ತ್ರಿರಂಗ ಸಂಗಮ ಮುಂಬಯಿ ಇದರ ರೂವಾರಿಗಳಾದ ಕರ್ನೂರು ಮೋಹನ್ ರೈ, ಅಶೋಕ್ ಪಕ್ಕಳ ಮತ್ತು ನವೀನ್ ಶೆಟ್ಟಿ ಇನ್ನಬಾಳಿಕೆ ಈ ತ್ರಿಮೂರ್ತಿಗಳು ಲಕ್ಷ್ಮೀ ಪುತ್ರರಲ್ಲದಿದ್ದರೂ ಸರಸ್ವತಿ ಪುತ್ರರು ಎನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ. ಇದಕ್ಕೆ ಈ ಮೂವರಲ್ಲಿರುವ ವಿಭಿನ್ನ ರೀತಿಯ ಬಹುಮುಖ ಪ್ರತಿಭೆಗಳೇ ಸಾಕ್ಷಿ. ಬಂಟರ ಸಂಘದ ಎಲ್ಲಾ ಕಾರ್ಯಕ್ರಮಗಳ ಯಶಸ್ವಿಯ ಹಿಂದೆ ಈ ಮೂವರ ಯೋಗದಾನವೂ ಆವಿಸ್ಮರಣೀಯ ಎನ್ನುವಂತಿದೆ. ಅವರ ಸಮಾಜಪರ ಸೇವಾಕಾರ್ಯ ಅಪಾರ. ಇಂದು ಈ ಸಂಸ್ಥೆಯ ಮೂರನೇ ವರ್ಷದ ಈ ವಾರ್ಷಿಕೋತ್ಸವವು ಇಷ್ಟೊಂದು ಅದ್ದೂರಿಯೊಂದಿಗೆ ಜನಸಾಗರದ ಮಧ್ಯೆ ಜರಗಿದೆ ಎನ್ನುವಂತಿದ್ದರೆ ಅದಕ್ಕೆ ಈ ಮೂವರ ಸೇವಾಕಾರ್ಯವೇ ನಿದರ್ಶನವಾಗಿದೆ. ಕೇವಲ ಮಾತು ಮುಖ್ಯವಲ್ಲ. ನಾವು ಮಾಡುವ ಕೆಲಸಕ್ಕೆ ಮಾತನಾಡಬೇಕು ಎನ್ನುವುದನ್ನು ಮತ್ತು ಹಣ ಸಂಪಾದನೆಗಿಂತ ಜನರ ಮನಸ್ಸು ಗೆಲ್ಲುವುದು ಮುಖ್ಯ. ಇದುವೇ ದೊಡ್ಡ ಸಾಧನೆ ಎಂಬುದನ್ನು ಕಾರ್ಯಕ್ರಮದ ಮೂಲಕ ತೋರಿಸಿ ಕೊಟ್ಟ ಹಿರಿಮೆ ತ್ರಿರಂಗ ಸಂಗಮದ ರೂವಾರಿಗಳದ್ದಾಗಿದೆ ಎಂದು ಬಂಟರ ಸಂಘ ಮುಂಬೈ ಇದರ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿಯವರು ಅಭಿಮಾನದ ನುಡಿಗಳನ್ನಾಡಿದರು. ಅವರು ಫೆಬ್ರವರಿ 9 ರ ರವಿವಾರ ಕುರ್ಲಾ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಮಧ್ಯಗುತ್ತು ಲೀಲಾವತಿ ಶ್ಯಾಮ್ ಎನ್. ಶೆಟ್ಟಿ ಸ್ಮರಣೀಯ ನಿರ್ಮಿತ ವೇದಿಕೆಯಲ್ಲಿ ತ್ರಿರಂಗ ಸಂಗಮ ಮುಂಬೈ ಸಂಸ್ಥೆಯ ಮೂರನೇ ವರ್ಷದ ವಾರ್ಷಿಕೋತ್ಸವದ ಸಮಾರೋಪ ಸಮಾರಂಭದ ಅಧ್ಯಕ್ಷ ಸ್ಥಾನವನ್ನು ವಹಿಸಿ ಮಾತನಾಡುತ್ತಿದ್ದರು.