ದೀರ್ಘಕಾಲ ಹೊರನಾಡು ಮುಂಬಯಿಯಲ್ಲಿದ್ದು, ಕನ್ನಡ ನಾಡುನುಡಿಯ ಕೈಂಕರ್ಯ ಮಾಡುತ್ತಾ ಅಲ್ಲಿ ಕನ್ನಡದ ಉಳಿವಿಗೆ, ಬೆಳವಣಿಗೆಗೆ ಶ್ರಮಿಸಿದ ವಿದ್ವಾನ್ ರಾಮಚಂದ್ರ ಉಚ್ಚಿಲರ ಬರಹ ಬದುಕನ್ನು ಅನಾವರಣಗೊಳಿಸಬೇಕು. ಅದು ದಾಖಲೀಕರಣಗೊಳ್ಳಬೇಕು ಎಂಬುದಾಗಿ ಈ ಮೇಲಿನ ಮೂರು ಸಂಸ್ಥೆಗಳು ಒಂದುಗೂಡಿ ಮಾಡಿದ ಕಾರ್ಯವೇ ಚ.ರಾ. ನೆನಪಿನ ನಾಲ್ಕು ಸಂಪುಟಗಳ ಸಂಚಯ. ಉಚ್ಚಿಲರ ಹುಟ್ಟೂರಿನಲ್ಲಿ ಈ ಸಂಪುಟಗಳು ಲೋಕಾರ್ಪಣೆಗೊಳ್ಳುತ್ತಿರುವುದು ಅದೂ ಉಚ್ಚಿಲರ ಜನ್ಮ ಶತಮಾನೋತ್ಸವದ ಸಂಸ್ಮರಣೆಯನ್ನು ಮಾಡುವ ವಿಶೇಷ ದಿನ. ಅದರೊಂದಿಗೆ ಡಾ. ವಾಣಿ ಎನ್. ಉಚ್ಚಿಲ್ಕರ್ ರವರ ಮೂರು ಕೃತಿಗಳು ಹಾಗೂ ಇನ್ನೊಂದು ಸಂಪಾದಿತ ಕೃತಿ ಹಾಗೆ ಒಟ್ಟು ೮ ಕೃತಿಗಳು ಲೋಕಾರ್ಪಣೆಗೊಳ್ಳಲಿದೆ. ಚ.ರಾ. ನೆನಪಿನ ಸಂಪುಟ ಒಂದರಲ್ಲಿ ಚ.ರಾ.ರವರ ಪ್ರಕಟಿತ ಕೃತಿಗಳಲ್ಲಿ ೫ ಕೃತಿಗಳನ್ನು ೧ ಸಂಪುಟವಾಗಿ ಸಂಕಲಿಸಲಾಗಿದೆ. ಸಂಪುಟ ಒಂದರಲ್ಲಿ ಕಡಲಕರೆಯ ಚಿತ್ರಗಳು, ೨ನೇ ಕೃತಿ ಪದರ, ೩ನೇ ಕೃತಿ ನೆನಪಿನ ಬುತ್ತಿ ೪ನೇ ಕೃತಿ ಯಕ್ಷಗಾನ ನಡೆದು ಬಂದ ದಾರಿ ಹಾಗೂ ೫ನೇ ಕೃತಿ ಗಿಡ, ಮರ, ಬಳ್ಳಿ, ಮೂಲಿಕೆಗಳು ಇದರ ಮೂಲಗ್ರಂಥ ೧೮೮೧ರಲ್ಲಿ ಪ್ರಕಟವಾಗಿ ಆಗಲೇ ೩ ಆವೃತ್ತಿಗಳನ್ನು ಕಂಡಿರುವುದು ಇಲ್ಲಿಯ ವೈಶಿಷ್ಟ್ಯ.ಚ.ರಾ. ನೆನಪಿನ ಸಂಪುಟ ೨ರಲ್ಲಿ ಉಚ್ಚಿಲರು ಬರೆದ ಬರಹಗಳನ್ನು ಸಂಪಾದಕನಾಗಿ, ಪತ್ರಕರ್ತನಾಗಿ, ವಿಮರ್ಶಕನಾಗಿ, ಬರೆದ ಬರಹಗಳು ದೊರಕಿದ್ದು ಕೇವಲ ೫೦ ಪ್ರತಿಶತ ಒಟ್ಟುಗೂಡಿಸಿ ದಾಖಲಿಸಿ ಪ್ರಕಟಿಸಲಾಗಿದೆ. ಚ.