ಪ್ರಜ್ವಲ್ ಫಿಲಂಸ್ ಲಾಂಛನದಲ್ಲಿ ತಯಾರಾಗುತ್ತಿರುವ ಪ್ರಜ್ವಲ್ ಶೆಟ್ಟಿ ನಿರ್ಮಾಣ ಹಾಗೂ ಕೀರ್ತನ್ ಭಂಡಾರಿ ನಿರ್ದೇಶನದ ‘ಗಜಾನನ ಕ್ರಿಕೆಟರ್ಸ್ (ಜಂತೊಟ್ಟು ಸಿನ್ಸ್ 1983)’ ತುಳು ಚಲನಚಿತ್ರವು 2026ರ ಜನವರಿಯಲ್ಲಿ ರಾಜ್ಯಾದ್ಯಂತ ಮತ್ತು ವಿದೇಶಗಳಲ್ಲಿ ತೆರೆಕಾಣಲು ಸಜ್ಜಾಗುತ್ತಿದೆ. ಇದು ತುಳು ಭಾಷೆಯಲ್ಲಿನ ದೊಡ್ಡ ಬಜೆಟ್ ಚಿತ್ರವಾಗಿದ್ದು, ಕ್ರಿಕೆಟ್ ಮತ್ತು ಆ ಆಟಗಾರರ ಬದುಕಿನ ಹಿನ್ನಲೆ ಆಧಾರಿತ ಕತೆ ಹೊಂದಿದೆ. ಚಿತ್ರದಲ್ಲಿ ಹಾಸ್ಯ, ಪ್ರೇಮಪೂರಿತ ಭಾವನೆಗಳು ಮತ್ತು ಸಮಾಜಮುಖಿ ಸಂದೇಶವಿರುವ ಬಿಗು ಕತೆ ಒಳಗೊಂಡಿದೆ. ಕೀರ್ತನ್ ಭಂಡಾರಿ ಅವರು ಕಥೆ, ಚಿತ್ರಕಥೆ ಬರೆದು ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ಮಂಗಳೂರು ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಬಹುಪಾಲು ಚಿತ್ರೀಕರಣ ನಡೆದಿದೆ. ಈ ಚಿತ್ರದಲ್ಲಿ ನಿರ್ಮಾಪಕರಾದ ಪ್ರಜ್ವಲ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಚಿತ್ರದ ತಾರಾಗಣದಲ್ಲಿ ವಿನೀತ್ ಕುಮಾರ್, ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ದೀಪಕ್ ರೈ ಪಾಣಾಜೆ, ಪ್ರಕಾಶ್ ತುಮಿನಾಡು, ಉಮೇಶ್ ಮಿಜಾರು, ಸಮತಾ ಅಮೀನ್, ಅನ್ವಿತಾ ಸಾಗರ್, ಸರ್ವೋತ್ತಮ ಶೆಟ್ಟಿ, ವಾಲ್ಟರ್ ನಂದಳಿಕೆ, ರೂಪಾ ವರ್ಕಾಡಿ, ಲಂಚೂ ಲಾಲ್, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಪುಷ್ಪರಾಜ್ ಬೊಳ್ಳಾರು, ಸಚಿನ್ ಮಾಡ, ಜೇಮ್ಸ್ ಮೆಂಡೋನ್ಸಾ, ಕರಣ್ ಪೂಜಾರಿ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. ವಿನುತ್ ಕೆ. ಸುವರ್ಣ ಅವರ ಛಾಯಾಗ್ರಹಣ, ಸುಜಯ್ ಶಿವರಾಮ್ ಹಾಗೂ ಕೌಶಿಕ್ ಭಂಡಾರಿ ಅವರ ಸಂಕಲನ ಚಿತ್ರದ ತಂತ್ರಜ್ಞಾನ ಮಟ್ಟವನ್ನು ಉತ್ತುಂಗಕ್ಕೆ ಕೊಂಡೊಯ್ಯುತ್ತದೆ. ಗೀತಾ ಸಾಹಿತ್ಯವನ್ನು ನಿರ್ದೇಶಕರಾದ ಕೀರ್ತನ್ ಭಂಡಾರಿ ರಚಿಸಿದ್ದಾರೆ. ಅವರು ಇದಕ್ಕೂ ಮೊದಲು ತುಳು ಮತ್ತು ಕನ್ನಡ ಭಾಷೆಗಳಲ್ಲಿ ಸುಮಾರು 25ಕ್ಕೂ ಹೆಚ್ಚು ಚಿತ್ರಗಳಿಗೆ ಹಾಡುಗಳನ್ನು ಬರೆದಿರುವ ಅನುಭವ ಹೊಂದಿದ್ದಾರೆ. ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಗೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ತುಳು ಚಿತ್ರರಂಗಕ್ಕೆ ಹೊಸ ಸಂಚಲನ ನೀಡಬಲ್ಲ ಚಿತ್ರವೆಂದು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅದ್ಧೂರಿಯಾದ ಆಡಿಯೋ ಲಾಂಚ್ : ದುಬೈನಲ್ಲಿ ಆಗಸ್ಟ್ 24, 2025ರಂದು, ದುಬೈಯ ಟೇಕಾಂ, ಟೈಮ್ ಓಕ್ ಹೋಟೆಲ್ನ ಫಿಶರ್ಮ್ಯಾನ್ಸ್ ಹಬ್ನಲ್ಲಿ ‘ಗಜಾನನ ಕ್ರಿಕೆಟರ್ಸ್’ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮ ಜರುಗಿತು. ಪ್ರಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು ಆಡಿಯೋ ಬಿಡುಗಡೆ ನೆರವೇರಿಸಿದರು. ಅವರು ಈ ಚಿತ್ರದ ಒಂದು ಹೃದಯಸ್ಪರ್ಶಿ ಗೀತೆಯನ್ನು ತಮ್ಮ ಸುವರ್ಣ ಧ್ವನಿಯಲ್ಲಿ ಹಾಡಿದ್ದಾರೆ. ಗಣ್ಯ ಅತಿಥಿಗಳ ಸಮಾಗಮ: ಬಿ.ಆರ್. ಶೆಟ್ಟಿ, ಸರ್ವೋತ್ತಮ ಶೆಟ್ಟಿ (ಅಬುದಾಬಿ), ಹರೀಶ್ ಶೇರಿಗಾರ್, ಪ್ರತಾಪ್ ಮೆಂಡೋನ್ಸಾ, ಜೇಮ್ಸ್ ಮೆಂಡೋನ್ಸಾ, ಸುಧರ್ಶನ್ ಹೆಗ್ಡೆ, ಹಿದಾಯತ್ ಅಡೂರು ಸೇರಿದಂತೆ 150ಕ್ಕೂ ಅಧಿಕ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವಿದೇಶಗಳಲ್ಲಿ ಪ್ರೀಮಿಯರ್ ಶೋ : 2025 ರ ನವೆಂಬರ್ 22ರಿಂದ ಯುಎಇ, ಸೌದಿ ಅರೇಬಿಯಾ, ಕತಾರ್, ಓಮಾನ್, ಬಹರೈನ್, ಕುವೈತ್ ಹಾಗೂ ಇತರ ದೇಶಗಳಲ್ಲಿ ಚಿತ್ರವು ಪ್ರೀಮಿಯರ್ ಶೋ ಮೂಲಕ ಪ್ರದರ್ಶಿತವಾಗಲಿದೆ. ಚಿತ್ರ ತಂಡವು 2026ರ ಜನವರಿಯಲ್ಲಿ ‘ಗಜಾನನ ಕ್ರಿಕೆಟರ್ಸ್’ ಚಲನಚಿತ್ರವನ್ನು ವಿಶ್ವದಾದ್ಯಂತ ತೆರೆಕಾಣಿಸಲು ಸಕ್ರಿಯ ತಯಾರಿ ನಡೆಸುತ್ತಿದೆ ಎಂದು ನಿರ್ಮಾಪಕರಾದ ಪ್ರಜ್ವಲ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





































































