ಮುಖ್ಯ ಅತಿಥಿಗಳ ಸಾಲಿನಲ್ಲಿ ಉಪಸ್ಥಿತರಿದ್ಧವರಲ್ಲಿ ಬಂಟರ ಸಂಘ ಪುಣೆ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಇವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸುತ್ತಾ, ತ್ರಿರಂಗ ಸಂಗಮದ ರೂವಾರಿಗಳಿಗೂ ಪುಣೆಯವರಾದ ನಮಗೂ ಒಂದು ಆತ್ಮೀಯವಾದ ಸಂಬಂಧವಿದೆ. ನಮ್ಮ ಪುಣೆ ಬಂಟರ ಸಂಘದ ಯಾವುದೇ ಒಂದು ದೊಡ್ಡ ಮಟ್ಟದ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿದ್ದರೆ ಅದರಲ್ಲಿ ಮೂವರ ಯೋಗದಾನ ಬಹಳಷ್ಟು ಇದೆ. ಈ ರೀತಿಯ ಪ್ರೀತಿ ಮತ್ತು ಒಂದು ಋಣವಿರುವುದರಿಂದ ನಾವಿಂದು ಪುಣೆಯಿಂದ ಈ ಕಾರ್ಯಕ್ರಮಕ್ಕಾಗಿ ಬಂದವರಿದ್ದೇವೆ. ಒಂದು ಉತ್ತಮ ಪ್ರಾಮಾಣಿಕ ಪ್ರಯತ್ನಕ್ಕೆ ದೇವರ ದಯೆ ಖಂಡಿತಾ ಇದ್ದೇ ಇರುತ್ತದೆ ಎನ್ನುವುದಕ್ಕೆ ಈ ಕಾರ್ಯಕ್ರಮದ ಯಶಸ್ಸು ಸಾಕ್ಷಿಯಾಗಿದೆ ಎಂದೇನ್ನುತ್ತಾ ತ್ರಿರಂಗ ಸಂಗಮ ಮುಂಬೈ ಇದರ ನಾಲ್ಕನೇ ಕಾರ್ಯಕ್ರಮ ಪುಣೆಯಲ್ಲಿ ಆಯೋಜಿಸುವುದಿದ್ದರೆ ಪುಣೆಯ ಸಮಾಜ ಬಾಂಧವರಾದ ನಮ್ಮೆಲ್ಲರ ಸಹಕಾರವಿದೆ ಎಂದರು.
ಯು.ಎ.ಇ ಬಂಟ್ಸ್ ದುಬಾಯಿ ಇದರ ಗೌರವ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿಯವರು ಮಾತನಾಡುತ್ತಾ, ಇಂದಿನ ಈ ಕಾರ್ಯಕ್ರಮವನ್ನು ನೋಡಿ ಮನಸ್ಸು ಪುಲಕಿತವಾಗಿದೆ. ಬಹಳಷ್ಟು ಸಂತೋಷವಾಗಿದೆ. ಎಲ್ಲಾ ಸಂಪಾದನೆಗಿಂತ ಜನ ಸಂಪಾದನೆ ಮಾಡುವುದು ಬಹಳ ಕಷ್ಟ. ಅಂತಹ ಜನ ಸಂಪಾದನೆಯನ್ನು ಮಾಡಿದ ಹಿರಿಮೆ ಇವರದ್ದಾಗಿದೆ. ಈ ಸಂಸ್ಥೆ ಸುವರ್ಣ ಮಹೋತ್ಸವವನ್ನು ಆಚರಿಸಿ ಸಂಭ್ರಮಿಸುವಂತಾಗಲಿ ಎಂದರು. ಶ್ರೀ ರಥ್ ಫೈನಾನ್ಸಿಯಲ್ ಪ್ರೈ ಲಿ.