ವಿದ್ಯಾಗಿರಿ: ಪ್ರಾಚೀನ ಮತ್ತು ಆಧುನಿಕ ವೈದ್ಯಕೀಯ ಪದ್ಧತಿಗಳಲ್ಲಿ ಹೃದಯಕ್ಕೆ ಕೇಂದ್ರ ಸ್ಥಾನವನ್ನು ನೀಡಲಾಗಿದೆ ಎಂದು ಆಳ್ವಾಸ್ ಫಾರ್ಮಾಸಿ ಕಾಲೇಜಿನ ಪ್ರಾಂಶುಪಾಲ ಡಾ. ಎಮ್. ಮಂಜುನಾಥ್ ಶೆಟ್ಟಿ ಹೇಳಿದರು. ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ವತಿಯಿಂದ ಶನಿವಾರ ನಡೆದ ‘ಜ್ಞಾನಚಕ್ಷು-2024′- ‘ಈಸಿಜಿಯ ಮೂಲಭೂತ ಅಂಶಗಳು ಹಾಗೂ ಅದರ ವ್ಯಾಖ್ಯಾನಗಳು’ ವಿಷಯದ ರಾಷ್ಟ್ರ ಮಟ್ಟದ ಕಾರ್ಯಗಾರದಲ್ಲಿ ಮಾತನಾಡಿದರು.
ಆಯುರ್ವೇದದಲ್ಲಿ ಹೃದಯವನ್ನು ಪ್ರಜ್ಞೆ ಮತ್ತು ಜೀವಿಯ ಪ್ರಮುಖ ಅಂಗವೆಂದು ಪರಿಗಣಿಸಲಾಗಿದೆ. ಆಯುರ್ವೇದ ತಜ್ಞರಿಗೆ ಹೃದಯದ ಬಗ್ಗೆ ಹೆಚ್ಚಿನ ಜ್ಞಾನಗಳಿಸಲು ಎಲೆಕ್ಟ್ರೋಕಾರ್ಡಿಯೋಗ್ರಫಿ ಅಥವಾ ಇಸಿಜಿ ಉಪಯುಕ್ತವಾಗಿದೆ. 1901ರಲ್ಲಿ ಡಚ್ನ ವಿಲ್ಲೆಮ್ ಐಂಥೋವನ್ ಇಸಿಜಿಯನ್ನು ಕಂಡು ಹಿಡಿದರು. ಅವರ ಈ ಆವಿಷ್ಕಾರಕ್ಕಾಗಿ 1924ರಲ್ಲಿ ನೊಬೆಲ್ ಪ್ರಶಸ್ತಿಯು ಲಭಿಸಿತು. ಈ ಕಾರ್ಯಾಗಾರವು ಇಸಿಜಿಯ ತಾಂತ್ರಿಕ ಅಂಶಗಳನ್ನು ತಿಳಿದುಕೊಳ್ಳುವುದರ ಜೊತೆಗೆ ಆಯುರ್ವೇದ ವೈದ್ಯರಿಗೆ ತಮ್ಮ ವೃತ್ತಿಯಲ್ಲಿ ನಾವೀನ್ಯತೆಯನ್ನು ಪಡೆಯಲು ಸಹಕಾರಿಯಾಗಿದೆ ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ಡಾ ವಿನಯ್ ಆಳ್ವ ಮಾತನಾಡಿ, ನಮ್ಮ ದೃಷ್ಟಿಕೋನ ಬದಲಾಯಿಸಿಕೊಂಡರೆ ಎಲ್ಲವೂ ವಿಶೇಷವಾಗಿ ಕಾಣಿಸುತ್ತದೆ. ಎಲ್ಲಾ ವಿಷಯಗಳು ಒಂದಕ್ಕೊಂದು ಸಂಪರ್ಕ ಹೊಂದಿರುತ್ತವೆ. ಈ ಚಿಂತನೆ ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯಗತ್ಯ ಎಂದರು.
ಆಳ್ವಾಸ್ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ ಸಜಿತ್ ಎಂ, ಆಳ್ವಾಸ್ ಆಯುರ್ವೇದ ಕಾಲೇಜಿನ ಸ್ನಾತಕೋತ್ತರ ವಿಭಾಗದ ಡೀನ್ ಡಾ. ಪ್ರಶಾಂತ್ ಜೈನ್, ಪದವಿ ವಿಭಾಗದ ಡೀನ್ ಡಾ ಸ್ವಪ್ನ ಕುಮಾರಿ, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ ಮಂಜುನಾಥ್ ಭಟ್ ಇದ್ದರು. ಕಾಯಾಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ ಸುಶೀಲ್ ಸ್ವಾಗತಿಸಿ, ಪ್ರೋ ರವಿಪ್ರಸಾದ್ ಹೆಗ್ಡೆ ವಂದಿಸಿ, ಪ್ರೋ. ಗೀತಾ ಮಾರ್ಕಂಡೆ ನಿರೂಪಿಸಿದರು. ಕರ್ಯಗಾರದಲ್ಲಿ ದೇಶದ ವಿವಿಧ ಭಾಗಗಳಿಂದ 180 ಪ್ರತಿನಿಧಿಗಳು ಭಾಗವಹಿಸಿದ್ದರು.