ಕನ್ನಡಿಗರ ಮುಂದಾಳತ್ವದ ಮಹಾನಗರದ ಪ್ರತಿಷ್ಠಿತ ಸೇವಾ ಸಂಸ್ಥೆ ಶಿವಾಯ ಫೌಂಡೇಶನ್ ವತಿಯಿಂದ ಶಿವಾಯ ಸಂಸ್ಥೆಯ 7ನೇ ಸಂಸ್ಥಾಪನಾ ದಿನಾಚರಣೆ ಮತ್ತು ಸ್ವಾಮಿ ವಿವೇಕಾನಂದರ ಜನ್ಮದಿನ ದಿನಾಚರಣೆ ಪರೇಲ್ ನ ಟಾಟಾ ಕ್ಯಾನ್ಸರ್ ಆಸ್ಪತ್ರೆಯ ವಠಾರದಲ್ಲಿ ಜನವರಿ 12ರಂದು ಜರಗಿತು.ನೀನು ನಿನಗಾಗಿ ಬದುಕಿದರೆ ಅದು ಬದುಕಲ್ಲ. ಬದಲಾಗಿ ಸುತ್ತಲಿನ ಸಮಾಜಕ್ಕಾಗಿ, ಈ ದೇಶಕ್ಕಾಗಿ ಬದುಕಿದರೆ ಅದು ಬದುಕು ಎಂದು ಸಾರಿದ ಸ್ವಾಮಿ ವಿವೇಕಾನಂದರ ಜೀವನ ಸಂದೇಶಗಳಿಂದ ಪ್ರಭಾವಿತರಾಗಿ ಕಳೆದ ಏಳು ವರ್ಷಗಳ ಹಿಂದೆ ಸ್ವಾಮಿ ವಿವೇಕಾನಂದರ ಜನ್ಮದಿನದಂದು ಸ್ಥಾಪನೆಯಾದ ಶಿವಾಯ ಫೌಂಡೇಶನ್ ಅಶಕ್ತ ಅರ್ಹರಿಗೆ ಟಾಟಾ ಆಸ್ಪತ್ರೆಯ ರೋಗಿಗಳು ಮತ್ತು ಸಂಬಂಧಿಕರಿಗೆ ಒಂದೊತ್ತಿನ ಊಟ, ಬಿಸ್ಕೆಟ್, ನೀರಿನ ಬಾಟಲಿಗಳನ್ನು ವಿತರಿಸುವ ಮೂಲಕ ಮತ್ತು ಏಳು ಕುಟುಂಬಗಳಿಗೆ ಒಟ್ಟು 1 ಲಕ್ಷಕ್ಕೂ ಹೆಚ್ಚು ರೂಪಾಯಿಗಳ ವೈದ್ಯಕೀಯ ಮತ್ತು ಶೈಕ್ಷಣಿಕ ನೆರವನ್ನು ನೀಡುವ ಮೂಲಕ ವಿಶಿಷ್ಟ ರೀತಿಯಲ್ಲಿ ಶಿವಾಯದ ಸಂಸ್ಥಾಪನಾ ದಿನಾಚರಣೆ ಮತ್ತು ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ಆಚರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ವಿಭಿನ್ನ ರೀತಿಯ ಸೇವಾ ಚಟುವಟಿಕೆ ಸಂಘಟಿಸುವ ಮೂಲಕ ಶಿವಾಯ ಸಂಸ್ಥೆ ಕಳೆದ ಏಳು ವರ್ಷಗಳಿಂದ ಕೆಲಸ ಮಾಡುತ್ತಿದೆ. ಕಾರ್ಯಕ್ರಮದಲ್ಲಿ ಶಿವಾಯ ಫೌಂಡೇಶನ್ ಗೌರವ ಸಲಹೆಗಾರರಾದ ಮಧುಸೂದನ್ ಶೆಟ್ಟಿ ಹಿರಿಯಡ್ಕ, ಪ್ರಶಾಂತ್ ಶೆಟ್ಟಿ ಪಲಿಮಾರು, ಪ್ರಶಾಂತ್ ಶೆಟ್ಟಿ ಪಂಜ, ವಿನೋದ್ ದೇವಾಡಿಗ, ಡಾ. ಸ್ವರ್ಣಾ ಶೆಟ್ಟಿ, ಲೀಲಾಧರ್ ಶೆಟ್ಟಿಗಾರ್ ಮತ್ತು ಶಕುಂತಲಾ ಲೀಲಾಧರ ದಂಪತಿ, ಪ್ರಶಾಂತ್ ಎ. ಶೆಟ್ಟಿ ಬೈಕಲಾ, ಶ್ವೇತಾ ಶೆಟ್ಟಿ, ಸಂಗೀತಾ ಶೆಟ್ಟಿ, ಪ್ರಿಯಾ ಶೆಟ್ಟಿ, ಪ್ರಭಾವತಿ ಶೆಟ್ಟಿ, ಬಚ್ಚುರಾಮ್ ನರೇಶ್ ಗುಪ್ತ, ಸೋನು ಸಾಹು ಮೊದಲಾದವರು ಉಪಸ್ಥಿತರಿದ್ದರು.