ಪುಣೆ ಬಂಟರ ಸಂಘದ ಯುವ ವಿಭಾಗದ ಕಾರ್ಯಾಧ್ಯಕ್ಷರಾಗಿ 2025 – 2027 ರ ಅವಧಿಗೆ ಬಹುಮುಖ ಪ್ರತಿಭೆಯ ಅಭಿನಂದನ್ ಎಸ್ ಶೆಟ್ಟಿಯವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಏಪ್ರಿಲ್ 14 ರಂದು ಓಣಿಮಜಲು ಜಗನ್ನಾಥ ಶೆಟ್ಟಿ ಸಾಂಸ್ಕೃತಿಕ ಬಂಟರ ಭವನದಲ್ಲಿ ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆಯವರ ಅಧ್ಯಕ್ಷತೆಯಲ್ಲಿ ನಡೆದ ಸಂಘದ ವಿಶೇಷ ಮಹಾಸಭೆಯಲ್ಲಿ ಸಂಘದ ನೂತನ ಕಾರ್ಯಕಾರಿ ಸಮಿತಿ, ಮಹಿಳಾ ವಿಭಾಗ, ಯುವ ವಿಭಾಗ ಹಾಗೂ ದಕ್ಷಿಣ, ಉತ್ತರ, ಪೂರ್ವ ಹಾಗೂ ಪಶ್ಚಿಮ ಪ್ರಾದೇಶಿಕ ಸಮಿತಿಗಳ ಕಾರ್ಯಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು.

ಪುಣೆಯ ಸಿಂಹಘಡ್ ಕಾಲೇಜಿನಲ್ಲಿ ಬಿಬಿಎ ವ್ಯಾಸಂಗ ಪೂರೈಸಿ, ಪುಣೆಯ MIT ಕಾಲೇಜಿನಲ್ಲಿ ಎಂಬಿಎ ಪದವಿ ಗಿಟ್ಟಿಸಿಕೊಂಡಿದ್ದಾರೆ. ಪ್ರಸ್ತುತ ಐಟಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಅಭಿನಂದನ್ ಶೇಖರ್ ಶೆಟ್ಟಿಯವರು ವಿದ್ಯಾರ್ಥಿ ಜೀವನದಲ್ಲಿ ಆದರ್ಶ ವಿದ್ಯಾರ್ಥಿಯಾಗಿದ್ದುಕೊಂಡು ಕಾಲೇಜಿನ ಶಿಕ್ಷಕರ ಅಚ್ಚುಮೆಚ್ಚಿನ ವಿದ್ಯಾರ್ಥಿಯಾಗಿ ಪ್ರಶಂಸೆಯನ್ನು ಪಡೆದಿರುವುದು ಮಾತ್ರವಲ್ಲದೆ ಕಾಲೇಜಿನಿಂದ “ಸ್ಟೂಡೆಂಟ್ ಆಫ್ ದ ಇಯರ್ ಅವಾರ್ಡ್ -2019” ನ್ನು ಪಡೆದುಕೊಂಡಿದ್ದರು. ಪುಣೆ ಬಂಟರ ಸಂಘದ ದಕ್ಷಿಣ ಪ್ರಾದೇಶಿಕ ಸಮಿತಿಯ ನಿಕಟಪೂರ್ವ ಕಾರ್ಯಾಧ್ಯಕ್ಷ ಹಾಗೂ ಪ್ರಸ್ತುತ ಪುಣೆ ಬಂಟರ ಸಂಘದ ಪದಾಧಿಕಾರಿಯಾಗಿರುವ, ಹೋಟೆಲ್ ಉದ್ಯಮಿ ಮೂಲತಃ ಮಡಿಕೇರಿಯ ಶೇಖರ್ ಸಿ ಶೆಟ್ಟಿ ಮತ್ತು ಲತಾ ಎಸ್ ಶೆಟ್ಟಿ ದಂಪತಿಗಳ ಪುತ್ರನಾಗಿದ್ದು, ನಾಡಿನ ತುಳು ಭಾಷೆ, ಸಂಸ್ಕೃತಿಯ ಬಗ್ಗೆ ಅಪಾರವಾದ ಒಲವನ್ನು ಹೊಂದಿದ್ದಾರೆ. ಭವಿಷ್ಯದಲ್ಲಿ ತನ್ನ ಅಮೋಘ ಪ್ರತಿಭೆಗಳ ಮೂಲಕ ಇನ್ನಷ್ಟು ಯಶಸ್ಸನ್ನು ಗಳಿಸುವಂತಾಗಲಿ ಎಂಬ ಶುಭ ಹಾರೈಕೆ ನಮ್ಮದು.