ನ ಆಡಳಿತ ನಿರ್ದೇಶಕ ರತ್ನಾಕರ್ ಶೆಟ್ಟಿ ಮುಂಡ್ಕೂರುರವರು ಮಾತನಾಡುತ್ತಾ, ತ್ರಿರಂಗ ಸಂಗಮದ ಸಮಾಜಪರ ಸೇವೆ, ಕಲೆಗಾಗಿ ಕಲಾವಿದರಿಗಾಗಿ ಮಾಡುವ ಸೇವೆ ನಿಜವಾಗಿ ಮೆಚ್ಚುವಂಥದ್ದು ಮುಂಬೈಯಲ್ಲಿ ಜರಗುವ ಎಲ್ಲಾ ಸಮಾಜ ಬಾಂಧವರ ಹೆಚ್ಚಿನ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಜನಸಾಮಾನ್ಯರ ಪ್ರೀತಿಯನ್ನು ಸಂಪಾದಿಸಿದ್ದಾರೆ ಎಂದೆನ್ನುತ್ತಾ ಇಂತಹ ಕಾರ್ಯಕ್ರಮ ಈ ಸಂಸ್ಥೆಯ ಆಶ್ರಯದಲ್ಲಿ ನಿರಂತರ ನಡೆಯುತ್ತಿರಲಿ ಎಂದರು.
ಬಂಟರ ಸಂಘ ಮುಂಬಯಿ ಇದರ ಉಪಾಧ್ಯಕ್ಷ ಮತ್ತು ಬಾಬಾಸ್ ಗ್ರೂಪ್ ಆಫ್ ಕಂಪನೀಸ್ ನ ಆಡಳಿತ ನಿರ್ದೇಶಕ ಮಹೇಶ್ ಶೆಟ್ಟಿಯವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸುತ್ತಾ, ತ್ರಿರಂಗ ಸಂಗಮದ ರೂವಾರಿಗಳಾದ ಈ ಮೂವರು ಉದ್ಯಮ ಅಥವಾ ಉದ್ಯೋಗ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡದಿದ್ದರೂ ಕಲಾ ಸಂಘಟಕರಾಗಿ ಬಹಳಷ್ಟು ಸಾಧನೆಯನ್ನು ಮಾಡಿದ್ದಾರೆ ಎಂದೆನ್ನುತ್ತಾ ಅವರನ್ನು ಅಭಿನಂದಿಸಿದರು. ಸದಾನಂದ ಹೆಲ್ತ್ ಕೇರ್ ಸಯನ್ ಇಲ್ಲಿನ ಡಾ. ಸದಾನಂದ ಶೆಟ್ಟಿಯವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸುತ್ತಾ, ಸಮಾಜಪರ ಸೇವಾ ಕಾರ್ಯದ ಜೊತೆಗೆ ನಾವು ನಮ್ಮ ಆರೋಗ್ಯದ ಕಡೆಗೆ ಗಮನ ಕೊಡುವುದನ್ನು ಮರೆಯಬಾರದು. ಎಲ್ಲಕ್ಕಿಂತ ಮುಖ್ಯ ಆರೋಗ್ಯ ಎಂದೆನ್ನುತ್ತಾ ಯಾವ ರೀತಿಯಲ್ಲಿ ಆರೋಗ್ಯವನ್ನು ಕಾಪಾಡಬೇಕು ಎಂಬ ಬಗ್ಗೆ ಮಾಹಿತಿಯನ್ನು ನೀಡಿದರು.
