಪ್ಲೇಟ್ ಗಳು ಬೇಕು? (ಮನೆಯ ಹೊರಗೋಡೆಗಳ ಮೇಲೆ ಪಕ್ಕಾಸುಗಳನ್ನು ಜೋಡಿಸಲು ಇಡಲ್ಪಡುವ ಮರದ ತೊಲೆಗಳು) ಮೂಲೆ ಪಕ್ಕಾಸುಗಳು ಬೇಕು. (ಮನೆಯ ಹೊರಗೋಡೆಯ ನಾಲ್ಕು ಮೂಲೆಗಳಲ್ಲಿ ವಾಲ್ ಪ್ಲೇಟನ್ನು ಸಂಧಿಸಿ ಅದನ್ನು ಮಾಡಿನ ತುತ್ತ ತುದಿಯಲ್ಲಿರುವ ಮರದ ತೊಲೆಯ ಬೆರ್ಸೋಲ್ ಗೆ ಎರಡೂ ಕಡೆಗಳಲ್ಲಿ ತಲಾ ಎರಡರಂತೆ ಸಂಧಿಸುವ ತೊಲೆಗಳು), ಬೆರ್ಸೋಲ್ ನ ಅಳತೆಯೇನು? (ಮಾಡಿನ ತುತ್ತ ತುದಿಯಲ್ಲಿ ಪಕ್ಕಾಸುಗಳನ್ನು ಜೋಡಿಸಲು ಅಡ್ಡವಾಗಿ ಜೋಡಿಸಿರುವ ಮರದ ತೊಲೆ). ಮಾಡಿನ ಅಳತೆಗಣುಗುಣವಾಗಿ ವಾಲ್ ಪ್ಲೇಟಿನಿಂದ ಮೂಲೆ ಪಕ್ಕಾಸುಗಳಿಗೂ ಜೋಡಿಸಬೇಕಾದ ತುಂಡು ಪಕ್ಕಾಸುಗಳ ಅಳತೆಯೇನು? ಮನೆಗೆ ಒಟ್ಟು ಎಷ್ಟು ಇಡಿ ಹಾಗೂ ತುಂಡು ಪಕ್ಕಾಸುಗಳು ಬೇಕಾಗುತ್ತವೆ? ಹಂಚುಗಳನ್ನು ಜೋಡಿಸಲು ಎಷ್ಟು ಉದ್ದದ ರೀಪುಗಳು ಬೇಕಾಗುತ್ತವೆ ? ಮಾಳಿಗೆ ಅಥವಾ ಅಟ್ಟವನ್ನು ಮಾಡಲು ಎಷ್ಟು ಅಡ್ಡಗಳು ಬೇಕು? (ಸಮಾನ ಅಂತರಗಳಲ್ಲಿ ಒಂದು ಗೋಡೆಯಿಂದ ಇನ್ನೊಂದು ಗೋಡೆಗೆ ತಾಗಿಸಿ ಇರಿಸಿದ ಮರದ ತೊಲೆಗಳು) ಮುಚ್ಚಿಗೆ ಮಾಡಲು ಎಷ್ಟು ಹಲಗೆ ಹಾಗೂ ರೀಪುಗಳು ಬೇಕು? ಒಟ್ಟಿಗೆ ಎಷ್ಟು ಚಪ್ಪಟೆ ಹಂಚುಗಳು ಹಾಗೂ ಮೂಲೆ ಹಂಚುಗಳು ಬೇಕು? ಅಕ್ಕಿ, ಧಾನ್ಯ ಹಾಗೂ ಇತರ ವಸ್ತುಗಳಿಗೆ ನಿರಂತರ ಬೆಚ್ಚನೆಯ ಹೊಗೆ ತಾಗಿ ದೀರ್ಘ ಕಾಲ ಸಂಗ್ರಹಿಸಿಡಲು ಕುತ್ತಟ್ಟವನ್ನು ಹೇಗೆ ನಿರ್ಮಿಸಬೇಕು? ಕಿಟಕಿ ಬಾಗಿಲುಗಳಿಗೆ ದಾರಂದಗಳು (ಡೋರ್ ಫ್ರೇಮ್ ಹಾಗೂ ವಿಂಡೋ ಫ್ರೇಮ್) ಹಾಗೂ ಬಾಗಿಲುಗಳ ಎತ್ತರ ಹಾಗೂ ಅಗಲದ ಅಳತೆಯೆಲ್ಲವೂ ಆಚಾರಿಗಳ ಕೈಯಲ್ಲಿರುತ್ತಿತ್ತು. ಹೀಗೆಯೇ ಅದ್ಭುತವಾದ ಲೆಕ್ಕಾಚಾರಗಳು ಮನೆ ಕಟ್ಟುವ ಮೇಸ್ತ್ರಿಯವರಲ್ಲಿತ್ತು.