ಯಾಂತ್ರೀಕೃತ ಜೀವನ ನಡೆಸುತ್ತಿರುವ ಸಹಕಾರಿ ಸಿಬ್ಬಂದಿಗಳು ಗೆಲುವು ಸೋಲು ಪ್ರಾಮುಖ್ಯತೆಯನ್ನು ತೆಗೆದುಕೊಳ್ಳದೆ ಕ್ರೀಡಾಕೂಟದಲ್ಲಿ ಭಾಗವಹಿಸಿ ಸಂಘಟನಾತ್ಮಕವಾಗಿ ಸಹಕಾರಿಗಳು ಬಲಿಷ್ಠರು ಎಂದು ತೋರಿಸಿ ಕೊಟ್ಟಿದ್ದೇವೆ ಎಂದು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು. ಮಂದಾರ್ತಿ ಸೇವಾ ಸಹಕಾರಿ ಸಂಘದ ಶತಮಾನೋತ್ಸವದ ಪ್ರಯುಕ್ತ ಶತಸಾರ್ಥರ್ಕ್ಯ ಕಾರ್ಯಕ್ರಮದ ಅಂಗವಾಗಿ ಮಂದಾರ್ತಿ ಪ್ರೌಢಶಾಲಾ ಮೈದಾನದಲ್ಲಿ ಅದ್ದೂರಿಯಾಗಿ ನಡೆದ ಸಹಕಾರಿ ಕ್ರೀಡಾಕೂಟದಲ್ಲಿ ಕ್ರೀಡಾ ಧ್ವಜಾರೋಹಣ ಮಾಡಿ, ಧ್ವಜ ವಂದನೆ ಸ್ವೀಕರಿಸಿ ಮಾತನಾಡಿದರು.
ಮಂದಾರ್ತಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಚ್. ಗಂಗಾಧರ ಶೆಟ್ಟಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಳದ ಅನುವಂಶಿಕ ಮೊಕ್ತೇಸರ ಎಚ್. ಧನಂಜಯ ಶೆಟ್ಟಿ ಕ್ರೀಡಾ ಜ್ಯೋತಿ ಪ್ರಜ್ವಲನೆ ಮಾಡಿ ಮತ್ತು ಸಭಾ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ, ಉದ್ಯಮಿ ಪ್ರತಾಪ ಹೆಗ್ಡೆ ಮಾರಾಳಿ ಪಥ ಸಂಚಲನ ಗೌರವ ಸ್ವೀಕರಿಸಿದರು. ಡಾ. ನಾಗಾನಂದ ಭಟ್ ಕ್ರೀಡಾ ದ್ಯೋತಕವಾಗಿ ಪಾರಿವಾಳಗಳನ್ನು ಹಾರಿಸಿಬಿಟ್ಟರು. ಖೋ ಖೋ ಪಂದ್ಯಾಟದಲ್ಲಿ ರಾಜ್ಯಮಟ್ಟದಲ್ಲಿ ಭಾಗವಹಿಸಿ, ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಗ್ರಾಮೀಣ ಕ್ರೀಡಾಪಟು ಮಂದಾರ್ತಿ ಸಮೀಪದ ಕಿರಾಡಿಯ ದೀಪಾ ಅವರನ್ನು ಗೌರವಿಸಿ ಅಭಿನಂದಿಸಲಾಯಿತು.
ಕಳ್ತೂರು ಸಂತೆಕಟ್ಟೆಯ ಹಿರಿಯ ಪ್ರಾಥಮಿಕ ಶಾಲೆಯ ಸ್ಕೌಟ್ಸ್ ವಿದ್ಯಾರ್ಥಿಗಳಿಂದ ಬ್ಯಾಂಡ್ ಮತ್ತು ಉಡುಪಿ ತಾಲೂಕಿನ ಸಹಕಾರಿ ಸಂಘಗಳ ಪಥ ಸಂಚಲನ ಕ್ರೀಡಾಕೂಟಕ್ಕೆ ಮೆರುಗು ತಂದಿತು. ಇದಕ್ಕೂ ಮುನ್ನ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವರಿಗೆ ಪ್ರಾರ್ಥನೆ ಸಲ್ಲಿಸಿ ಕ್ರೀಡಾ ಜ್ಯೋತಿಯನ್ನು ಮಂದಾರ್ತಿ ಸೇವಾ ಸಹಕಾರಿ ಸಂಘದ ಸದಸ್ಯರು ಕ್ರೀಡಾ ಮೈದಾನಕ್ಕೆ ತಂದರು. ಮಂದಾರ್ತಿ ದೇವಳ ಪ.ಪೂ ಕಾಲೇಜು ಪ್ರಿನ್ಸಿಪಾಲ್ ಡಾ. ಪ್ರವೀಣ್ ಶೆಟ್ಟಿ, ಪ್ರೌಢಶಾಲೆ ಮುಖ್ಯ ಶಿಕ್ಷಕ ನಾರಾಯಣ ಮಣೂರು, ಪ್ರಾಥಮಿಕ ಶಾಲೆ ಉದಯಕುಮಾರ್ ಶೆಟ್ಟಿ, ಸಂಘದ ಉಪಾಧ್ಯಕ್ಷ ಕೆ. ಶಂಭು ಶಂಕರ ರಾವ್, ನಿರ್ದೇಶಕರಾದ ಶೇಡಿಕೊಡ್ಲು ವಿಠಲ ಶೆಟ್ಟಿ, ನಿತ್ಯಾನಂದ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ, ಗುರುಪ್ರಸಾದ್, ಬಸವ ಮರಾಠಿ, ಪ್ರವೀಣ್ ಕುಮಾರ್ ಶೆಟ್ಟಿ, ಬೇಬಿ ಪೂಜಾರ್ತಿ, ಪ್ರೇಮಾ, ರಾಧಾ, ಕಾರ್ಯನಿರ್ವಹಣಾಧಿಕಾರಿ ರಾಮಕೃಷ್ಣ ಶೆಟ್ಟಿ, ರಾಜಾರಾಮ ಶೆಟ್ಟಿ, ಸಂಘದ ಸಿಬ್ಬಂದಿ ಮತ್ತು ಉಡುಪಿ ತಾಲೂಕಿನ ಸಹಕಾರಿ ಸಂಘಗಳ ಸದಸ್ಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸುಪ್ರೀತಾ ಡಿ. ಶೆಟ್ಟಿ ಪ್ರಾರ್ಥಿಸಿ, ಸಂಘದ ಅಧ್ಯಕ್ಷ ಗಂಗಾಧರ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಿರ್ದೇಶಕ ಶೇಡಿಕೊಡ್ಲು ವಿಠಲ ಶೆಟ್ಟಿ ಸ್ವಾಗತಿಸಿ, ಶಿಕ್ಷಕ ಸತೀಶ್ಚಂದ್ರ ಶೆಟ್ಟಿ ನಿರೂಪಿಸಿದರು. ಕಾರ್ಯ ನಿರ್ವಾಹಣಾಧಿಕಾರಿ ರಾಮಕೃಷ್ಣ ಶೆಟ್ಟಿ ವಂದಿಸಿದರು.