ನಮ್ಮ ಕಾಲೇಜಿನಲ್ಲಿ ಹಳ್ಳಿಯ ಪ್ರದೇಶಗಳಿಂದ ವಿದ್ಯಾರ್ಥಿಗಳು ಹೆಚ್ಚಾಗಿ ಬರುತ್ತಿದ್ದರು. ಆಗ ಹೆಣ್ಣು ಮಕ್ಕಳು ಉನ್ನತ ಅಧ್ಯಯನ ಮಾಡುತ್ತಿದ್ದುದೇ ಕಡಿಮೆ. ನಾವು ಆಪ್ತತೆಯಿಂದಲೇ ಕಲಿಸಿದೆವು. ಅದರ ಪರಿಣಾಮ ಇಂದು ಈ ಮಕ್ಕಳಿಂದ ಇಂದಿಗೂ ನಮಗೆ ಆ ಪ್ರೀತಿ ಸಿಕ್ಕಿದೆ. ನಾವು ಗಳಿಸಿದ್ದು ವಿದ್ಯಾರ್ಥಿಗಳ ಪ್ರೀತಿ ವಿಶ್ವಾಸವನ್ನು ಮಾತ್ರ. ಒಬ್ಬ ಶಿಕ್ಷಕಿಯಾಗಿ ವಿದ್ಯಾರ್ಥಿಗಳೇ ನನ್ನ ಆಸ್ತಿ. ಇಷ್ಟು ಅಲ್ಪ ಸಮಯದಲ್ಲಿ ಇವರು ಅಭಿನಂದನೆ, ಗುರುವಂದನೆಯಲ್ಲಿ ತೊಡಗಿಸಿಕೊಂಡ ರೀತಿಗೆ ಬೆರಗಾಗಿದ್ದೇನೆ. ಈ ವಿದ್ಯಾರ್ಥಿಗಳೆಲ್ಲರೂ ದೂರ ದೂರದಿಂದ ಇಂದು ಇಲ್ಲಿಗೆ ಬಂದು ತೋರಿದ ಆದರಾಭಿಮಾನಕ್ಕೆ ಮೂಕಳಾಗಿದ್ದೇನೆ ಎಂದು ಶ್ರೀ ವೆಂಕಟರಮಣ ಮಹಿಳಾ ಕಾಲೇಜಿನ ನಿವೃತ್ತ ಉಪನ್ಯಾಸಕಿ, ಪ್ರಾಂಶುಪಾಲರಾಗಿದ್ದ ಪ್ರೊ. ಮಿತ್ರಪ್ರಭಾ ಹೆಗ್ಡೆ ನುಡಿದರು. ಅವರು ಜನವರಿ 12 ಆದಿತ್ಯವಾರದಂದು ನವೋದಯ ಕನ್ನಡ ಸೇವಾ ಸಂಘದ ಸಭಾಂಗಣದಲ್ಲಿ ನಡೆದ ಎಸ್.ವಿ.ಟಿ ಹಳೆ ವಿದ್ಯಾರ್ಥಿ ಬಳಗ ಮುಂಬಯಿ ಸಮಾಗಮದಲ್ಲಿ ಗುರುವಂದನೆಯನ್ನು ಸ್ವೀಕರಿಸಿ ಮಾತನಾಡಿದರು.
ಅವರು ಮಾತನ್ನು ಮುಂದುವರೆಸುತ್ತಾ, ನನ್ನ ವಿದ್ಯಾರ್ಥಿನಿಯರು ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆಗಳನ್ನು ಮಾಡಿದ್ದಾರೆ ಎನ್ನಲು ಅಭಿಮಾನವಾಗುತ್ತದೆ. ಸಮಾಜಮುಖಿಯಾಗಿ ಅವರು ಕೆಲಸ ಮಾಡುತ್ತಿದ್ದಾರೆ. ಅದು ನನಗೆ ಹೆಮ್ಮೆಯ ಸಂಗತಿ. ಮದುವೆಯಾಗಿ ಮುಂಬಯಿ ಮಹಾನಗರಕ್ಕೆ ಬಂದ ಅವರ ಕ್ರಿಯಾಶೀಲತೆಗೆ ಪ್ರೋತ್ಸಾಹ ನೀಡುತ್ತಾ ಬಂದಿರುವ ಅವರೆಲ್ಲರ ಕುಟುಂಬ, ಪತಿ, ಮಕ್ಕಳು ಅವರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಆದ್ದರಿಂದ ಇಂದು ಅವರು ಸಾಧನೆ ಮಾಡಲು ಸಾಧ್ಯವಾಗಿದೆ. ಕಲಿಸಿದ ಗುರುಗಳನ್ನೇ ಮರೆತು ಬಿಡುವ ಈ ಕಾಲದಲ್ಲಿ ನನ್ನ ವಿದ್ಯಾರ್ಥಿನಿಯರು ಇಂತಹ ಸುಂದರ ಭಾವನಾತ್ಮಕ ಕಾರ್ಯಕ್ರಮವನ್ನು ಆಯೋಜಿಸಿರುವುದು ನನ್ನ ಪುಣ್ಯ ಎಂದರು.ಶ್ರೀ ವೆಂಕಟರಮಣ ಮಹಿಳಾ ಕಾಲೇಜು ಕಾರ್ಕಳದ ಹಳೆ ವಿದ್ಯಾರ್ಥಿಗಳು ಪುಣೆ, ಬೇಲಾಪುರ, ಬದ್ಲಾಪುರ, ಭಯಂದರ್, ಮೀರಾ ರೋಡ್, ಪೊವಾಯಿ, ಥಾಣೆ, ಮುಲುಂಡ್ ಹೀಗೆ ಬೇರೆ ಬೇರೆ ಕಡೆಗಳಿಂದ ಆಗಮಿಸಿ ಈ ವಿಶೇಷ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಮಹಿಳೆಯರೆಲ್ಲರೂ ಪೂರ್ಣ ಕುಂಭದ ಸ್ವಾಗತದೊಂದಿಗೆ ಗುರುಗಳಿಗೆ ಮಲ್ಲಿಗೆ ಹಾರ ಹಾಕಿ ನೆನಪಿನ ಕಾಣಿಕೆಯೊಂದಿಗೆ ಗೌರವಿಸಿದರು. ಸಭಾಂಗಣದಲ್ಲಿ ನೆರೆದವರೆಲ್ಲರೂ ಭಾವುಕರಾಗಿ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.