ರಾ. ನೆನಪಿನ ಸಂಪುಟ ೩ರಲ್ಲಿ ಮುಂಬಯಿಯ ದೈನಿಕ ಕರ್ನಾಟಕ ಮಲ್ಲದಲ್ಲಿ ಪ್ರಕಟಿತ ಅಂಕಣ ಬರಹಗಳ ಸಂಕಲನ ಇದೆ. ಚ.ರಾ. ನೆನಪಿನ ಸಂಪುಟ ೪ರಲ್ಲಿ ಸಾಹಿತಿಗಳು ಕಂಡ ಚ.ರಾ., ಆತ್ಮೀಯರು ನೆನಪಿಸಿಕೊಂಡಾಗಿನ ಲೇಖನಗಳು, ವಿದ್ವಜ್ಜನರ ವೈಚಾರಿಕ ಲೇಖನಗಳು, ಚ.ರಾ. ಪ್ರಕಟಿತ ಕೃತಿಗಳ ವಿಮರ್ಶೆ ಇವೆಲ್ಲವು ಸಂಕಲನಗೊಂಡಿವೆ. ಹೀಗೆ ಉಚ್ಚಿಲರ ಬರಹದ ಬದುಕನ್ನು ಸಾಧ್ಯವಾದಷ್ಟು ಮಟ್ಟಿಗೆ ಈ ನಾಲ್ಕು ಸಂಪುಟಗಳಲ್ಲಿ ಸಂಗ್ರಹಿಸಿ ಸಾರಸ್ವತ ಲೋಕಕ್ಕೆ ಕೊಡಲಾಗಿದೆ. ಈ ಕೃತಿಗಳಲ್ಲದೆ ಚ.ರಾ. ಪುತ್ರಿ ಡಾ. ವಾಣಿ ಎನ್. ಉಚ್ಚಿಲ್ಕರ್ ರವರ ಬರಹದ ಬದುಕನ್ನೂ ಇಲ್ಲಿ ದಾಖಲಿಸಲಾಗಿದೆ. ಈ ನಾಲ್ಕು ಕೃತಿಗಳೂ ಎಪ್ರಿಲ್ 20ರಂದು ಲೋಕಾರ್ಪಣೆಗೊಳ್ಳಲಿದೆ.
೧. ಭಾವ ತರಂಗ – ಕವನಸಂಕಲನದಲ್ಲಿ ತುಳು, ಕನ್ನಡ ಹಾಗೂ ಮಲೆಯಾಳ ಕವಿತೆಗಳನ್ನು ಸಂಕಲಿಸಲಾಗಿದೆ.
೨. ಜ್ಞಾನದರ್ಶನ – ಮುಂಬಯಿಯ ಅನೇಕ ಸಂಸ್ಥೆಗಳು, ಜಾತೀಯ ಸಂಸ್ಥೆಗಳು ಅವರು ಡಾಕ್ಟರೇಟ್ ಮಾಡಿದ ಸಂದರ್ಭದಲ್ಲಿ ಗೌರವ ಮಾಡಿದ ಬೇರೆ ಬೇರೆ ವಿಷಯ ಕೊಟ್ಟು, ಪ್ರಬಂಧ ಮಂಡನೆಗೆ ಅವಕಾಶ ನೀಡಿ ಸಾಹಿತ್ಯಿಕ ಹಿನ್ನೆಲೆಯಲ್ಲಿ ಬೆಳೆಸಿದುದನ್ನು ಸ್ಮರಿಸಿದ್ದಾರೆ.
೩. ನನ್ನ ಚೇತನ – ಸಂಸ್ಮರಣಾ ಲೇಖನಗಳು. ಡಾ. ವಾಣಿಯವರ ಬಾಳಿಗೆ ಬೆಳಕು, ಸ್ಫೂರ್ತಿ, ಚೇತನ ನೀಡಿದ ಅವರ ತಂದೆ ವಿದ್ವಾನ್ ರಾಮಚಂದ್ರ ಉಚ್ಚಿಲ್, ತಾಯಿ ಪೊನ್ನಮ್ಮ ಹಾಗೂ ಅವರ ಪತಿಯ ಸಂಸ್ಮರಣೆಯನ್ನು ಈ ಕೃತಿಯಲ್ಲಿ ದಾಖಲಿಸಲಾಗಿದೆ.
