ಫೆಬ್ರವರಿ 15 ರಂದು ಬ್ರಹ್ಮಾವರದ ಗಾಂಧಿ ಮೈದಾನದಲ್ಲಿ ನಡೆಯಲಿರುವ, ಈ ಬಾರಿಯ ‘ಅಭಿಮತ ಸಂಭ್ರಮ -2025’ ಕಾರ್ಯಕ್ರಮದ ಕುರಿತು, ಇಲ್ಲಿನ ರೋಟರಿ ಭವನದಲ್ಲಿ ಜನವರಿ 19 ರಂದು ಸಂಜೆ 4.30 ಕ್ಕೆ ಸಮಾಲೋಚನಾ ಸಭೆ ಕರೆಯಲಾಗಿದೆ ಎಂದು ಅಭಿಮತ ಸಂಭ್ರಮದ ಆಯೋಜಕರಾದ ಮೂಡುಗಿಳಿಯಾರು ಜನಸೇವಾ ಟ್ರಸ್ಟ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಮೂಡುಗಿಳಿಯಾರಿನ ಜನಸೇವಾ ಟ್ರಸ್ಟ್ ಕಳೆದ 7 ವರ್ಷಗಳಿಂದ ಮೂಡುಗಿಳಿಯಾರಿನಲ್ಲಿ ‘ಅಭಿಮತ ಸಂಭ್ರಮ’ ಎನ್ನುವ ಮೌಲ್ಯಯುತವಾದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಳಕಳಿಯ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸುತ್ತಿದೆ. ಸಾವಿರಾರು ಜನರು ನೇರವಾಗಿ ಹಾಗೂ ಲಕ್ಷಾಂತರ ಜನರು ಆನ್ಲೈನ್ ಮೂಲಕ ವೀಕ್ಷಣೆ ಮಾಡುವ ‘ಅಭಿಮತ ಸಂಭ್ರಮ’ ಕಾರ್ಯಕ್ರಮ ಭಿನ್ನ ಆಯೋಜನೆಯಿಂದಾಗಿ ಜನಪ್ರಿಯವಾಗಿದೆ.ಈ ಕಾರ್ಯಕ್ರಮವನ್ನು ಇನ್ನಷ್ಟು ವಿಸ್ತಾರಗೊಳಿಸಬೇಕು ಎನ್ನುವ ಸದುದ್ದೇಶದಿಂದ ಈ ಬಾರಿಯ 8ನೇ ವರ್ಷದ ‘ಅಭಿಮತ ಸಂಭ್ರಮ’ ಕಾರ್ಯಕ್ರಮವನ್ನು ಬ್ರಹ್ಮಾವರದ ಗಾಂಧಿ ಮೈದಾನದಲ್ಲಿ ಫೆ.15 ರ ಮುಸ್ಸಂಜೆಯಲ್ಲಿ ಆಯೋಜಿಸಲು ನಿರ್ಧರಿಸಲಾಗಿದ್ದು, ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಸಲಹೆ ಸೂಚನೆಗಳನ್ನು ನೀಡಲು ಸಮಾಲೋಚನಾ ಸಭೆಯನ್ನು ಕರೆಯಲಾಗಿದ್ದು, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಆಸಕ್ತರಿರುವ ಸಾರ್ವಜನಿಕರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ವಿದ್ಯಾರ್ಥಿ ಯುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಈ ಸಭೆಯಲ್ಲಿ ಪಾಲ್ಗೊಳ್ಳುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.