ನಮಗೆ ಜೀವನದಲ್ಲಿ ವಿದ್ಯೆ, ಬುದ್ದಿ, ಸಂಸ್ಕಾರ, ಸಂಸ್ಕ್ರತಿಯನ್ನು ತಿಳಿ ಹೇಳಿ ಸುಸಂಸ್ಕ್ರತರನ್ನಾಗಿ ಮಾಡಿದ ಮಾತಾ ಪಿತರ ಸೇವೆ ಮಾಡುವುದು ಪ್ರತಿಯೊಬ್ಬನ ಕರ್ತವ್ಯ. ಹಾಗೆಯೇ ಸಮಾಜದಲ್ಲಿ ಬೆಳೆದು ನೆಲೆ ನಿಂತು ಗಣ್ಯ ವ್ಯಕ್ತಿಯಾಗಿ ರೂಪಿಸುವಲ್ಲಿ ಸಹಾಯ ಮಾಡಿದ ವ್ಯಕ್ತಿ, ಸಂಘ ಅಥವಾ ಸಮಾಜದ ಋಣವನ್ನು ಸಂದಾಯ ಮಾಡುವುದು ಕೂಡಾ ನಮ್ಮ ಧರ್ಮ ಎಂದು ಅರಿಯಬೇಕು. ನಾವು ನೀಡುವ ಯಾವುದೇ ದಾನ, ಧರ್ಮ, ಸೇವೆ ಯಾವುದೇ ಇರಲಿ ಅದು ನಮ್ಮ ತಂದೆ ತಾಯಿಯವರ ಆಶೀರ್ವಾದ ಮತ್ತು ದೈವ ದೇವರ ಕೃಪೆಯಿಂದ ಸಾಧ್ಯವಾಗಿದೆ. ನಾವು ಮಾಡಿದ ಸೇವೆಯ ಫಲ ನಮ್ಮ ಮಕ್ಕಳಿಗೆ ಸಿಗಬಹುದು. ಬಂಟ ಸಮಾಜಕ್ಕೆ ಸಂಘದ ಮೂಲಕ ಮಾನವೀಯತೆಯ ಸೇವೆ ಸಿಗಲಿ. ತಾವುಗಳು ಸಂಘದ ಮೂಲಕ ಹಾಕಿದ ಮೂರು ಯೋಜನೆಗಳು ಇಂದಿನ ದಿನಕ್ಕೆ ನಮ್ಮ ಸಮಾಜಕ್ಕೆ ಖಂಡಿತವಾಗಿ ಬೇಕಾಗಿದೆ. ದೈವ ದೇವರ ಆಶೀರ್ವಾದ ಹಿಡಿದುಕೊಂಡು ಬಂದಿದ್ದೇವೆ. ಇಲ್ಲಿ ನೆಲೆ ನಿಂತು ಬೆಳೆದಿದ್ದೇವೆ. ಬಂಟ ಸಮಾಜಕ್ಕಾಗಿ ನಮ್ಮ ಸಂಸ್ಕ್ರತಿಯನ್ನು ಬೆಳೆಸಬೇಕು. ಯಾವುದೇ ದ್ವೇಷ ಬೇದ ಭಾವ ಎನ್ನದೆ ಒಗ್ಗಟ್ಟಿನಿಂದಾಗಿ ನಾವು ಇನ್ನಷ್ಟು ಬೆಳೆಯಬೇಕು. ಸುಖ ಸಂಪತ್ತಿನಲ್ಲಿರುವ ನಾವು ಜೀವನದಲ್ಲಿ ಹಿಂದೆ ನಡೆದು ಬಂದ ದಾರಿಯನ್ನು ಮರೆಯದೆ ತಮ್ಮಿಂದಾದಷ್ಟು ಸಮಾಜ ಸೇವೆಯನ್ನು ಮಾಡೋಣ ಎಂದು ಮುಂಬಯಿ ಭವಾನಿ ಶಿಪ್ಪಿಂಗ್ ಪ್ರೈ ಲಿಮಿಟೆಡ್ ನ ಚೇರ್ಮನ್ ಕೆ.ಡಿ ಶೆಟ್ಟಿಯವರು ನುಡಿದರು.

