ತಾಯಿಯ ಹೆಸರಿನ ಟ್ರಸ್ಟ್ ನಲ್ಲಿ ತನ್ನ ಹುಟ್ಟುಹಬ್ಬವನ್ನು ಆಚರಿಸುತ್ತಾ, ರಕ್ತದಾನದಂತಹ ಮಹತ್ಕಾರ್ಯಕ್ಕೆ ಕೈ ಹಾಕಿರುವುದು ಅತ್ಯಂತ ಶ್ರೇಷ್ಠ ಕಾರ್ಯಕ್ರಮ ಮತ್ತು ಸಮಾಜಕ್ಕೆ ಮಾದರಿಯಾದ ಒಂದು ಚಿಂತನೆ ಎಂದು ಸುಣ್ಣಾರಿ ಎಕ್ಸಲೆಂಟ್ ಪಿಯು ಕಾಲೇಜಿನ ಛೇರ್ಮನ್ ಎಂ ಮಹೇಶ್ ಹೆಗ್ಡೆ ಹೇಳಿದರು. ಅವರು ಬಿದ್ಕಲ್ ಕಟ್ಟೆಯ ಕೆಪಿಎಸ್ ಪ್ರೌಢ ಶಾಲೆಯಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಮೊಳಹಳ್ಳಿ ದಿನೇಶ್ ಹೆಗ್ಡೆ ಜಯರತ್ನ ಟ್ರಸ್ಟ್ ನ ಪ್ರವರ್ತಕ ಮೊಳಹಳ್ಳಿ ದಿನೇಶ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಒಬ್ಬ ವ್ಯಕ್ತಿ ನೀಡುವ ರಕ್ತದಿಂದ ಮೂರು ವ್ಯಕ್ತಿಗಳ ಜೀವ ಉಳಿಸಬಹುದಾದರೆ ಅಂತಹ ರಕ್ತದಾನಕ್ಕಿಂತ ಶ್ರೇಷ್ಠವಾದ ದಾನ ಇನ್ನೊಂದಿಲ್ಲ ಎಂಬುದನ್ನು ಮನಗಂಡು ನನ್ನ ಹುಟ್ಟು ಹಬ್ಬದ ದಿನದಂದು ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದೆನೆ. ಜಾತಿ ಧರ್ಮ ಲಿಂಗ ಭೇದವಿಲ್ಲದೆ ಮಾಡಬಹುದಾದ ಏಕೈಕ ದಾನ ಅಂದರೆ ಅದು ರಕ್ತದಾನ. ಸಮಾಜದ ಎಲ್ಲಾ ಯುವಕ ಯುವತಿಯರು ರಕ್ತದಾನ ಮಾಡುವ ಮೂಲಕ ಮನುಷ್ಯನ ಜೀವವನ್ನು ಕಾಪಾಡುವ ಪಣತೊಡಬೇಕಾಗಿದೆ ಎಂದರು. ಇದೇ ಸಂದರ್ಭ ಸ್ವತಃ ತಾವೇ ರಕ್ತದಾನ ಮಾಡಿದರು.
ಕುಂದಾಪುರ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಚೇರ್ಮನ್ ಜಯಕರ ಶೆಟ್ಟಿ ರೆಡ್ ಕ್ರಾಸ್ ಸಂಸ್ಥೆ ಮತ್ತು ರಕ್ತದಾನದ ಮಹತ್ವ ವಿವರಿಸಿದರು. ಮೊಳಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಉಡುಪಿ ಲಯನ್ಸ್ ಕ್ಲಬ್ ನ ಅಂಬಾಸಿಡರ್ ಅರುಣ್ ಕುಮಾರ್ ಹೆಗ್ಡೆ, ಜಗನ್ನಾಥ ಶೆಟ್ಟಿ ಚಿಟ್ಟಿಬೈಲ್, ಕೆಪಿಎಸ್ ಶಾಲೆಯ ಕರುಣಾಕರ ಶೆಟ್ಟಿ, ಚೈತ್ರ ಅಡಪ್ಪ, ಶಿವರಾಮ ಶೆಟ್ಟಿ ಉಪಸ್ಥಿತರಿದ್ದರು.
