ಬಂಟರ ಯಾನೆ ನಾಡವರ ಮಾತೃ ಸಂಘದ ಮಂಗಳೂರು ತಾಲೂಕು ಸಮಿತಿಯ ಆಶ್ರಯದಲ್ಲಿ ನೂತನ ಮಹಿಳಾ ಘಟಕವನ್ನು ಇತ್ತೀಚೆಗೆ ಉದ್ಘಾಟಿಸಲಾಯಿತು. ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅವರು ನೂತನ ಮಹಿಳಾ ಘಟಕ ಉದ್ಘಾಟಿಸಿ ಮಾತನಾಡಿ, ಸೂಕ್ತ ಕಾರ್ಯ ಯೋಜನೆ ರೂಪಿಸಿ, ಮಹಿಳೆಯರಿಗೆ ಉಪಯುಕ್ತವಾದ ಪುಟ್ಟ ಪುಟ್ಟ ಕಾರ್ಯಕ್ರಮಗಳ ಮೂಲಕ ಮಹಿಳಾ ಘಟಕ ಮುನ್ನಡೆಯಲಿ ಎಂದರು. ನೂತನ ಮಹಿಳಾ ಘಟಕಕ್ಕೆ ಮಾತೃ ಸಂಘದ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದರು.
ಘಟಕದ ಗೌರವ ಸಲಹೆಗಾರರಾದ ಡಾ. ಆಶಾ ಜ್ಯೋತಿ ರೈ ಅವರು ಮಾತನಾಡಿ, ಪರಸ್ಪರ ಸಹಕಾರದಿಂದ ಯಶಸ್ಸು ಸಾಧ್ಯ. ನೂತನ ಮಹಿಳಾ ಘಟಕಕ್ಕೆ ಶುಭವಾಗಲಿ ಎಂದು ಹಾರೈಸಿದರು. ಮಹಿಳಾ ಘಟಕದ ಅಧ್ಯಕ್ಷೆ ಸಬಿತಾ ಆರ್.ಶೆಟ್ಟಿ ಅವರು ನೂತನ ಮಹಿಳಾ ಘಟಕಕ್ಕೆ ಸರ್ವ ಮಹಿಳೆಯರ ಸಹಕಾರ ದೊರೆಯಲಿ ಎಂದರು.
ವೀಣಾ ಟಿ. ಶೆಟ್ಟಿ ಅವರು ಬಂಟರ ಉಡುಗೆ ತೊಡುಗೆಯ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಕಸ್ತೂರಿ ಶೆಟ್ಟಿ ಅವರು ಪ್ರೇಕ್ಷಕ ಮಹಿಳೆಯರಿಗೆ ಆಯೋಜಿಸಿದ ಅತ್ಯುತ್ತಮ ಸಾಂಪ್ರದಾಯಿಕ ಉಡುಗೆ ಸ್ಪರ್ಧೆ ನಿರ್ವಹಿಸಿದರು. ಮಾತೃ ಸಂಘದ ಖಜಾಂಚಿ ಸಿಎ ರಾಮ ಮೋಹನ್ ರೈ, ತಾಲೂಕು ಸಮಿತಿಯ ಉಪ ಸಂಚಾಲಕ ರತ್ನಾಕರ ಶೆಟ್ಟಿ ಎಕ್ಕಾರು, ಮಹಿಳಾ ಘಟಕದ ಉಪಾಧ್ಯಕ್ಷೆ ಸುಲತಾ ಜೆ.ಶೆಟ್ಟಿ, ಕಾರ್ಯದರ್ಶಿ ವೃಂದಾ ಹೆಗ್ಡೆ, ಜತೆ ಕಾರ್ಯದರ್ಶಿ ಮಾನಸ ರೈ, ಕೋಶಾಧಿಕಾರಿ ಭಾರತಿ ಶೆಟ್ಟಿ, ವಿಜಯಲಕ್ಷ್ಮಿ ರೈ ಮತ್ತಿತರರು ಉಪಸ್ಥಿತರಿದ್ದರು.
ಮಂಗಳೂರು ತಾಲೂಕು ಸಮಿತಿಯ ಸಂಚಾಲಕ ವಸಂತ ಶೆಟ್ಟಿ ಪ್ರಸ್ತಾವನೆಗೈದು, ಸ್ವಾಗತಿಸಿದರು. ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ವೃಂದಾ ಎಸ್.ಹೆಗ್ಡೆ ವಂದಿಸಿದರು. ಸತೀಶ್ ಶೆಟ್ಟಿ ಕೊಡಿಯಾಲಬೈಲ್ ಕಾರ್ಯಕ್ರಮ ನಿರೂಪಿಸಿದರು.