ತುಳುವನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಿಸುವ ಸಂಬಂಧ ಬಜೆಟ್ ಅಧಿವೇಶನ ಮುಗಿದ ಬಳಿಕ ಕರಾವಳಿ ಭಾಗದ ಹಿರಿಯ ಸಾಹಿತಿಗಳು, ಜನಪ್ರತಿನಿಧಿಗಳನ್ನು ಒಳಗೊಂಡಂತೆ ಮುಖ್ಯಮಂತ್ರಿಗಳ ಜೊತೆ ಸಭೆ ಆಯೋಜಿಸುವುದಾಗಿ ಸ್ವೀಕರ್ ಯು.ಟಿ. ಖಾದರ್ ಹೇಳಿದರು. ತುಳುಭವನದ ಅಮೃತ ಸೋಮೇಶ್ವರ ಸಭಾಂಗಣದಲ್ಲಿ ಜರಗಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಮತ್ತು ಪುಸ್ತಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅವರು ಮಾತನಾಡಿ, ಈ ಬೇಡಿಕೆ ಬಹಳ ಹಳೆಯದ್ದು, ಪ್ರಯತ್ನಗಳು ಸತತವಾಗಿ ನಡೆದಿವೆ ಎಂದು ಹೇಳಿದರು.

ತುಳು ಭಾಷೆಯಲ್ಲಿ ಕಲಿತವರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಲು ರಾಜ್ಯ ಸರಕಾರ ಮುಂದಾಗಬೇಕು ಎಂದು ಆಗ್ರಹಿಸಿದ ಅವರು, ತುಳು ಭಾಷೆಯನ್ನು ಉಳಿಸಿ, ಬೆಳೆಸುವ ಮಹತ್ತರ ಹೊಣೆ ನಮ್ಮೆಲ್ಲರ ಮೇಲಿದೆ. ತುಳು ಕೇವಲ ಭಾಷೆಯಲ್ಲ ಸಂಸ್ಕೃತಿ, ಉಡುಗೆ, ವೈದ್ಯಕೀಯ ಪದ್ಧತಿಯೆಲ್ಲಾ ಸೇರಿದೆ. ತುಳು ಭಾಷೆಗೆ ಲಿಪಿ ಇದ್ದು ಶಾಲೆಗಳಲ್ಲಿ ಕಲಿಯಲು ಪ್ರೋತ್ಸಾಹ ನೀಡಬೇಕು. ಉಳ್ಳಾಲದಲ್ಲಿ ತುಳು ಗ್ರಾಮ ನಿರ್ಮಾಣಕ್ಕೆ ಜಾಗ ಗುರುತಿಸಿ ಅನುಷ್ಠಾನಗೊಳಿಸುತ್ತೇವೆ ಎಂದು ಹೇಳಿದರು.
ದಿಕ್ಸೂಚಿ ಭಾಷಣಗೈದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ, ರಾಜ್ಯದಲ್ಲಿ 230 ಸಣ್ಣಪುಟ್ಟ ಭಾಷೆಗಳಿದ್ದು, ಅದರಲ್ಲಿ ತುಳು ದೊಡ್ಡದು. ಕುಂದಾಪುರದ ಬೆಳಾರಿ ಭಾಷೆ ನಮ್ಮ ಕಣ್ಣ ಮುಂದೆಯೇ ನಶಿಸುತ್ತಿದೆ. ಮೈಸೂರು ಮಹಾರಾಜರ ಕಾಲದಲ್ಲಿ ಸುಮಾರು 50 ಸಾವಿರ ಮಂದಿ ಕೊರಗ ಭಾಷೆ ಮಾತನಾಡುತ್ತಿದ್ದು, ಸದ್ಯ 2000 ಮಂದಿಗೆ ಇಳಿದಿದೆ. ಇಂಥಹ ಎಲ್ಲಾ ಭಾಷೆಗಳನ್ನು ಉಳಿಸಬೇಕು ಎಂದು ಹೇಳಿದರು. ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಡಿ. ವೇದವ್ಯಾಸ ಕಾಮತ್, ಉಮಾನಾಥ ಕೋಟ್ಯಾನ್, ಕರ್ನಾಟಕ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೀಯ ಮಮತಾ ಡಿ ಎಸ್ ಗಟ್ಟಿ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಉಮರ್ ಯು. ಎಚ್., ಪ್ರಮುಖರಾದ ಡಾ. ಅಮರಶ್ರೀ ಅಮರನಾಥ ಆಳ್ವ, ಡಾ. ಇಂದಿರಾ ಹೆಗ್ಡೆ, ಉಷಾ ರೈ ಮತ್ತಿತರು ಉಪಸ್ಥಿತರಿದ್ದರು. ಸದಸ್ಯರಾದ ನಾಗೇಶ್ ಕುಮಾರ್ ಉದ್ಯಾವರ ಸ್ವಾಗತಿಸಿ, ಗುರುಪ್ರಸಾದ್ ರೈ ನಿರೂಪಿಸಿದರು.
ಅಕಾಡೆಮಿಯ 2022, 2023, ಮತ್ತು 2024ನೇ ಸಾಲಿನ ವಿವಿಧ ಪ್ರಶಸ್ತಿಗಳನ್ನು ರಘುಪತಿ ಕೆಮ್ತೂರು, ರತ್ನಮಾಲಾ ಪುರಂದರ ಬೆಂಗಳೂರು, ಪ್ರಭಾಕರ ಶೇರಿಗಾರ ಉಡುಪಿ, ಶಿಮಂತೂರು ಚಂದ್ರಹಾಸ ಸುವರ್ಣ ಮುಂಬೈ, ನೆಕ್ಕಿದಪುಣಿ ಗೋಪಾಲಕೃಷ್ಣ ಬೆಂಗಳೂರು, ಲಕ್ಷ್ಮಣ ಕಾಂತ ಕಣಂತೂರು, ಯಶವಂತ ಬೋಳೂರು, ಸರೋಜಿನಿ ಎಸ್. ಶೆಟ್ಟಿ, ಬಿ.ಕೆ. ದೇವರಾವ್, ರಾಜೇಶ್ ಶೆಟ್ಟಿ ದೋಟ, ರಘು ಇಡ್ಕಿದು, ರಾಜಶ್ರೀ ಟಿ. ರೈ ಪೆರ್ಲ, ಕುಶಾಲಾಕ್ಷಿ ವಿ. ಕುಲಾಲ್, ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್, ಡಾ. ಚಿನ್ನಪ್ಪಗೌಡ, ಯಶೋಧ ಮೋಹನ್, ಡಾ. ವಿ.ಕೆ. ಯಾದವ್, ಶಾರದಾ ಅಂಚನ್, ರಘುನಾಥ ವರ್ಕಾಡಿ ಅವರಿಗೆ ಪ್ರದಾನಿಸಲಾಯಿತು.