ಮುಂಬಯಿ:- ಭಕ್ತಿ ಮತ್ತು ಭಗವಂತನ ನಡುವಿನ ನಿರೂಪಣೆ ವಚನ ಸಾಹಿತ್ಯದಲ್ಲಿ ಕಂಡು ಬರುತ್ತದೆ. ಭಕ್ತಿ ಎನ್ನುವುದು ಅಹಂನಿಂದ ಹೊರಬರುವ ಸ್ಥಿತಿ. ಅಹಂಕಾರದ ನಿರಾಕರಣೆಯೇ ಭಕ್ತಿಯ ತತ್ವವಾಗಿರುತ್ತದೆ. ಮನುಷ್ಯನ ನಡುವಿನ ಅಂತರವನ್ನು ಉಂಟುಮಾಡುವ ಸ್ಥಿತಿಗತಿಯನ್ನು ನಿರಾಕರಿಸಬೇಕು. ಆ ಕೆಲಸವನ್ನು ಭಕ್ತಿ ಮಾಡುತ್ತದೆ. ಬಸವಣ್ಣ ಭಕ್ತಿ ಭಂಡಾರಿ. ಮರೆಯುವ, ಬೆರೆಯುವ, ತಲ್ಲೀನತೆಯಲಿ ತನ್ಮಯವಾಗುವುದೇ ಭಕ್ತಿ. ಸಾಹಿತ್ಯದ ಓದು ನಮ್ಮಲ್ಲಿ ಎಲ್ಲರನ್ನು ಸಮಾನ ಭಾವದಿಂದ ನೋಡುವ ಮನೋಭಾವವನ್ನು ನೀಡುತ್ತದೆ. ಭಕ್ತ ಮತ್ತು ಭಗವಂತನ ನಡುವಿನ ಸಂಬಂಧ ಅನಾದಿ ಕಾಲದಿಂದಲೂ ನಡೆದು ಬಂದಿದೆ. ಹನ್ನೆರಡನೆಯ ಶತಮಾನದಲ್ಲಿ ವಚನಕಾರರು ವಿಶೇಷವಾಗಿ ಬಸವಣ್ಣ ಅದಕ್ಕೆ ಹೊಸ ಆಯಾಮವನ್ನು ನೀಡಿದರು ಎಂದು ಮಂಗಳೂರು ವಿಶ್ವವಿದ್ಯಾಲಯಯದ ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ಶಿವರಾಮ ಶೆಟ್ಟಿ ಅವರು ಅಭಿಪ್ರಾಯ ಪಟ್ಟರು. ಅವರು ಎಪ್ರಿಲ್ 30ರಂದು ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗದಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಭಕ್ತಿ ಭಂಡಾರಿ ಬಸವಣ್ಣನ ಕುರಿತು ಮಾತನಾಡಿದರು. ಇನ್ನೋರ್ವ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹಿರಿಯ ಸಾಹಿತಿ, ಸಂಶೋಧಕರಾದ ಪ್ರೊ.ಎಸ್.ಎಂ ಹೀರೇಮಠ ಅವರು ಮಾತನಾಡುತ್ತಾ ಬಸವಣ್ಣನ ತತ್ವಗಳನ್ನು ಪಾಲಿಸುವುದಕ್ಕಿಂತ ಹೆಚ್ಚಾಗಿ ಕೇವಲ ಭಾಷಣಕ್ಕೆ ಸೀಮಿತಗೊಳಿಸಿದ್ದೇವೆ.

ಬಸವಣ್ಣನ ತತ್ವಗಳನ್ನು ಪಾಲಿಸಬೇಕು, ಬೆಳೆಸಬೇಕು. ಸಮಾನತೆ, ಸಾಮರಸ್ಯ, ಸೌಹಾರ್ದತೆ, ವಿಶ್ವ ಬಾಂಧವ್ಯ, ಕಾಯಕ ತತ್ವ ಇವೆಲ್ಲದರ ಸಂಕೇತ ಬಸವಣ್ಣ. ಅರಿವಿನಂತೆ ಆಚರಣೆಯೂ ಇರಬೇಕು. ಅಸ್ಮಿತೆಯ ಉಳಿವಿಗಾಗಿ ನಾವು ಸಂಘಟಿತರಾಗುತ್ತಿದ್ದೇವೆ. ಸಂಘಟನೆ ವಿಘಟನೆಯಾಗಬಾರದು ಎಂದು ಅವರು ನುಡಿದರು. ಅಧ್ಯಕ್ಷತೆಯನ್ನು ವಹಿಸಿದ ಕನ್ನಡ ವಿಭಾಗ, ಮುಂಬಯಿ ವಿಶ್ವವಿದ್ಯಾಲಯದ ಮುಖ್ಯಸ್ಥರಾದ ಪ್ರೊ.ಜಿ.ಎನ್.