ನಮ್ಮ ಬಂಟರ ಸಂಘದ ಪ್ರಾದೇಶಿಕ ಸಮಿತಿಗಳ ಮುಖೇನ ಉತ್ತಮವಾದ ಕೆಲಸವನ್ನು ಮಾಡುತ್ತಿದ್ದೇವೆ. ಪ್ರಾದೇಶಿಕ ಸಮಿತಿಯವರು ಇವತ್ತು ಆಯೋಜಿಸಿರುವಂತಹ ಈ ಉಚಿತ ವೈದ್ಯಕೀಯ ಶಿಬಿರ ಪ್ರತಿ ಮೂರು ತಿಂಗಳಿಗೊಮ್ಮೆ ಆದರೂ ನಡೆಯಬೇಕು. ಈ ಮೂಲಕ ನಮ್ಮ ಜನರನ್ನು ಅನಾರೋಗ್ಯದಿಂದ ಪಾರು ಮಾಡುವ ನಿಟ್ಟಿನಲ್ಲಿ ಸ್ವಲ್ಪವಾದರೂ ಸಹಾಯವಾದಿತು. ಜನರಿಗೆ ಮನೆ ಮನೆಗೆ ವೈದ್ಯಕೀಯ ಸಹಾಯ ದೊರೆಯುವಲ್ಲಿ ಡಾ| ಆರ್.ಕೆ. ಶೆಟ್ಟಿ, ಬಾಬಾ ಮಹೇಶ್ ಶೆಟ್ಟಿ ಮುತುವರ್ಜಿಯಿಂದ ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಪ್ರಾದೇಶಿಕ ಸಮಿತಿಯ ಮೂಲಕ ಸೂರಜ್ ಶೆಟ್ಟಿ, ಪ್ರಶಾಂತ್ ಶೆಟ್ಟಿ, ಸಂತೋಷ್ ಶೆಟ್ಟಿ ಮೊದಲಾದವರು ಶ್ರಮಿಸುತಿದ್ದಾರೆ. ಇವೆಲ್ಲವೂ ಒಗ್ಗಟ್ಟಿನಿಂದ ಮಾತ್ರ ಸಾಧ್ಯ. ಸಂಸ್ಥೆಯಲ್ಲಿ ‘ನಾನು’ ಎನ್ನದೇ ‘ನಾವು’ ಎಂದು ಕೈಜೋಡಿಸಿ ಕೆಲಸ ಮಾಡಬೇಕು. ಆಗ ಯಶಸ್ಸು ನಮ್ಮದಾಗುತ್ತದೆ. ಎಲ್ಲರೂ ಆರೋಗ್ಯವಂತರಾಗಿ ಬಾಳುವಂತಾಗಲಿ ಎಂದು ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ನುಡಿದರು. ಅವರು ಬಂಟರ ಸಂಘ ಮುಂಬಯಿ ಅಂಧೇರಿ- ಬಾಂದ್ರಾ ಪ್ರಾದೇಶಿಕ ಸಮಿತಿಯ ವೈದ್ಯಕೀಯ ಸಮಿತಿಯ ನೇತೃತ್ವದಲ್ಲಿ ನಡೆದ ಉಚಿತ ವೈದ್ಯಕೀಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.ಬಂಟರ ಸಂಘ ಮುಂಬಯಿಯ ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಸೂರಜ್ ಶೆಟ್ಟಿ ಮಾತನಾಡುತ್ತಾ, ಮನುಷ್ಯನಿಗೆ ಬದುಕಿನಲ್ಲಿ ಎಲ್ಲಾ ಸವಲತ್ತುಗಳಿಗಿಂತ ಆರೋಗ್ಯ ಸಂಪತ್ತು ಮುಖ್ಯವಾಗುತ್ತದೆ. ನಮ್ಮ ಸಮಿತಿಯ ಮೂಲಕ ಜನರಿಗೆ ಉಪಯೋಗವಾಗಲೆಂಬ ಸದಾಶಯದೊಂದಿಗೆ ಈ ಉಚಿತ ವೈದ್ಯಕೀಯ ಶಿಬಿರವನ್ನು ಆಯೋಜಿಸಿದ್ದೇವೆ. ನಮ್ಮ ಈ ಯೋಜನೆಗೆ ಹಿರನಂದಾನಿ ಆಸ್ಪತ್ರೆಯ ಸಂಪೂರ್ಣ ಸಹಕಾರವೂ ದೊರೆತಿದೆ ಎನ್ನಲು