ಖ್ಯಾತ ತುಳು ಕನ್ನಡ ಸಾಹಿತಿ, ವಿಮರ್ಶಕಿ, ರಾಜಶ್ರೀ ಟಿ.ರೈ ಪೆರ್ಲ ಅವರ “ಮುಸ್ರಾಲೊ ಪಟ್ಟೊ” ತುಳು ಕಾದಂಬರಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2023ನೇ ಸಾಲಿನ ಪುಸ್ತಕ ಬಹುಮಾನದ ಕಾದಂಬರಿ ವಿಭಾಗಕ್ಕೆ ಆಯ್ಕೆಯಾಗಿದೆ. ತುಳುನಾಡಿನ ಅಳಿದುಳಿದ ಗತ ವೈಭವನ್ನು ಸಾಂಸ್ಕೃತಿಕ ಕಥನ ರೂಪದಲ್ಲಿ ಅಚ್ಚಾಗಿಸಿದ ಈ ಕಾದಂಬರಿಯಲ್ಲಿ ತುಳುನಾಡ ಭಾಷೆ, ಕೃಷಿ, ಆಚರಣೆ, ಸಂಸ್ಕತಿ, ಸಂಸ್ಕಾರವನ್ನು ಸಮ್ಮಿಳಿತಗೊಳಿಸಿ ಬರೆದ ಈ ಸಾಂಸ್ಕೃತಿಕ ಕಥನ ಸುಮಾರು 400ಕ್ಕೂ ಮಿಕ್ಕ ಪೇಜುಗಳಲ್ಲಿ ಕಾರ್ತಿಕೇಯ ಪ್ರಕಾಶನದ ವತಿಯಿಂದ 2023ರಲ್ಲಿ ಪ್ರಥಮ ಮುದ್ರಣ ಕಂಡಿದೆ.

ಹಿರಿಯ ಜಾನಪದ ವಿದ್ವಾಂಸರಾದ ಡಾ. ಚಿನ್ನಪ್ಪ ಗೌಡ ಮುನ್ನುಡಿ ಬರೆದಿರುವ ಮುಸ್ರಾಲೊ ಪಟ್ಟೊ ಕಾದಂಬರಿಯಲ್ಲಿ ಸಾಮಾಜಿಕ ವ್ಯವಸ್ಥೆಯ ಅಡಿಪಾಯವೊಂದು ಅಳಿದಾಗ ಅದನ್ನು ಸಂಶೋಧಿಸಿ ಸೂಕ್ತ ದಾಖಲೀಕರಣ ಸಂಗ್ರಹಿಸಿ ಪುನಃ ಸಮಾಜದ ಮುಂದೆ ತೆರೆದಿಡುವ ಪ್ರಯತ್ನ ಮಾಡಿರುವುದು ಕಾದಂಬರಿಗಾರ್ತಿಯ ವಿಶೇಷತೆಯಾಗಿದೆ ಎಂದು ಸಾಹಿತ್ಯ ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ.
ಈ ಮೊದಲೇ “ಮಮಿನದೊ” ತುಳು ಕವನ ಸಂಕಲನ, “ಚವಳ” ತುಳು ಕಥಾ ಸಂಕಲನ, “ಬದಿ ಏತ್ ಕೊರ್ಪರ್?”, “ಪುಂಚದ ಮಣ್ಣ್ “, “ತತ್ರಮೋಸದ ಬಾಲೆ”, “ಚೇಕತ್ತಿ” ತುಳು ನಾಟಕ, “ರಡ್ಡ್ ಕವುಲೆ” ತುಳು ಅಂಕಣ ಬರಹ, “ಪಣಿಯಾರ”, “ಬಜಿಲಜ್ಜೆ”, “ಕೊಂಬು”, “ಚೌಕಿ” ತುಳು ಕಾದಂಬರಿಗಳನ್ನು ರಚಿಸಿರುವ ರಾಜಶ್ರೀ ರೈಗೆ ಎಸ್.ಯು. ಪಣಿಯಾಡಿ ಕಾದಂಬರಿ ಪ್ರಶಸ್ತಿ, ಜಾಗತಿಕ ಮಟ್ಟದ ನಾಟಕ ರಚನಾ ಪ್ರಶಸ್ತಿ, ಕೇರಳ ಸರಕಾರ ರಾಜ್ಯೋದಯ ಪುರಸ್ಕಾರ, ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ತುಳು ನಾಟಕ ಬಹುಮಾನ, “ತುಳುನಾಡಿನ ಮೂರಿಗಳ ಆರಾಧನೆ” ಕೃತಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀ ನಾರಾಯಣ ಗುರುಪೀಠದ ಸಂಶೋಧನಾ ಪ್ರಶಸ್ತಿ ಲಭಿಸಿದೆ.