ಪುಣೆ ಬಂಟ್ಸ್ ಅಸೋಸಿಯೇಷನ್ ನ 12 ನೇ ವಾರ್ಷಿಕೋತ್ಸವ ಸಮಾರಂಭವು ಫೆಬ್ರವರಿ 8 ರಂದು ಓಣಿಮಜಲು ಜಗನ್ನಾಥ್ ಶೆಟ್ಟಿ ಸಾಂಸ್ಕ್ರತಿಕ ಭವನ ಬಂಟರ ಭವನ ಬಾಣೇರ್ ಇಲ್ಲಿ ಜರಗಿತು. ಈ ಸಮಾರಂಭದ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಕೆ.ಡಿ ಶೆಟ್ಟಿಯವರು ಪುಣೆ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷ ರೋಹಿತ್ ಶೆಟ್ಟಿಯವರು ಸಮಾಜಕ್ಕಾಗಿ ಹಾಕಿಕೊಂಡ ಯೋಜನೆಗಳು ಸಂಘದ ಮಾಜಿ ಅಧ್ಯಕ್ಷರುಗಳು ಸಮಾಜ ಬಾಂಧವರ ಬಲದಿಂದ ದೊಡ್ಡ ಮರವಾಗಿ ಬೆಳೆಯಲಿದೆ. ಸ್ವಂತ ಕಟ್ಟಡ ಆಗಬೇಕೆಂಬ ಇಚ್ಛೆ ಕೂಡಾ ಪೂರ್ಣಗೊಳ್ಳಲಿದೆ. ಪುಣೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿಯವರು ಪುಣೆಯ ಮುಕುಟದಂತಿರುವ ಈ ಸುಂದರ ಭವನ ನಿರ್ಮಾಣ ಮಾಡುವಲ್ಲಿ ಅವರ ಶ್ರಮ, ಸಮಾಜದ ಮೇಲಿನ ಕಾಳಜಿ, ಹಿಡಿದ ಕಾರ್ಯ ಮಾಡಿಯೇ ತೀರುತ್ತೇನೆ ಎಂಬ ಛಲದಿಂದ ಆಗಿದೆ. ಇಂದು ಈ ಭವನದ ಚಾವಡಿಯಲ್ಲಿರುವ ಶಕ್ತಿಗಳ ಕೃಪೆ, ಅವರ ತಂದೆ ತಾಯಿಯವರ ಆಶೀರ್ವಾದ, ಸಮಾಜದ ಹಿರಿಯ ಬಾಂಧವರ ಪ್ರೋತ್ಸಾಹ ಸಹಕಾರದಿಂದ ಅವರ ಕೈಯಲ್ಲಿ ಈ ಭವನ ಆಗಿದೆ. ಅದರ ಹಿಂದಿರುವ ಕಷ್ಟ ಅವರಿಗೆ ಮಾತ್ರ ತಿಳಿದಿದೆ. ನಮ್ಮ ಜನ್ಮ ಭೂಮಿಯ ಮಣ್ಣಿನ ಗುಣದ ಶಕ್ತಿ, ದೈವ ದೇವರ ಆಶೀರ್ವಾದ ಮತ್ತು ನಮ್ಮ ನಾಯಕತ್ವ ಗುಣದಿಂದ ಎಲ್ಲರನ್ನು ಸೇರಿಸಿಕೊಂಡು ಸಮಾಜವನ್ನು ಬೆಳೆಸುವ ಶಕ್ತಿ ನಮಗಿದೆ. ಸಮಾಜಮುಖಿಯಾದ ಸೇವೆಯೊಂದಿಗೆ ಮುಂದುವರಿಯೋಣ ಎಂದರು.
ಪುಣೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ರೋಹಿತ್ ಶೆಟ್ಟಿ ನಗ್ರಿಗುತ್ತುರವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭದ ವೇದಿಕೆಯಲ್ಲಿ ಗೌರವ ಅತಿಥಿಗಳಾದ ಕರ್ನಾಟಕ ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ, ಬಾಲಿವುಡ್ ಖ್ಯಾತ ನಟಿ ಅಮೃತಾ ರಾವ್, ಬಂಟ್ಸ್ ಅಸೋಸಿಯೇಷನ್ ನಿಕಟಪೂರ್ವ ಅಧ್ಯಕ್ಷರಾದ ಗಣೇಶ್ ಹೆಗ್ಡೆ ಪುಣ್ಚೂರ್, ಉಪಾಧ್ಯಕ್ಷರುಗಳಾದ ಡಾ. ಸುಧಾಕರ್ ಶೆಟ್ಟಿ, ಸತೀಶ್ ರೈ ಕಲ್ಲಂಗಳ ಗುತ್ತು, ಪ್ರಧಾನ ಕಾರ್ಯದರ್ಶಿ ದಿನೇಶ್ ಶೆಟ್ಟಿ ಪೆಲತ್ತೂರು ಮೇಲ್ಮನೆ, ಕೋಶಾಧಿಕಾರಿ ಸಿಎ ಮನೋಹರ್ ಶೆಟ್ಟಿ, ಸಾಂಸ್ಕ್ರತಿಕ ವಿಭಾಗದ ಕಾರ್ಯಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರೇಷ್ಮಾ ಆರ್ ಶೆಟ್ಟಿ, ನಿಕಟಪೂರ್ವ ಕಾರ್ಯಾಧ್ಯಕ್ಷೆ ಉಷಾ ಯು ಶೆಟ್ಟಿ, ಕಾರ್ಯದರ್ಶಿ ಶರ್ಮಿಳಾ ಟಿ ರೈ, ಯುವ ವಿಭಾಗದ ಕಾರ್ಯಾಧ್ಯಕ್ಷ ಅದೀಪ್ ಶೆಟ್ಟಿಯವರು ಉಪಸ್ಥಿತರಿದ್ದರು. ವೇದಿಕೆಯಲ್ಲಿದ್ದ ಗಣ್ಯರು ದೀಪ ಪ್ರಜ್ವಲಿಸಿ ಕಲ್ಪವೃಕ್ಷ ಹೂ ಅರಳಿಸಿ ವಾರ್ಷಿಕೋತ್ಸವ ಸಂಭ್ರಮದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಲಿನಿ ಎಂ ಶೆಟ್ಟಿ, ತೇಜಸ್ವಿನಿ ಶೆಟ್ಟಿ, ರಕ್ಷಿತಾ ಶೆಟ್ಟಿಯವರು ಪ್ರಾರ್ಥನೆಗೈದರು. ಅಸೋಸಿಯೇಷನ್ ನ ನಿಕಟ ಪೂರ್ವ ಅಧ್ಯಕ್ಷ ಗಣೇಶ್ ಹೆಗ್ಡೆ ಸ್ವಾಗತಿಸಿದರು. ಸಂಘದ ವಾರ್ಷಿಕ ಕಾರ್ಯಕ್ರಮಗಳ ವರದಿಯನ್ನು ಪ್ರಧಾನ ಕಾರ್ಯದರ್ಶಿ ದಿನೇಶ್ ಶೆಟ್ಟಿ ಪೆಲತ್ತೂರು ಓದಿದರು.
