ದೆಹಲಿಯಲ್ಲಿ ರಾಜ್ಯ ಸರಕಾರ ನಿರ್ಮಿಸಿರುವ ಕರ್ನಾಟಕ ಭವನ ಕಾವೇರಿಯನ್ನು ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಜಂಟಿಯಾಗಿ ಲೋಕಾರ್ಪಣೆಗೊಳಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಈ ಹಿಂದೆ ಇದು ಮೈಸೂರು ಭವನವಾಗಿತ್ತು. ದೆಹಲಿಯಲ್ಲಿ ಒಟ್ಟು ಮೂರು ಕರ್ನಾಟಕ ಭವನಗಳು ಇವೆ. ಸುಭದ್ರ ರಾಜ್ಯ ನಿರ್ಮಾಣದಲ್ಲಿ ಎಲ್ಲರ ಭಾಗವಹಿಸುವಿಕೆ ಅಗತ್ಯವಾಗಿದ್ದು, ಕೇಂದ್ರ ಸರಕಾರದ ಬಳಿ ಹಲವು ಕೆಲಸ ಕಾರ್ಯಗಳಿಗಾಗಿ ಅಧಿಕಾರಿಗಳು, ಸಚಿವರು, ಶಾಸಕರು ದೆಹಲಿಗೆ ಬರಬೇಕಾಗುತ್ತದೆ. ಇವರೆಲ್ಲರಿಗೂ ಕರ್ನಾಟಕ ಭವನ ತಂಗಲು ಸಹಾಯವಾಗುತ್ತದೆ ಎಂದರು. ಅಲ್ಲದೆ, ಕರ್ನಾಟಕ ಭವನ ಎರಡರ ಪುನರ್ ನಿರ್ಮಾಣ ಮಾಡುವ ಯೋಜನೆಯೂ ಇದೆ ಎಂದು ತಿಳಿಸಿದರು. ಕೊರೋನಾ ಸೇರಿ ಹಲವು ಸಂಕಷ್ಟಗಳಿಂದಾಗಿ ಕಟ್ಟಡ ಕಾಮಗಾರಿಗೆ ವಿಳಂಬವಾಯಿತು. ಈಗ ಭವ್ಯ ಕಟ್ಟಡ ನಿರ್ಮಾಣಗೊಂಡಿದೆ. ಕರ್ನಾಟಕ ಭವನ ಬೆಳೆದು ಬಂದ ಇತಿಹಾಸ ಕುರಿತು ಬೋರ್ಡ್ ಹಾಕಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಸೂಚಿಸಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ. ಖರ್ಗೆಯವರ ಸಲಹೆಯಂತೆ ಶಾಸಕರು ತಂಗಲು ಇನ್ನಷ್ಟು ಅನುಕೂಲಗಳನ್ನು ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದರು.ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ನೂತನ ಕಟ್ಟಡದಲ್ಲಿ ಮುಖ್ಯಮಂತ್ರಿ, ರಾಜ್ಯಪಾಲರು ಹಾಗೂ ಸಚಿವರ ಕೊಠಡಿಗಳು ಚೆನ್ನಾಗಿವೆ. ಶಾಸಕರ ಕೊಠಡಿಗಳಿಗೆ ಸಿಟ್ಟೌಟು ಅಳವಡಿಸುವಂತೆ ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಕರ್ನಾಟಕ ಭವನದ ಕಾಮಗಾರಿಯನ್ನು ಅತ್ಯುತ್ತಮವಾಗಿ ನಿರ್ವಹಿಸಿದ ಎಸ್ ಕೆ ಎಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕಾರ್ಕಳ ಸುಜಯ್ ಕುಮಾರ್ ಶೆಟ್ಟಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಸಮಾಜ ಕಲ್ಯಾಣ ಸಚಿವ ಡಾ. ಎಚ್. ಸಿ. ಮಹದೇವಪ್ಪ, ಸಹಕಾರ ಸಚಿವ ಕೆ. ಎನ್. ರಾಜಣ್ಣ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ, ನವದೆಹಲಿಯಲ್ಲಿ ರಾಜ್ಯದ ವಿಶೇಷ ಪ್ರತಿನಿಧಿಗಳಾದ ಟಿ.ಬಿ ಜಯೇಂದ್ರ ಮತ್ತು ಪ್ರಕಾಶ್ ಹುಕ್ಕೇರಿ, ರಾಜ್ಯ ಸಭಾ ಸದಸ್ಯರಾದ ಜೈ ರಾಮ್ ರಮೇಶ್ ಮತ್ತು ಸುಧಾ ನಾರಾಯಣ ಮೂರ್ತಿ, ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಅರವಿಂದ್ ಬೆಲ್ಲದ್, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಸೇರಿದಂತೆ ಇತರರು ಉಪಸ್ಥಿತರಿದ್ದರು.