ಸಮಾರಂಭದ ವೇದಿಕೆಯಲ್ಲಿ ಅತಿಥಿಗಳಾಗಿ ಭಾರತ್ ಕೋ ಆಪರೇಟಿವ್ ಬ್ಯಾಂಕ್ ನ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ, ಟ್ರೈಕೋನ್ ಪೋಲಿಮಾರ್ ಫೈ. ಲಿ. ಕಂಪೆನಿ ಇದರ ಆಡಳಿತ ನಿರ್ದೇಶಕ ಅನಿಲ್ ಶೆಟ್ಟಿ ಏಳಿಂಜೆ, ವೆಲ್ಕಮ್ ಪ್ಯಾಕೇಜಿಂಗ್ ಇಂಡಸ್ಟ್ರೀಸ್ ಇದರ ಆಡಳಿತ ನಿರ್ದೇಶಕ ರವೀಂದ್ರನಾಥ್ ಭಂಡಾರಿ, ಪುಣೆ ಬಂಟರ ಸಂಘದ ಕಾರ್ಯದರ್ಶಿ ಅಜಿತ್ ಹೆಗ್ಡೆ, ಪುಣೆ ಬಂಟರ ಸಂಘದ ಕಾರ್ಯಕಾರಿ ಸಮಿತಿಯ ಹಿರಿಯ ಸದಸ್ಯ ಸತೀಶ್ ಶೆಟ್ಟಿ ಉಪಸ್ಥಿತರಿದ್ದರು.
ಈ ಎಲ್ಲಾ ಅತಿಥಿ ಗಣ್ಯರನ್ನು ತ್ರಿರಂಗ ಸಂಗಮ ಮುಂಬೈ ಇದರ ರೂವಾರಿಗಳಾದ ಕರ್ನೂರು ಮೋಹನ್ ರೈ, ಅಶೋಕ್ ಪಕ್ಕಳ ಮತ್ತು ನವೀನ್ ಇನ್ನ ಬಾಳಿಕೆಯವರು ಶಾಲು ಹೊದಿಸಿ, ಹೂಗುಚ್ಛ ನೆನಪಿನ ಕಾಣಿಕೆಯೊಂದಿಗೆ ಗೌರವಿಸಿದರು. ಅದರಲ್ಲೂ ಬಂಟರ ಸಂಘ ಮುಂಬೈ ಇದರ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿಯವರನ್ನು ಸಮಾರೋಪ ಸಮಾರಂಭದ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಬೇಕಾಗಿದ್ದರೂ ತುರ್ತು ಕಾರ್ಯದ ನಿಮಿತ್ತ ಸಮಾರೋಪ ಸಮಾರಂಭಕ್ಕಿಂತ ಮೊದಲೇ ನಿರ್ಗಮಿಸಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರನ್ನು, ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಇವರನ್ನು, ಯುಎಇ ದುಬಾಯಿ ಇದರ ಅಧ್ಯಕ್ಷ ಸರ್ವತ್ತೋಮ ಶೆಟ್ಟಿಯವರನ್ನು, ಶಾಲು ಹೊದಿಸಿ, ಪೇಟ ತೊಡಿಸಿ, ಫಲಪುಷ್ಪ ನೆನಪಿನ ಕಾಣಿಕೆಯೊಂದಿಗೆ ಸನ್ಮಾನ ಪತ್ರವನ್ನು ಪ್ರದಾನಿಸಿ ಸತ್ಕರಿಸಲಾಯಿತು. ಅದೇ ರೀತಿ ಈ ಕಾರ್ಯಕ್ರಮಕ್ಕೆ ವಿವಿಧ ರೀತಿಯಲ್ಲಿ ಪ್ರಾಯೋಜಕತ್ವವನ್ನು ಮತ್ತು ಸಹಾಯ, ಸಹಕಾರವನ್ನು ನೀಡಿ ಪ್ರೋತ್ಸಾಹಿಸಿದ ದಾನಿಗಳನ್ನು ಶಾಲು ಹೊದಿಸಿ ಹೂಗುಚ್ಚ ನೆನಪಿನ ಕಾಣಿಕೆಯೊಂದಿಗೆ ಗೌರವಿಸಿ ಕೃತಜ್ಞತೆಯನ್ನು ಸಲ್ಲಿಸಲಾಯಿತು.ಗಾಯಕ ವಿಜಯ ಶೆಟ್ಟಿ ಮೂಡುಬೆಳ್ಳೆಯವರ ಪ್ರಾರ್ಥನೆ ಮತ್ತು ಅತಿಥಿ ಗಣ್ಯರ ಹಸ್ತದಿಂದ ದೀಪ ಪ್ರಜ್ವಲನೆಯೊಂದಿಗೆ ಸಮಾರೋಪ ಸಮಾರಂಭದ ಸಭಾ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು. ಕರ್ನೂರು ಮೋಹನ್ ರೈಯವರು ಅತಿಥಿ ಗಣ್ಯರೆಲ್ಲರನ್ನೂ ಪರಿಚಯಿಸಿ ಸ್ವಾಗತಿಸಿದರು. ಇದೇ ವೇಳೆ ಸಭೆಯಲ್ಲಿ ಉಪಸ್ಥಿತರಿದ್ದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳನ್ನು, ದಾನಿಗಳನ್ನು, ಗಣ್ಯರನ್ನು ಗೌರವಿಸಲಾಯಿತು.
