54 ವರ್ಷಗಳ ಇತಿಹಾಸವಿರುವ ಕರ್ನಾಟಕ ರಾಜ್ಯ ಸರಕಾರಿ ವೈದ್ಯಾಧಿಕಾರಿಗಳ ಸಂಘ (KGMOA)ದ 2027-29ರ ಸಾಲಿನ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪ್ರಪ್ರಥಮ ಬಾರಿಗೆ ಉಡುಪಿ ಜಿಲ್ಲೆಯ ಸಮರ್ಥ ನಾಯಕ, ಉಡುಪಿ ಸಾರ್ವಜನಿಕ ಜಿಲ್ಲಾ ಆಸ್ಪತ್ರೆಯ ಹಿರಿಯ ತಜ್ಞ ವೈದ್ಯ ಡಾ. ನಿಕಿನ್ ಸಿ. ಶೆಟ್ಟಿ ಆಯ್ಕೆಯಾಗಿದ್ದಾರೆ. ಮೂಲತಃ ಉಡುಪಿ ಜಿಲ್ಲೆಯವರಾದ ಡಾ. ನಿಕಿನ್ ಶೆಟ್ಟಿ ಅವರು, ಕಂದಾವರ ಚಂದ್ರಶೇಖರ್ ಶೆಟ್ಟಿ ಹಾಗೂ ಗಿಳಿಯಾರು ನಿರ್ಮಲ ಶೆಟ್ಟಿ ಅವರ ಪುತ್ರ. ಕೋಲಾರದ ಎಸ್.ಡಿ.ಯು.ಎಂ.ಸಿ ಕಾಲೇಜಿನಲ್ಲಿ ಎಂಬಿಬಿಎಸ್ ಮಾಡಿರುವ ನಿಕಿನ್ ಮಣಿಪಾಲದ ಕೆಎಂಸಿಯಲ್ಲಿ ಜನರಲ್ ಮೆಡಿಸಿನ್ ನಲ್ಲಿ ಎಂ.ಡಿ. ಪಡೆದಿದ್ದಾರೆ.

1998ರಲ್ಲಿ ಸೇವೆಗೆ ಸೇರಿರುವ ಡಾ. ನಿಕಿನ್ ಶೆಟ್ಟಿಯವರು ಕೊಕ್ಕರ್ಣೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ, ಹೆಬ್ರಿಯ ಸಿ.ಹೆಚ್.ಸಿಯಲ್ಲಿ, ಬಳಿಕ ಉಡುಪಿ ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಅಜ್ಜರಕಾಡು ಸರಕಾರಿ ಆಸ್ಪತ್ರೆಯಲ್ಲಿ ಹಿರಿಯ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೇ ಈ ಹಿಂದೆ ಉಡುಪಿ ಜಿಲ್ಲಾ ಕರ್ನಾಟಕ ಸರಕಾರಿ ವೈದ್ಯಾಧಿಕಾರಿಗಳ ಸಂಘದಲ್ಲಿ ಎರಡು ಬಾರಿ ಅಧ್ಯಕ್ಷರಾಗಿ ಮತ್ತು ಒಂದು ಬಾರಿ ಜೊತೆ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ಇದೀಗ 2027-29ರ ಅವಧಿಗೆ ಕರ್ನಾಟಕ ಸರಕಾರಿ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷ ಡಾ. ನಿಕಿನ್ ಶೆಟ್ಟಿ ಅವರಿಗೆ ಉಡುಪಿ ಜಿಲ್ಲಾ ಕರ್ನಾಟಕ ಸರಕಾರಿ ವೈದ್ಯಾಧಿಕಾರಿಗಳ ಸಂಘ (KGMOA) ಹಾಗೂ ಕುಂದಾಪುರ ಘಟಕದ ಕರ್ನಾಟಕ ಸರ್ಕಾರಿ ನೌಕರರ ಸಂಘ ಅಧ್ಯಕ್ಷ ಡಾ. ನಾಗೇಶ್ ಅಭಿನಂದನೆ ಸಲ್ಲಿಸಿದ್ದಾರೆ. ಡಾ. ನಿಕಿನ್ ಆಯ್ಕೆ ಉಡುಪಿ ಜಿಲ್ಲಾ ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ (KGMOA)ದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಒಂದು ಸಾಧನೆ ಎಂದಿರುವ ಡಾ. ನಾಗೇಶ್, ಕೇವಲ 20 ದಿನಗಳಲ್ಲಿ 27 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಗೆಲುವು ಸಾಧಿಸಿರುವುದು ಶ್ಲಾಘನೀಯ ಎಂದ ಅವರು, ನಿಕಿನ್ ಗೆಲುವಿಗೆ ಶ್ರಮಿಸಿದ ಉಡುಪಿ ಜಿಲ್ಲಾ ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಸರ್ವ ಸದಸ್ಯರಿಗೂ, ಕೋರ್ ಸಮಿತಿಯ ಸರ್ವ ಸದಸ್ಯರಿಗೂ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಡಾ. ನಿಕಿನ್ ಶೆಟ್ಟಿಯವರಿಗೆ ಕುಂದಾಪುರ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ. ಮಹೇಂದ್ರ ಕುಮಾರ್ ಶೆಟ್ಟಿ ಅಭಿನಂದಿಸಿದ್ದಾರೆ.