ಬಂಟರ ಸಂಘ ಮುಂಬಯಿ ಇದರ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಅವರ ಮಾರ್ಗದರ್ಶನದೊಂದಿಗೆ ಬಂಟರ ಸಂಘದ ಆವರಣದಲ್ಲಿರುವ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಮಂದಿರದ ಕಾರ್ಯಾಧ್ಯಕ್ಷ ಶಿಬರೂರು ಸುರೇಶ್ ಎಲ್ ಶೆಟ್ಟಿ ಅವರ ನೇತೃತ್ವದಲ್ಲಿ ಹಾಗೂ ಪದಾಧಿಕಾರಿಗಳ ಮುಂದಾಳತ್ವದೊಂದಿಗೆ ಪ್ರತಿವರ್ಷದಂತೆ ಗಣೇಶೋತ್ಸವವು ವಿಜೃಂಭಣೆಯಿಂದ ಜರಗಿತು. ದೇವಸ್ಥಾನದ ಪ್ರಧಾನ ಅರ್ಚಕ ನಾಗೇಂದ್ರ ಭಟ್ ಅವರ ಪೌರೋಹಿತ್ಯದೊಂದಿಗೆ ಹಾಗೂ ವಿಪ್ರ ವೃಂದದವರ ಸಹಕಾರದೊಂದಿಗೆ ಧಾರ್ಮಿಕ ವಿಧಿ ವಿಧಾನಗಳು ಜರಗಿತು. ವಿವಿಧ ಸಂಘ ಸಂಸ್ಥೆಯ ಮಹಿಳೆಯರಿಂದ ಭಜನೆ ಸಂಕೀರ್ತನೆ ನಡೆಯಿತು. ಮಹಿಳಾ ಸದಸ್ಯರಿಂದ ಹೂ ಕಟ್ಟುವ ಸ್ಪರ್ಧೆ, ರಂಗೋಲಿ ಹಾಕುವ ಸ್ಪರ್ಧೆ ಜರಗಿತು. 5 ರಿಂದ 10 ವರ್ಷದ ವಯೋಮಿತಿಯ ಬಂಟ ಸದಸ್ಯರ ಮಕ್ಕಳಿಗಾಗಿ ಗಣಪತಿಯ ಚಿತ್ರ ಬಿಡಿಸುವ ಸ್ಪರ್ಧೆ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಉಪಾಧ್ಯಕ್ಷ ಮಹೇಶ್ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಡಾ| ಆರ್ ಕೆ ಶೆಟ್ಟಿ, ಕೋಶಾಧಿಕಾರಿ ಸಿಎ ರಮೇಶ್ ಶೆಟ್ಟಿ ಇನ್ನ, ಜೊತೆ ಕಾರ್ಯದರ್ಶಿ ಗಿರೀಶ್ ಶೆಟ್ಟಿ ತೆಳ್ಳಾರ್, ಜೊತೆ ಕೋಶಾಧಿಕಾರಿ ಶಶಿಧರ್ ಶೆಟ್ಟಿ ಇನ್ನಂಜೆ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಚಿತ್ರ ಆರ್ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಸವೀನ್ ಜೆ ಶೆಟ್ಟಿ, ಮಂದಿರದ ಉಪಾಧ್ಯಕ್ಷ ನಲ್ಯ ಗುತ್ತು ಪ್ರಕಾಶ್ ಶೆಟ್ಟಿ, ಕಾರ್ಯದರ್ಶಿ ಸುಕುಮಾರ್ ಶೆಟ್ಟಿ, ಕೋಶಾಧಿಕಾರಿ ಭಾಸ್ಕರ್ ಡಿ ಶೆಟ್ಟಿ ಮತ್ತು ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. ಆಗಸ್ಟ್ 28ರಂದು ನಡೆದ ವಿಸರ್ಜನಾ ಕಾರ್ಯಕ್ರಮದಲ್ಲಿ ಮಂದಿರದಿಂದ ಮೆರವಣಿಗೆಯ ಮೂಲಕ ಗಣೇಶ ಮೂರ್ತಿಯನ್ನು ಕೊಂಡು ಹೋಗಿ ವಿಸರ್ಜನೆ ಮಾಡಲಾಯಿತು. ಭಕ್ತಾದಿಗಳು ಗಂಧ ಪ್ರಸಾದ ಮತ್ತು ಅನ್ನಪ್ರಸಾದ ಸ್ವೀಕರಿಸಿದರು.





































































