ಸಮೂಹ ಗೀತೆಗೆ ತೀರ್ಪುಗಾರರಾಗಿ ಸಹಕರಿಸಿದ ಪದ್ಮನಾಭ ಸಸಿಹಿತ್ಲು ಮತ್ತು ಶೈಲಜಾ ಅಮರನಾಥ್ ಶೆಟ್ಟಿ ಹಾಗೇ ನೃತ್ಯ ಸ್ಪರ್ಧೆಯ ತೀರ್ಪುಗಾರರಾಗಿ ಸಹಕರಿಸಿದ ಮೀನಾಕ್ಷಿ ಶ್ರೀಯಾನ್ ಮತ್ತು ಪ್ರಿಯಾ ಶೆಟ್ಟಿಯವರನ್ನು ಗೌರವಿಸಲಾಯಿತು. ಸಭಾ ಕಾರ್ಯಕ್ರಮವನ್ನು ರಂಗಕರ್ಮಿ ನವನೀತ್ ಶೆಟ್ಟಿ ಕದ್ರಿಯವರು ನಿರೂಪಿಸಿದರು. ನವೀನ್ ಶೆಟ್ಟಿ ಇನ್ನ ಬಾಳಿಕೆಯವರು ವಂದಿಸಿದರು. ಬೆಳಗಿನಿಂದ ರಾತ್ರಿಯವರೆಗೆ ನಿರಂತರ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಜರಗಿದ ಈ ವಾರ್ಷಿಕೋತ್ಸವ ಸಮಾರಂಭವು ಭಜನೆ, ಯಕ್ಷಗಾನ ನೃತ್ಯ ವೈಭವದಿಂದ ಕೂಡಿದ ತೆಂಕು ಮತ್ತು ಬಡಗು ತಿಟ್ಟಿನ ಯಕ್ಷಗಾನ, ಗೌಜಿ ಗಮ್ಮತ್, ಹಾಸ್ಯ ಸಿಂಚನ, ಜಾದು ಪ್ರದರ್ಶನ, ಸಮೂಹ ಗೀತೆ ಮತ್ತು ನೃತ್ಯ ಸ್ಪರ್ಧೆ ಇತ್ಯಾದಿ ಮನೋರಂಜನಾ ಕಾರ್ಯಕ್ರಮದೊಂದಿಗೆ ವಿಜೃಂಭಿಸಿತು. ಹಾಗೇ ಕಿಕ್ಕಿರಿದು ನೆರೆದ ಪ್ರೇಕ್ಷಕ ವರ್ಗ ಇದಕ್ಕೆ ಸಾಕ್ಷಿಯಾಯಿತು. ಕಾರ್ಯಕ್ರಮದಲ್ಲಿ ಬೆಳಿಗ್ಗೆ ಉಪಹಾರ ಮಧ್ಯಾಹ್ನ ಊಟ, ಸಂಜೆ ಲಘು ಉಪಾಹಾರ ಮತ್ತು ಕಾರ್ಯಕ್ರಮದ ಕೊನೆಯಲ್ಲಿ ಪ್ರೀತಿ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.