೪. ಎಲೆಮರೆಯ ಬರಹಗಾರ ದಿ. ನಾರಾಯಣ ಕೆ. ಉಚ್ಚಿಲ್ಕರ್ – ಇವರು ವರದಿಗಾರರಾಗಿದ್ದು ಬೇರೆ ಬೇರೆ ಪತ್ರಿಕೆಗಳಲ್ಲಿ ಬರೆದ ವರದಿಗಳನ್ನು ಅವರ ಮಕ್ಕಳಾದ ನವೀನ್ ಎನ್. ಉಚ್ಚಿಲ್ಕರ್, ನವನೀತ ಎನ್. ಉಚ್ಚಿಲ್ಕರ್ ಸಂಪಾದಿಸಿ ಕೃತಿರೂಪದಲ್ಲಿ ಸಂಕಲಿಸಿದ್ದಾರೆ.

ಈ ಎಂಟು ಕೃತಿಗಳ ಬಿಡುಗಡೆ ಸಮಾರಂಭವು ೨೦ ಎಪ್ರಿಲ್ ೨೦೨೫ ರವಿವಾರ ಸೋಮೇಶ್ವರ ಉಚ್ಚಿಲದ ಉಚ್ಚಿಲ ಬೋವಿ ಹಿರಿಯ ಪ್ರಾಥಮಿಕ ಶಾಲೆ ಇದರ ವಜ್ರಮಹೋತ್ಸವ ಸ್ಮಾರಕ ಸಭಾಗೃಹದಲ್ಲಿ ಸಂಜೆ ಘಂಟೆ ೫ಕ್ಕೆ ನಡೆಯಲಿದೆ. ಸಮಾರಂಭವನ್ನು ಹಿರಿಯ ವೈದ್ಯ, ಸಾಹಿತಿ ಡಾ. ರಮಾನಂದ ಬನಾರಿ ಉದ್ಘಾಟಿಸುವರು. ಮುಂಬೈ ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಡಾ ವಸಂತ ಕುಮಾರ್ ತಾಳ್ತಜೆ ಅಧ್ಯಕ್ಷತೆ ವಹಿಸುವರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಚ.ರಾ. ಸಂಸ್ಮರಣೆಯನ್ನು ನೆರವೇರಿಸುವರು. ಡಾ.ಎಂ. ಪ್ರಭಾಕರ ಜೋಶಿ, ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ, ನಂದಳಿಕೆ ಬಾಲಚಂದ್ರ ರಾವ್, ಮುರಳಿ ಕಡೆಕಾರ್ ನಾಗೇಶ್ ಕಲ್ಲೂರ್ ಮುಖ್ಯ ಅತಿಥಿಗಳಾಗಿರುವರು.ಸಮಾರಂಭಕ್ಕೆ ಮುನ್ನ ಅಪರಾಹ್ನ ಗಂ.2.30ರಿಂದ ಹಿರಿಯ ಕಲಾವಿದರಿಂದ ‘ಕರ್ಣ ಪರ್ವ’ ಯಕ್ಷಗಾನ ತಾಳಮದ್ದಳೆಯನ್ನು ಏರ್ಪಡಿಸಲಾಗಿದೆ. ರಾಜಾರಾಮ ಹೊಳ್ಳ ಕೈರಂಗಳ, ಮಯೂರ್ ನಾಯಗ, ಸ್ಕಂದ ಕುಮಾರ್ ಹಿಮ್ಮೇಳದಲ್ಲಿರುವರು. ಡಾ ಎಂ. ಪ್ರಭಾಕರ ಜೋಶಿ, ಭಾಸ್ಕರ ರೈ ಕುಕ್ಕುವಳ್ಳಿ, ಡಾ. ಪುರುಷೋತ್ತಮ ಬಿಳಿಮಲೆ ಮತ್ತು ಸದಾಶಿವ ಆಳ್ವ ತಲಪಾಡಿ ಅರ್ಥಧಾರಿಗಳಾಗಿ ಭಾಗವಹಿಸುವರು.
ಗುರುವಾರ ಮಂಗಳೂರು ಪತ್ರಿಕಾಭವನದಲ್ಲಿ ಜರಗಿದ ಸುದ್ದಿಗೋಷ್ಠಿಯಲ್ಲಿ ಮುಂಬಯಿಯ ಲೇಖಕಿ ಡಾ. ವಾಣಿ ಎನ್.ಉಚ್ಚಿಲ್ಕರ್ ಬಿಡುಗಡೆಗೊಳ್ಳುವ ಕೃತಿಗಳ ವಿವರ ನೀಡಿದರು. ಸಲಹೆಗಾರ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಕಾರ್ಯಕ್ರಮದ ವಿವರ ನೀಡಿದರು. ನವನೀತ ಎನ್. ಉಚ್ಚಿಲ್ಕರ್, ನಿಧೀಶ್ ಉಪಸ್ಥಿತರಿದ್ದರು.