ರೋಹಿತ್ ಶೆಟ್ಟಿಯವರು ಮಾತನಾಡಿ, ಪುಣೆಯ ನಗರ ದೊಡ್ಡದಾದಂತೆ ನಮ್ಮ ಸಮಾಜದ ಅಭಿವೃದ್ದಿಗಾಗಿ ಪುಣೆ ಬಂಟ್ಸ್ ಅಸೋಸಿಯೇಷನ್ ಸ್ಥಾಪನೆಯ ಉದ್ದೇಶ ಆಗಿದ್ದರೂ ಕೂಡಾ ಪುಣೆಯ ಎಲ್ಲಾ ಬಂಟ ಸಮಾಜ ಬಾಂಧವರಿಗಾಗಿ ಸೇವೆ ಮಾಡುವ ದ್ಯೇಯ ನಮ್ಮದು. ಬಂಟ ಸಮಾಜದ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ತಂದೆ ತಾಯಿಯಿಂದ ಸಿಗುತ್ತದೆ. ಅದನ್ನೇ ಬಂಡವಾಳವಾಗಿ ಇಟ್ಟುಕೊಂಡು ನಾವು ಮುಂದುವರಿದವರು. ದೈವ ದೇವರ ಆಶೀರ್ವಾದ ಪಡೆದ ನಾವು ಶ್ರದ್ದೆಯಿಂದ ಕಾರ್ಯ ಕೈಗೊಂಡರೆ ಸಮಾಜದ ಸಂಘಟನೆ ಗಟ್ಟಿಯಾಗಿ ಸಮಾಜದ ಅಭಿವ್ರದ್ದಿಗೆ ಪೂರಕವಾಗಿ ಕೆಲಸ ಮಾಡಲು ಸಾದ್ಯ ಎಂಬುದನ್ನು ಗಣೇಶ್ ಹೆಗ್ಡೆ ಮತ್ತು ಮಾಜಿ ಅಧ್ಯಕ್ಷರುಗಳು ತೋರಿಸಿಕೊಟ್ಟಿದ್ದಾರೆ. ಉತ್ತಮ ವಿಚಾರಗಳನ್ನು ಮುಂದಿಟ್ಟುಕೊಂಡು ಸಮಾಜ ಮುಖಿಯಾದ ಸೇವೆ ಮಾಡುವ ಉದ್ದೇಶ ನಮ್ಮದು. ಬಂಟ್ಸ್ತ್ ಅಸೋಸಿಯೇಷನ್ ವಿವಾಹ ವೇದಿಕೆ, ವ್ಯಕ್ತಿತ್ವ ವಿಕಸನ ಮತ್ತು ಉದ್ಯೋಗಾವಕಾಶ ಸಮಿತಿ, ಆಪತ್ಭಾಂದವ ಸಮಿತಿ ಎಂಬ ಮೂರು ಸಮಾಜಮುಖಿ ಯೋಜನಾ ಸಮಿತಿಗಳನ್ನು ರಚಿಸಿದ್ದೇವೆ. ಹಾಗೆಯೇ ಸಮಾಜದ ಹೆಣ್ಣು ಮಕ್ಕಳ ಮದುವೆಗೆ ಪೂರಕವಾಗಿ ಸಾಮೂಹಿಕ ವಿವಾಹ ಮಾಡುವ ಯೋಜನೆ ಕೂಡ ನಮ್ಮದು. ನಮ್ಮ ಸಮಾಜದ ಬಾಂಧವ್ಯ ಮತ್ತು ಸಂಘಟನೆಗಳನ್ನು ಬೆಳೆಸುವ ಈ ಯೋಜನೆಗಳಿಗೆ ತಮ್ಮೆಲ್ಲರ ಸಹಕಾರ ಸಿಗಲಿ. ಮಾತೃ ಪ್ರಧಾನವಾದ ಸಮಾಜದಲ್ಲಿ ಕಾರ್ಯ ಮಾಡುವವರು ನಮ್ಮ ಜೊತೆ ನಿಂತವರು ಬಹಳಷ್ಟು ಮಂದಿ ಇದ್ದಾರೆ. ನಮ್ಮ ಅತಿಥಿಗಳು ಕೆ.ಡಿ ಶೆಟ್ಟಿ, ಗುರುರಾಜ್ ಶೆಟ್ಟಿ ಗಂಟಿಹೊಳೆ ಉತ್ತಮ ಪ್ರೇರಣಾತ್ಮಕ ಸಲಹೆಗಳನ್ನು ನೀಡಿ ಪ್ರೋತ್ಸಾಹಿಸಿದ್ದಾರೆ. ಬಂಟರ ಭವನದ ರೂವಾರಿ ಸಂತೋಷ್ ಶೆಟ್ಟಿಯವರ ಸಹೋದರತ್ವದ ಉತ್ತಮ ಸಹಕಾರ ಮತ್ತು ಪ್ರೋತ್ಸಾಹ ಸಿಕ್ಕಿದೆ. ಗಣೇಶ್ ಹೆಗ್ಡೆಯವರ ಸಲಹೆ, ಸಮಿತಿಯ ಪದಾಧಿಕಾರಿಗಳು, ಮಾಜಿ ಅಧ್ಯಕ್ಷರುಗಳ ಸಹಕಾರ, ನಮ್ಮ ಮಹಿಳಾ ಶಕ್ತಿ, ನಮ್ಮ ಎಲ್ಲಾ ಸದಸ್ಯರು, ಯುವ ವಿಭಾಗ ಎಲ್ಲರೂ ಹೆಗಲಿಗೆ ಹೆಗಲು ಕೊಟ್ಟು ಮುನ್ನಡೆಸಿದ್ದಾರೆ ಎಲ್ಲರಿಗೂ ಧನ್ಯವಾದಗಳನ್ನು ಸಮರ್ಪಿಸುತ್ತಿದ್ದೇನೆ ಎಂದರು.