ಹಿರಿಯ ಸಾಹಿತಿ, ಲೇಖಕ, ಪ್ರಾಧ್ಯಾಪಕ ಡಾ.ವಿಶ್ವನಾಥ ಕಾರ್ನಾಡ್ ಪ್ರತಿಷ್ಠಾನವು ಮುಂಬಯಿ ಕನ್ನಡ ಪುಸ್ತಕ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಕೊಡಮಾಡುತ್ತಾ ಬಂದಿರುವ ಪುಸ್ತಕ ಬಹುಮಾನ ಯೋಜನೆಯಂತೆ 2023-24ರ ಸಾಲಿನ ವಿಕಾಸ’ ಪುಸ್ತಕ ಬಹುಮಾನಕ್ಕೆ ಯು.ವೆಂಕಟ್ರಾಜ ರಾವ್, ಅಶೋಕ ಪಕ್ಕಳ, ಅನಿತಾ ತಾಕೋಡೆ ಅವರ ಕೃತಿಗಳು ಆಯ್ಕೆಯಾಗಿವೆ. ಅದೇ ರೀತಿ ಡಾ. ವಿಶ್ವನಾಥ ಕಾರ್ನಾಡ್ ವಾರ್ಷಿಕ ಸಾಹಿತ್ಯ ಪುರಸ್ಕಾರಕ್ಕೆ ಹಿರಿಯ ಬರಹಗಾರರು, ನಿವೃತ್ತ ಪ್ರಾಂಶುಪಾಲರಾದ ಡಾ.ಉಮಾ ರಾಮರಾವ್ ಅವರು ಆಯ್ಕೆಯಾಗಿರುತ್ತಾರೆ. ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಜಿ.ಎನ್.ಉಪಾಧ್ಯ, ಪ್ರತಿಷ್ಠಾನದ ಸಂಸ್ಥಾಪಕರಾದ ಡಾ. ವಿಶ್ವನಾಥ ಕಾರ್ನಾಡ್, ಕೋಶಾಧಿಕಾರಿ ಶರತ್ ಕಾರ್ನಾಡ್ ಅವರ ಉಪಸ್ಥಿತಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.ಹಿರಿಯ ಸಾಹಿತಿ ಯು. ವೆಂಕಟ್ರಾಜ್ ಅವರ ‘ಪಟೇಲರ ಹುಲಿ ಬೇಟೆ’ (ಕಥಾ ಸಂಕಲನ), ಅಂಕಣಕಾರ ಅಶೋಕ ಪಕ್ಕಳ ಅವರ ‘ಶತಾಮೃತಧಾರೆ’ (ಅಂಕಣ ಬರಹಗಳ ಸಂಗ್ರಹ) ಹಾಗೂ ಅನಿತಾ ತಾಕೋಡೆ ಅವರ ‘ಸುವರ್ಣಯುಗ’ ಜಯ ಸುವರ್ಣ ಯಶೋಗಾಥೆ ಕೃತಿಗಳು ಈ ಬಾರಿಯ ಬಹುಮಾನಕ್ಕೆ ಆಯ್ಕೆಯಾಗಿವೆ ಎಂಬುದಾಗಿ ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಪೂರ್ಣಿಮಾ.ಎಸ್.ಶೆಟ್ಟಿ ಅವರು ತಿಳಿಸಿದ್ದಾರೆ. ಈ ಪುರಸ್ಕಾರವು ನಗದು ಪುರಸ್ಕಾರ, ಪ್ರಶಸ್ತಿ ಪತ್ರ ಹಾಗೂ ಗ್ರಂಥ ಗೌರವವನ್ನು ಒಳಗೊಂಡಿದ್ದು ಫೆಬ್ರವರಿ ತಿಂಗಳಲ್ಲಿ ಮುಂಬಯಿ ವಿಶ್ವವಿದ್ಯಾಲಯದಲ್ಲಿ ಈ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ ಎಂಬುದಾಗಿ ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.