ಮನೆಯ ಪಂಚಾಂಗಕ್ಕೆ ಎಷ್ಟು ಆಳದ ಪಾಯ ತೆಗೆಯಬೇಕು? ಈ ಪಾಯದಲ್ಲಿ ಎಷ್ಟು ಸಾಲು ಕಲ್ಲುಗಳನ್ನು ಭೂಮಿಯ ಅಡಿಯಲ್ಲಿ ಕಟ್ಟಬೇಕು? ಎಷ್ಟು ಸಾಲು ಭೂಮಿಯ ಮೇಲೆ ಕಟ್ಟಬೇಕು? ಗೋಡೆಯ ಎತ್ತರ ಎಷ್ಟಿರಬೇಕು? ಎಷ್ಟು ಎತ್ತರ ಹಾಗೂ ಅಗಲದ ಕಿಟಕಿ ಬಾಗಿಲುಗಳನ್ನು ಯಾವ ಯಾವ ದಿಕ್ಕಿನಲ್ಲಿಡಬೇಕು? ಅಡುಗೆ ಮನೆಯಲ್ಲಿ ಯಾವ ದಿಕ್ಕಿಗೆ ಮುಖ ಮಾಡಿ ಒಲೆ ಉರಿಸಬೇಕು? ಮುಚ್ಚಿಗೆ ಅಥವಾ ಮಾಳಿಗೆಗೆ ಎಷ್ಟು ಎತ್ತರದಲ್ಲಿ ಅಡ್ಡವಿರಿಸಬೇಕು? ಮನೆಯ ಮುಖ್ಯ ದ್ವಾರದಿಂದ ಎಷ್ಟು ಅಂತರದಲ್ಲಿ ಬಾವಿ ಇರಬೇಕು? ಎಷ್ಟು ಅಂತರದಲ್ಲಿ ತುಳಸಿ ಕಟ್ಟೆ ಇರಬೇಕು? ನೆಲಕ್ಕೆ ಕಾಂಕ್ರೀಟು ಹಾಕಿ ಯಾವ ಕೋಣೆಗಳಿಗೆ ಕಾವಿ ಹಾಗೂ ಕರಿ ಹಚ್ಚಬೇಕು? (ಗ್ರಾನೈಟ್, ಮಾರ್ಬಲ್, ಟೈಲ್ಸ್ ಹಚ್ಚುವ ಕ್ರಮ ಇರಲಿಲ್ಲ) ಮನೆಯ ಪೈಂಟಿಂಗ್ ಎಂದರೆ, ಸಾರಣೆ ಮಾಡಿದ ಗೋಡೆಗಳಿಗೆ ಸುಣ್ಣದೊಂದಿಗೆ ಕೆಲವು ಬಣ್ಣಗಳನ್ನು ಬೆರಸಿ ಬಳಿಯುತ್ತಿದ್ದರು. (ಈಗಿನ ತರಹ ಪ್ರೈಮರ್, ಲಾಂಬಿ, ಪಿಓಪಿ, ಪುಟ್ಟಿ ಹಚ್ಚಿ ಡಿಸ್ಟಂಪರ್, ಪ್ಲಾಸ್ಟಿಕ್ ಪೈಂಟ್, ವಾಯಿಲ್ ಪೈಂಟ್ ಬಳಿಯುತ್ತಿರಲಿಲ್ಲ) ಈ ಎಲ್ಲಾ ವಿಷಯಗಳ ಲೆಕ್ಕಾಚಾರಗಳು ಮೇಸ್ತ್ರಿಯವರಲ್ಲಿರುತ್ತಿತ್ತು. ಆ ಕಾಲದ ಇಂತಹ ಮೇಸ್ತ್ರಿಗಳು, ಆಚಾರಿಗಳು ಅವಿದ್ಯಾವಂತರು