ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಸಂಸ್ಥಾಪಕ ಡಾ| ಎ. ಸದಾನಂದ ಶೆಟ್ಟಿ ಅವರ ನೇತೃತ್ವದಲ್ಲಿ ವರ್ಷಪ್ರತಿ ಜರಗುವ ತುಳುವರ ಸೌರಮಾನ ಯುಗಾದಿ ‘ಬಿಸು ಪರ್ಬೊ’ ಸಂಭ್ರಮವನ್ನು ಈ ಬಾರಿ ಏಪ್ರಿಲ್ 16ರಂದು ಮಂಗಳೂರಿನಲ್ಲಿ ಏರ್ಪಡಿಸಲಾಗಿದೆ. ಈ ಬಗ್ಗೆ ಕಾರ್ಯಕ್ರಮದ ಪೂರ್ವ ಸಿದ್ಧತೆಗಾಗಿ ಟ್ರಸ್ಟ್ ಪದಾಧಿಕಾರಿಗಳ ಸಭೆ ಏಪ್ರಿಲ್ 1ರಂದು ಬಲ್ಮಠದ ಕುಡ್ಲ ಸದಾಶಯ ಕಚೇರಿಯಲ್ಲಿ ಜರಗಿತು. ಕಾರ್ಯಾಧ್ಯಕ್ಷ ದೇವಿ ಚರಣ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಬಿಸುಕಣಿ, ಪದ ನಲಿಕೆ: ತುಳುನಾಡಿನ ಕೃಷಿ ಸಮೃದ್ಧಿಯನ್ನು ಬಿಂಬಿಸುವ ತುಳುವರ ಯುಗಾದಿಯನ್ನು ಅರ್ಥವತ್ತಾಗಿ ಆಚರಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಅಲ್ಲದೆ ತುಳು ಸಂಸ್ಕೃತಿಯನ್ನು ಬಿಂಬಿಸುವ ‘ಪದ ನಲಿಕೆ’ ಹಾಡು ಮತ್ತು ಕುಣಿತಗಳ ‘ಬಿಸು ಮಿನದನ’ ಕಾರ್ಯಕ್ರಮವನ್ನು ವಿವಿಧ ಬಂಟರ ಸಂಘಗಳ ವತಿಯಿಂದ ನಡೆಸಲಾಗುವುದು. ಇದರೊಂದಿಗೆ ವಿಷು ಹಬ್ಬದ ಮಹತ್ವವನ್ನು ತಿಳಿಸುವ ಸಲುವಾಗಿ ತಜ್ಞರಿಂದ ವಿಶೇಷ ಉಪನ್ಯಾಸವನ್ನು ಏರ್ಪಡಿಸಲಾಗುವುದು ಎಂದು ಸಭಾಧ್ಯಕ್ಷರು ನುಡಿದರು. ‘ಎಪ್ರಿಲ್ 14ರಂದು ನಾಡಿನೆಲ್ಲೆಡೆ ಹಬ್ಬದ ಸಂಭ್ರಮ ವಿರುವುದರಿಂದ ಈ ಕಾರ್ಯಕ್ರಮವನ್ನು 2025 ಏಪ್ರಿಲ್ 16 ಬುಧವಾರದಂದು ಸಂಜೆ ಗಂ.4ರಿಂದ ನಗರದ ಬಲ್ಮಠ ಕುಡ್ಲ ಪೆವಿಲಿಯನ್ ನಲ್ಲಿ ನಡೆಸಲಾಗುವುದು’ ಎಂದು ಮಹಿಳಾ ವಿಭಾಗದ ಅಧ್ಯಕ್ಷೆ ವಿಜಯಲಕ್ಷ್ಮಿ ಬಿ. ಶೆಟ್ಟಿ ಪ್ರಕಟಿಸಿದರು.

ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಸಂಘಟನಾ ಕಾರ್ಯದರ್ಶಿ ರಾಜಗೋಪಾಲ್ ರೈ, ‘ಸದಾಶಯ’ ಸಂಪಾದಕ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ, ಪ್ರಮುಖರಾದ ರಾಮಚಂದ್ರ ಆಳ್ವ, ರತನ್ ಶೆಟ್ಟಿ, ಜಗದೀಶ ಶೆಟ್ಟಿ ಅಡ್ಯಾರ್, ಆರತಿ ಅರ್. ಆಳ್ವ, ಗೀತಾ ಶೆಟ್ಟಿ ಸಲಹೆ ಸೂಚನೆ ನೀಡಿದರು. ಪದಾಧಿಕಾರಿಗಳಾದ ಗೋಪಿನಾಥ ಶೆಟ್ಟಿ, ರಾಜಾ ಶೆಟ್ಟಿ, ಜೀವನ್ ಶೆಟ್ಟಿ, ಜಗನ್ನಾಥ ಶೆಟ್ಟಿ, ರಾಜ್ ಕುಮಾರ್ ಶೆಟ್ಟಿ, ಸತ್ಯಪ್ರಕಾಶ್ ಶೆಟ್ಟಿ, ನಾಗೇಶ್ ಶೆಟ್ಟಿ, ವತ್ಸಲ ಮಲ್ಲಿ, ಹಂಸಾ ಎನ್. ಶೆಟ್ಟಿ ಸಮಾಲೋಚನೆಯಲ್ಲಿ ಪಾಲ್ಗೊಂಡರು.
















































































