ಉಪಾಧ್ಯ ಅವರು ಮಾತನಾಡುತ್ತಾ ಮಾತು ಕೃತಿಗಳ ನಡುವೆ ಅಂತರ ಹೆಚ್ಚುತ್ತಿರುವ ಇವತ್ತಿನ ದಿನಗಳಲ್ಲಿ ಬಸವಾದಿ ಶರಣರ ವಿಚಾರಧಾರೆಗಳು ಅತ್ಯಂತ ಪ್ರಸ್ತುತವಾಗಿವೆ. ಕರ್ನಾಟಕ ಸಂಸ್ಕೃತಿಯನ್ನು ರೂಪಿಸುವಲ್ಲಿ ವಚನಕಾರರ ಕೊಡುಗೆ ಅಪಾರ. ಏಕಕಾಲಕ್ಕೆ ಆತ್ಮ ಕಲ್ಯಾಣವನ್ನು ಲೋಕ ಕಲ್ಯಾಣವನ್ನು ಸಾಧಿಸಿದ್ದು ಬಸವಾದಿ ಪ್ರಮಥರ ಹಿರಿಮೆ. ಶರಣ ಕ್ರಾಂತಿಯ ನಾಯಕತ್ವ ವಹಿಸಿ ದಯವೇ ಧರ್ಮದ ಮೂಲ ಎನ್ನುವ ಮಾತನ್ನು ಎತ್ತಿ ಹಿಡಿದು ಸಮಾನತೆಯನ್ನು ಬಿತ್ತಿ ಬೆಳೆದ ಬಸವಣ್ಣ ಮನುಕುಲದ ಹಿತಕ್ಕೆ ಶ್ರಮಿಸಿದ ಮಹಾನ್ ಶಕ್ತಿ. ಬಸವ ಜಯಂತಿಯ ಈ ಶುಭ ಸಂದರ್ಭದಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾದ ಡಾ.ಎಸ್.ಎಂ.ಹಿರೆಮಠ ಹಾಗೂ ಮಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ಶಿವರಾಮ ಶೆಟ್ಟಿ ಅವರು ಬಸವಣ್ಣನ ಕುರಿತು, ಭಕ್ತಿಯ ಹಿನ್ನೆಲೆಯಲ್ಲಿ ಉತ್ತಮ ಉಪನ್ಯಾಸಗಳನ್ನು ನೀಡಿರುವುದು ಸಂತೋಷದ ಸಂಗತಿ. ಕನ್ನಡ ವಿಭಾಗ ಕನ್ನಡ ಕಟ್ಟುವ ಕಾಯಕದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ. ಒಳನಾಡಿನ ವಿದ್ವಾಂಸರು ಕನ್ನಡ ವಿಭಾಗದ ಬಗ್ಗೆ ಇಟ್ಟಿರುವ ಪ್ರೀತಿ ತುಂಬಾ ದೊಡ್ಡದು. ಡಾ. ಶಿವರಾಮ ಶೆಟ್ಟಿ ಅವರ ಕನ್ನಡ ಪರಿಚಾರಿಕೆ ದೊಡ್ಡದು.
ಡಾ.ಎಸ್.ಎಂ.ಹೀರೇಮಠ ಅವರು ತಮ್ಮ ಕೃತಿಗಳಲ್ಲಿ ಕನ್ನಡ ಕಾವ್ಯಮೀಮಾಂಸೆಯನ್ನು ಶೋಧಿಸಿ ವಿಶ್ಲೇಷಿಸಿದ ಪರಿಯಿಂದ ಕನ್ನಡಕ್ಕೆ ಉಪಕಾರವಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಪ್ರೊ.ಜಿ.ಎನ್.ಉಪಾಧ್ಯ ಅವರು ರಚಿಸಿದ ಕನ್ನಡ ಕಾವ್ಯಮೀಮಾಂಸೆಗೆ ಡಾ.ಎಸ್.ಎಂ.ಹೀರೇಮಠ ಅವರ ಕೊಡುಗೆ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ವಿಭಾಗದ ಸಂಶೋಧನ ವಿದ್ಯಾರ್ಥಿ ಕಲಾ ಭಾಗ್ವತ್ ಅವರು ಬಸವಣ್ಣನ ವಚನವನ್ನು ಹಾಡಿದರು. ವಿಭಾಗದ ಸಹಪ್ರಾಧ್ಯಾಪಕರಾದ ಡಾ.ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಮರ್ಪಿಸಿದರು. ಸಂಶೋಧನ ವಿದ್ಯಾರ್ಥಿಗಳಾದ ನಳಿನಾ ಪ್ರಸಾದ್, ಅನಿತಾ ತಾಕೋಡೆ, ಸುರೇಖಾ ಶೆಟ್ಟಿ, ಸುರೇಖಾ ದೇವಾಡಿಗ, ಸ್ನಾತಕೋತ್ತರ ವಿದ್ಯಾರ್ಥಿಗಳಾದ ವಿಕ್ರಮ್ ಜೋಶಿ, ಶೇಖರ ಶೆಟ್ಟಿ, ಮಹಾದೇವ ಜಾವೀರ್, ಶ್ಯಾಮಲಾ ಉಚ್ಚಿಲ್, ಪುಷ್ಪಲತಾ ಗೌಡ, ವಿದ್ಯಾ ಶೆಟ್ಟಿ, ವಿದ್ಯಾ ರಾಮಕೃಷ್ಣ, ಶುಭಲಕ್ಷ್ಮೀ ಶೆಟ್ಟಿ, ಆಶಾ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.