ಅಥವಾ ಅಲ್ಪ ವಿದ್ಯಾವಂತರಾಗಿದ್ದರು. ಆದರೆ ಅವರಾರೂ ಇಂದಿನ ಕಾಲದ ಹಲವು ಡಿಗ್ರಿಗಳನ್ನು ಪಡೆದು ಲ್ಯಾಪ್ ಟಾಪ್, ಕಂಪ್ಯೂಟರ್ ಗಳೊಳಗೆ ಹಲವಾರು ಆಧುನಿಕ ಸಾಪ್ಟ್ ವೇರ್ ಗಳನ್ನು ತುರುಕಿಸಿಕೊಂಡು ಲೆಕ್ಕಾಚಾರ ಮಾಡುವ ಇಂಜಿನಿಯರ್/ ಆರ್ಕಿಟೆಕ್ಟ್ ಗಳಿಗಿಂತ ಏನೂ ಕಡಿಮೆಯಿರಲಿಲ್ಲ. ಅವರೆಲ್ಲರಿಂದಲೂ ಒಂದು ಹೆಜ್ಜೆ ಮುಂದೆಯೇ ಇದ್ದರು. ತಲೆತಲಾಂತರಗಳಿಂದ ತಮ್ಮ ಹಿರಿಯರಿಂದ ಕೇಳಿ ತಿಳಿದುಕೊಂಡು, ಹಾಗೆಯೇ ಮಾಡುವ ಪ್ರತೀ ಕೆಲಸದಲ್ಲಿಯೂ ಅನುಭವಗಳನ್ನು ಗಳಿಸಿಕೊಂಡು ಲೆಕ್ಕಾಚಾರ ಮಾಡುತ್ತಿದ್ದರು. ಇವೆಲ್ಲವೂ ನೂರಕ್ಕೆ ತೊಂಬತ್ತೆಂಟರಷ್ಟು ಸರಿಯಾಗಿರುತ್ತಿತ್ತು. ಆದರೆ ಈಗಿನ ಕಾಲಕ್ಕಾಗುವಾಗ ತುಳುನಾಡಿನಲ್ಲಿ ಇದೆಲ್ಲವೂ ಮುಗಿದ ಅಧ್ಯಾಯ. ಬಹಳಷ್ಟು ಬದಲಾವಣೆಗಳಾಗಿವೆ. ಬದಲಾವಣೆ ಪ್ರಕೃತಿಯ ನಿಯಮ. ಕಾಲ ಬದಲಾದಂತೆ ನಾವೂ ಬದಲಾಗಿ, ಒಂದು ಕಾಲದಲ್ಲಿ ತುಳುವ ನೆಲದಲ್ಲಿ ಪ್ರಕೃತಿದತ್ತವಾಗಿ ದೊರಕುತ್ತಿದ್ದ ಕಲ್ಲು, ಮಣ್ಣು, ಮರ, ಮರಳುಗಳನ್ನೇ ಉಪಯೋಗಿಸಿ ನಿರ್ಮಿಸಿದ ತಂಪಾದ ಹಂಚಿನ ಮನೆಗಳು ಮಾಯವಾಗಿ, ಈಗ ಎಲ್ಲೆಂದರಲ್ಲಿ ಉಸಿರುಗಟ್ಟಿಸುವ ಉಷ್ಣತೆಯನ್ನು ಕಾರುವ ಗೂಡಿನಂತಹ ಆರ್.ಸಿ.ಸಿ ಡಬ್ಬಗಳು / ಪೆಟ್ಟಿಗೆಗಳು ತಲೆಯೆತ್ತಿವೆ. ಅಂದಿನ ಕಾಲಕ್ಕೆ ಅದು ಸರಿಯಾಗಿತ್ತು ಇಂದಿಗೆ ಇದು ಸರಿಯಾಗಿಯೇ ಇದೆ.!? ಇದಕ್ಕೇ ಹೇಳುವುದು “ಕಾಲಾಯ ತಸ್ಮಯೇ ನಮಃ”
ಲೇಖಕರು : ರಘುನಾಥ ಎನ್ ಶೆಟ್ಟಿ ಕಾಂದಿವಲಿ
ಮೊ. 99309 22970