ಇದೀಗ ಪ್ರಾಚೀನ ತುಳುನಾಡಿನ ಮೈಲುಗಲ್ಲಾಗಬಲ್ಲ ಅತೀ ದೊಡ್ಡ ಕಾದಂಬರಿಯೊಂದಕ್ಕೆ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿಸಿರುವುದು ಇನ್ನಷ್ಟು ಕೃತಿ ರಚನೆಗೆ ಆನೆ ಬಲವೊದಗಿಸಿದೆ ಎಂದು ರಾಜಶ್ರೀ ಟಿ.ರೈ ಸಂತಸ ವ್ಯಕ್ತಪಡಿಸಿದ್ದಾರೆ.
ಉಳಿದಂತೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು 2022ನೇ ಸಾಲಿನ ಕವನ ವಿಭಾಗದಲ್ಲಿ ರಾಜೇಶ್ ಶೆಟ್ಟಿ ದೋಟ ಅವರ “ಮುಗುದಾರಗೆ” ಕೃತಿ, 2023ನೇ ಕವನ ವಿಭಾಗದಲ್ಲಿ ರಘ ಇಡ್ಕಿದು ಅವರ “ಎನ್ನ ನಲಿಕೆ”, ಅನುವಾದ ವಿಭಾಗದಲ್ಲಿ ಕುಶಾಲಕ್ಷಿ ವಿ ಕಣ್ವತೀರ್ಥ ಅವರ “ತಗೋರಿ ಮಿತ್ ದ ಮಣ್ಣ್” ಕೃತಿ ಆಯ್ಕೆಯಾಗಿದೆ. 2022ನೇ ಸಾಲಿನ ಉಷಾ ಪಿ ರೈ ದತ್ತಿನಿಧಿ ಪ್ರಶಸ್ತಿಗೆ ಕಬ್ಬಿನಾಲೆ ವಸಂತ ಭಾರಧ್ವಾಜರ “ತುಳು ಕಾವ್ಯ ಮೀಮಾಂಸೆ” ಕೃತಿ, 2023ನೇ ಸಾಲಿನ ಪ್ರಶಸ್ತಿಗೆ ಡಾ. ಚಿನ್ನಪ್ಪ ಗೌಡರ “ಕರಾವಳಿ ಕಥನ” ಕೃತಿ ಆಯ್ಕೆಗೊಂಡಿದೆ.
ಮಾ.15ಕ್ಕೆ ಬೆಳಗ್ಗೆ 10 ಗಂಟೆಗೆ ತುಳುಭವನದ ಅಮೃತ ಸೋಮೇಶ್ವರ ಸಭಾಂಗಣದಲ್ಲಿ ಪುಸ್ತಕ ಬಹುಮಾನ ವಿತರಣೆ ಹಾಗೂ ವಿವಿಧ ದತ್ತಿನಿಧಿ ಪುಸ್ತಕ ಬಹುಮಾನಗಳನ್ನು ವಿತರಿಸಲಾಗುವುದೆಂದು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ ಕಾಪಿಕಾಡ್ ತಿಳಿಸಿದ್ದಾರೆ.








































































