ಸಂತೋಷವಾಗುತ್ತದೆ ಎಂದು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಬಂಟರ ಸಂಘ ಮುಂಬಯಿಯ ಸಮನ್ವಯಕ ರವಿಂದ್ರನಾಥ ಭಂಡಾರಿ ಮಾತನಾಡುತ್ತಾ, ಇಂದಿನ ಈ ಉಚಿತ ವೈದ್ಯಕೀಯ ಶಿಬಿರ ಮನಸ್ಸಿಗೆ ಹತ್ತಿರವಾಗಿರುವಂತದ್ದು. ಇದರಿಂದ ಎಷ್ಟೋ ಜನರಿಗೆ ಉಪಯೋಗವಾಗುತ್ತದೆ. ಪ್ರತಿ ಸಮಿತಿಯಲ್ಲೂ ಇಂತಹ ಜನಪರ ಕಾರ್ಯಗಳನ್ನು ಹಮ್ಮಿಕೊಳ್ಳಬೇಕು. ನಾವು ಒಬ್ಬರು ಸುಖದಿಂದ ಇದ್ದರೆ ಸಾಲದು. ನಾವೆಲ್ಲರೂ ಆರೋಗ್ಯಪೂರ್ಣರಾಗಿ ಬಾಳಬೇಕು ಎಂದು ಸಂದೇಶವನ್ನು ಈ ಉಚಿತ ಶಿಬಿರ ಸಾರುತ್ತದೆ. ನನಗೆ ಈ ಸಂಸ್ಥೆಯ ಕಾರ್ಯಕ್ರಮಗಳು ಬಲು ಮೆಚ್ಚಿನವು. ಹಿಂದಿನ ಕೆಲವು ಕಾರ್ಯಕ್ರಮಗಳಿಗೆ ಬರಲು ಆಗಲಿಲ್ಲ ಎನ್ನುವ ಬೇಸರವಿದೆ. ಕೆಲವೊಮ್ಮೆ ಸಮಯದ ಅಭಾವವಿರುತ್ತದೆ. ಆದರೂ ನಿಮ್ಮೆಲ್ಲರ ಉತ್ತಮ ಕೆಲಸಗಳಿಗೆ ನನ್ನ ಸಂಪೂರ್ಣ ಪ್ರೋತ್ಸಾಹವಿದೆ ಎಂದರು.ಇದೇ ಸಂದರ್ಭದಲ್ಲಿ ಕರಾಟೆಯಲ್ಲಿ ದೇಶ ವಿದೇಶಗಳಲ್ಲಿ ಗೆಲುವನ್ನು ಸಾಧಿಸಿದ ತನುಷ್ ಲಕ್ಷ್ಮಣ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಉಪಾಧ್ಯಕ್ಷ ಯಶವಂತ ಶೆಟ್ಟಿ, ರಮೇಶ್ ರೈ ಕಯ್ಯಾರು, ವೈದ್ಯಕೀಯ ಸಮಿತಿಯ ಕಾರ್ಯಾಧ್ಯಕ್ಷ ಪ್ರಶಾಂತ್ ಶೆಟ್ಟಿ, ಉಪಾಧ್ಯಕ್ಷ ಸಂತೋಷ್ ಶೆಟ್ಟಿ, ಲಕ್ಷ್ಮಣ್ ಶೆಟ್ಟಿ, ಸಂಚಾಲಕರಾದ ರವೀಂದ್ರ ಶೆಟ್ಟಿ, ಅಶೋಕ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೋಭಾ ಅಮರನಾಥ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಡಾ| ಪೂರ್ಣಿಮಾ ಸುಧಾಕರ್ ಶೆಟ್ಟಿ ನಿರೂಪಿಸಿದರು. ಜಯಲಕ್ಷ್ಮೀ ಶೆಟ್ಟಿ ಪ್ರಾರ್ಥನೆ ಹಾಡಿದರು. ಶೋಭಾ ಎ. ಶೆಟ್ಟಿ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಪ್ರಾದೇಶಿಕ ಸಮಿತಿಯ ಎಲ್ಲಾ ಪದಾಧಿಕಾರಿ, ಮಹಿಳಾ ವಿಭಾಗ, ಯುವ ವಿಭಾಗದ ಸದಸ್ಯರು ಸಹಕರಿಸಿದರು.