ವ್ಯಕ್ತಿಗಿಂತ ಸಂಘ ಮುಂದು ಎಂದು ಎಲ್ಲರನ್ನೂ ಒಗ್ಗೂಡಿಸಿ ಸಂಘವನ್ನು ಮುನ್ನಡೆಸುವುದರ ಜತೆಗೆ ಉತ್ತಮ ಅಭಿವೃದ್ಧಿ ಕಾರ್ಯಗಳ ಜತೆ ಉತ್ತಮ ನಾಯಕತ್ವದ ಮೂಲಕ ಸರಳ ವ್ಯಕ್ತಿತ್ವದ ಶಾಂತಾರಾಮ ಸೂಡರು ಮುಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ ಎಂದು ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ. ಜಯಕರ್ ಶೆಟ್ಟಿ ಹೇಳಿದರು.ಅವರು ಮಾರ್ಚ್ 9ರಂದು ಬಂಟರ ಸಂಘ ಪೆರ್ಡೂರು ಮಂಡಲದಿಂದ ನಿರ್ಮಾಣಗೊಳ್ಳಲಿರುವ ವಿಜಯಲಕ್ಷ್ಮೀ ದಿನೇಶ ಹೆಗ್ಡೆ ಹವಾನಿಯಂತ್ರಿತ ಸಭಾಭವನ ಮತ್ತು ಜಲಜಾಕ್ಷಿ ವೀರಣ್ಣ ಸೂಡ ಬಯಲು ವೇದಿಕೆ ಹಾಗೂ ಸಂಘದ ಕಚೇರಿ ಕಟ್ಟಡಕ್ಕೆ ಶಿಲಾನ್ಯಾಸ ಸಮಾರಂಭದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಂಘದ ಅಧ್ಯಕ್ಷ ಕೆ. ಶಾಂತರಾಮ ಸೂಡ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಲೋಕಾಯುಕ್ತ ನ್ಯಾ. ಪಿ. ವಿಶ್ವನಾಥ ಶೆಟ್ಟಿ ಮಾತನಾಡಿ, ಗ್ರಾಮೀಣ ಪ್ರದೇಶವಾದ ಪೆರ್ಡೂರಿನಲ್ಲಿ ಬಂಟರ ಸಂಘವು ನಿರಂತರ ಅತ್ಯುತ್ತಮ ಕಾರ್ಯಕ್ರಮಗಳನ್ನು ನಡೆಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.
ವಿಜಯಲಕ್ಷ್ಮೀ ದಿನೇಶ ಹೆಗ್ಡೆ ಹವಾನಿಯಂತ್ರಿತ ಸಭಾಭವನಕ್ಕೆ ದಿನೇಶ ಹೆಗ್ಡೆ ಮತ್ತು ವಿಜಯಲಕ್ಷ್ಮೀ, ಸಂಘದ ಕಚೇರಿಯ ಕಟ್ಟಡಕ್ಕೆ ಶೇಡಿಕೊಡ್ಲು ವಿಠಲ ಶೆಟ್ಟಿ, ಶ್ರೀಮತಿ ಜಲಜಾಕ್ಷಿ ವೀರಣ್ಣ ಸೂಡ ಬಯಲು ವೇದಿಕೆಗೆ ಮುಂಬೈ ಉದ್ಯಮಿ ಕೃಷ್ಣ ವೈ. ಶೆಟ್ಟಿ ಅವರು ಶಿಲಾನ್ಯಾಸ ನೆರವೇರಿಸಿದರು. ಶ್ರೀಧರ ಶೆಟ್ಟಿ ಕುತ್ಯಾರು ಬೀಡು ಸಂಪಾದಕತ್ವದ ‘ಪೆರ್ಡೂರಿನ ಬಂಟರು’ ಸ್ಮರಣ ಸಂಚಿಕೆಯನ್ನು ಉದ್ಯಮಿ ಸುಧಾಕರ ಶೆಟ್ಟಿ ಭದ್ರಾವತಿ ಬಿಡುಗಡೆಗೊಳಿಸಿದರು.
ಬಂಟ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಬಂಟ ಸಾಧಕರಾದ ದಿವಾಕರ್ ಶೆಟ್ಟಿ ಸಾಂಗ್ಲಿ, ಸತೀಶ್ ಶೆಟ್ಟಿ, ಶೇಖರ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಉದ್ಯಮಿ ರಘು ಎಲ್. ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘದ ಉಡುಪಿ ಸಮಿತಿ ಸಂಚಾಲಕ ಶಿವಪ್ರಸಾದ್ ಹೆಗ್ಡೆ, ಮಾತೃ ಸಂಘದ ಮಾಜಿ ಸಂಚಾಲಕ ಜಯರಾಜ್ ಹೆಗ್ಡೆ, ಡಾ. ರಮಾನಂದ ಸೂಡ, ಸಂಘದ ಕೋಶಾಧಿಕಾರಿ ಪ್ರಮೋದ್ ರೈ ಪಳಜೆ, ಉಪಾಧ್ಯಕ್ಷರಾದ ಮಹೇಶ್ ಶೆಟ್ಟಿ ಪೈಬೆಟ್ಟು, ಸುಧಾಕರ ಶೆಟ್ಟಿ, ಸುರೇಶ್ ಹೆಗ್ಡೆ, ದಿನೇಶ್ಚಂದ್ರ ಶೆಟ್ಟಿ, ಶಿವರಾಮ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ ಕೆ. ಶೆಟ್ಟಿ ಕುತ್ಯಾರು ಬೀಡು ವಿದ್ಯಾರ್ಥಿ ವೇತನದ ಪಟ್ಟಿ ವಾಚಿಸಿದರು. ಸಂಘದ ಉಪಾಧ್ಯಕ್ಷ ಸತೀಶ್ ಶೆಟ್ಟಿ ಕುತ್ಯಾರು ಬೀಡು ಸ್ವಾಗತಿಸಿ, ಚಿತ್ರಪಾಡಿ ಸತೀಶ್ ಕಾರ್ಯಕ್ರಮ ನಿರೂಪಿಸಿ, ಸಂಘದ ಉಪಾಧ್ಯಕ್ಷ ರಾಜ್ ಕುಮಾರ್ ಶೆಟ್ಟಿ ವಂದಿಸಿದರು.