ಮುಖ್ಯ ಅತಿಥಿ ಕೆ.ಡಿ ಶೆಟ್ಟಿಯವರನ್ನು ಬಂಟ್ಸ್ ಅಸೋಸಿಯೇಷನ್ ವತಿಯಿಂದ ಶಾಲು ಸ್ಮರಣಿಕೆ ನೀಡಿ ಸತ್ಕರಿಸಲಾಯಿತು. ಗೌರವ ಅತಿಥಿಗಳಾದ ಗುರುರಾಜ್ ಶೆಟ್ಟಿ ಗಂಟಿಹೊಳೆ, ನಟಿ ಅಮೃತಾ ರಾವ್ ರವರನ್ನು ಶಾಲು ಫಲ ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಅತಿಥಿಗಳನ್ನು ಕ್ರಮವಾಗಿ ಸ್ನೇಹಾ ರೋಹನ್ ಶೆಟ್ಟಿ, ಭವ್ಯರಾಣಿ ಎಸ್ ಶೆಟ್ಟಿ, ನಿಧಿ ರೋಹಿತ್ ಶೆಟ್ಟಿಯವರು ಪರಿಚಯಿಸಿದರು. ವಿಶೇಷವಾಗಿ ಬಂಟ್ಸ್ ಅಸೋಸಿಯೇಷನ್ ದಶಮ ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸಿ ಎರಡು ವರ್ಷಗಳ ತಮ್ಮ ಕಾರ್ಯಾವಧಿಯಲ್ಲಿ ನಿಜಕ್ಕೂ ಉತ್ತಮ ಕಾರ್ಯಗೈದ ನಿಕಟಪೂರ್ವ ಅಧ್ಯಕ್ಷ ಗಣೇಶ್ ಹೆಗ್ಡೆ ಪುಣ್ಚೂರ್ ದಂಪತಿಗಳನ್ನು ಶಾಲು ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಸಂಘಕ್ಕಾಗಿ ನಿರಂತರ ಉತ್ತಮ ಸೇವೆ ನೀಡಿದ ಉಪಾಧ್ಯಕ್ಷ ಸತೀಶ್ ರೈ ಕಲ್ಲಂಗಳ ಗುತ್ತುರವರನ್ನು ಕೂಡಾ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಉಡುಪಿಯ ಖ್ಯಾತ ವಕೀಲರಾದ ರತ್ನಾಕರ್ ಹೆಗ್ಡೆ ಮಟ್ಟಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಬಂಟ್ಸ್ ಅಸೋಸಿಯೇಷನ್ ನ ಮೂಲಕ ಮೂರು ಸಮಾಜಮುಖಿ ಸೇವಾಕಾರ್ಯಗಳ ನೂತನ ಸಮಿತಿಯನ್ನು ರಚನೆ ಮಾಡಿ ಸಂಘದ ಅಧ್ಯಕ್ಷ ರೋಹಿತ್ ಶೆಟ್ಟಿ ಸಭೆಯಲ್ಲಿ ಘೋಷಿಸಿದರು. ಮೊದಲದನೆಯದಾಗಿ ಬಂಟ್ಸ್ತ್ ಅಸೋಸಿಯೇಷನ್ ವಿವಾಹ ವೇದಿಕೆ ಇದರ ಕಾರ್ಯಾಧ್ಯಕ್ಷರಾಗಿ ಮಹೇಶ್ ಹೆಗ್ಡೆ ಪೊಳಲಿ, ಬಂಟ್ಸ್ ಅಸೋಸಿಯೇಷನ್ ವ್ಯಕ್ತಿತ್ವ ವಿಕಸನ ಮತ್ತು ಉದ್ಯೋಗಾವಕಾಶ ಸಮಿತಿಯ ಕಾರ್ಯಾಧ್ಯಕ್ಷರಾಗಿ ಶ್ರೀನಿವಾಸ್ ರೈ ಹಾಗೂ ಆಪತ್ಭಾಂದವ ಸಮಿತಿಯ ಕಾರ್ಯಾಧ್ಯಕ್ಷರಾಗಿ ರಂಜಿತ್ ಶೆಟ್ಟಿಯವರನ್ನು ಆಯ್ಕೆ ಮಾಡಿ ಅವರನ್ನು ವೇದಿಕೆಯಲ್ಲಿ ಗೌರವಿಸುವ ಮೂಲಕ ಜವಾಬ್ದಾರಿ ನೀಡಲಾಯಿತು. ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರುಗಳು, ಗಣ್ಯರನ್ನು ಅಸೋಸಿಯೇಷನ್ ವತಿಯಿಂದ ಗೌರವಿಸಲಾಯಿತು. ಪುಣೆ ಬಂಟರ ಸಂಘದ ವತಿಯಿಂದ ಅಧ್ಯಕ್ಷರಾದ ಸಂತೋಷ್ ಶೆಟ್ಟಿಯವರು ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷ ರೋಹಿತ್ ಶೆಟ್ಟಿಯವರನ್ನು ಸ್ಮರಣಿಕೆ ನೀಡಿ ಸತ್ಕರಿಸಿದರು. ಅಲ್ಲದೇ ಬಂಟ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು, ವಿಧ್ಯಾರ್ಥಿಗಳನ್ನು ಸತ್ಕರಿಸಲಾಯಿತು. ಬಂಟ್ಸ್ ಅಸೋಸಿಯೇಷನ್ ಆಯೋಜಿಸಿದ್ದ ಕ್ರೀಡಾ ಕೂಟದಲ್ಲಿ ವಿಜೇತ ತಂಡಗಳಿಗೆ ಅತಿಥಿ ಗಣ್ಯರು ಟ್ರೋಫಿ ನೀಡಿ ಗೌರವಿಸಿದರು. ಅತಿಥಿ ಗಣ್ಯರು ಸಾಂದರ್ಭಿಕವಾಗಿ ಮಾತನಾಡಿದರು. ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಬಂಟ್ಸ್ ಅಸೋಸಿಯೇಷನ್ ನ ಸದಸ್ಯರು, ಮಹಿಳಾ ವಿಭಾಗ ಮತ್ತು ಯುವ ವಿಭಾಗದವರಿಂದ ವೈವಿದ್ಯಮಯ ನೃತ್ಯ ಕಾರ್ಯಕ್ರಮ ಮತ್ತು ಪ್ರಶಂಸ ಕಾಪು ತಂಡದವರಿಂದ ಬಲೆ ತೆಲಿಪುಲೆ ಹಾಸ್ಯಮಯ ಕಾರ್ಯಕ್ರಮ ಪ್ರದರ್ಶನಗೊಂಡಿತು. ಅಕ್ಷತಾ ಸುಜೀತ್ ಶೆಟ್ಟಿ ಮತ್ತು ತಾರಾನಾಥ್ ಶೆಟ್ಟಿ ಮಡಂತ್ಯಾರ್ ರವರು ಕಾರ್ಯಕ್ರಮ ನಿರೂಪಿಸಿ, ಅಧ್ಯಕ್ಷ ರೋಹಿತ್ ಶೆಟ್ಟಿ ನಗ್ರಿಗುತ್ತು ಧನ್ಯವಾದಗೈದರು. ಅಸೋಸಿಯೇಷನ್ ನ ಸಮಿತಿಯ ಪದಾಧಿಕಾರಿಗಳು, ಮಾಜಿ ಅಧ್ಯಕ್ಷರುಗಳು, ಮಹಿಳಾ ವಿಭಾಗ, ಯುವ ವಿಭಾಗ ಮತ್ತು ಎಲ್ಲಾ ಸಮಿತಿ ಸದಸ್ಯರುಗಳು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.
ವರದಿ : ಹರೀಶ್ ಮೂಡಬಿದ್ರಿ ಪುಣೆ