ವೈಭವ್ ಫ್ಲಿಕ್ಸ್ ಮತ್ತು ಮ್ಯಾಂಗೋ ಪಿಕಲ್ ಎಂಟರ್ಟೈನ್ಮೆಂಟ್ ಅರ್ಪಿಸುವ, ಎಚ್.ಪಿ.ಆರ್ ಫಿಲಂಸ್ ಹರಿಪ್ರಸಾದ್ ರೈಯವರ ಸಹಯೋಗದಲ್ಲಿ ಆನಂದ ಕುಂಪಲರವರ ನಿರ್ಮಾಣ ಹಾಗೂ ರಾಹುಲ್ ಅಮೀನ್ ನಿರ್ದೇಶನದಲ್ಲಿ ತಯಾರಾದ ‘ಮಿಡ್ಲ್ ಕ್ಲಾಸ್ ಫ್ಯಾಮಿಲಿ’ ತುಳು ಸಿನಿಮಾದ ವೀಡಿಯೋ ಸಾಂಗ್ ಸೆಪ್ಟೆಂಬರ್ 10 ರಂದು ಮಂಗಳವಾರ ಸಂಜೆ 4 ಗಂಟೆಗೆ ಉಡುಪಿಯ ಕಲ್ಪನಾ ಚಿತ್ರಮಂದಿರದಲ್ಲಿ ಹಿಂದೆಂದೂ ನಡೆಯದ ರೀತಿಯಲ್ಲಿ ವಿಜೃಂಭಣೆಯಿಂದ ಸಾರ್ವಜನಿಕರ ಹಾಗೂ ಗಣ್ಯರ ಸಮ್ಮುಖದಲ್ಲಿ ಬಿಡುಗಡೆ ಆಗಲಿದೆ. ತುಳು ಸಿನಿಮಾ ರಂಗದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ತುಳು ಸಿನಿಮಾದ ಹಾಡೊಂದು ಸಿಂಗಲ್ ಥಿಯೇಟರ್ ನಲ್ಲಿ ಬಿಡುಗಡೆಗೊಳ್ಳುತ್ತಿರುವುದು ಇದೇ ಮೊದಲನೇ ಬಾರಿಯಾಗಿದೆ.
‘ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್’ ತಂಡದ ಬಹುತೇಕ ತಂತ್ರಜ್ಞರು, ಕಲಾವಿದರು ಇಲ್ಲಿ ದುಡಿದಿದ್ದಾರೆ. ಮುಖ್ಯವಾಗಿ ರಾಜ್ ಸೌಂಡ್ಸ್ ಆಂಡ್ ಲೈಟ್ಸ್ ಸಿನಿಮಾದ ನಿರ್ದೇಶಕ ರಾಹುಲ್ ಅಮೀನ್ ಇಲ್ಲೂ ನಿರ್ದೇಶಕರಾಗಿದ್ದಾರೆ. ವಿನೀತ್ ಕುಮಾರ್ ನಾಯಕ ನಟನಾಗಿ ಸಮತಾ ಅಮೀನ್ ನಾಯಕಿಯಾಗಿ ಹಾಗೂ ತುಳು ಚಿತ್ರರಂಗದ ಮೇರು ಕಲಾವಿದರಾದ ನವೀನ್ ಡಿ ಪಡೀಲ್, ಭೋಜರಾಜ್ ವಾಮಂಜೂರು, ಅರವಿಂದ ಬೋಳಾರ್, ಚೈತ್ರಾ ಶೆಟ್ಟಿ, ಪ್ರಸನ್ನ ಶೆಟ್ಟಿ ಬೈಲೂರು, ಉಮೇಶ್ ಮಿಜಾರ್, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ರೂಪ ವರ್ಕಾಡಿ, ರವಿ ರಾಮಕುಂಜ ಮತ್ತಿತ್ತರು ಅಭಿನಯಿಸಿದ್ದಾರೆ. ಸೃಜನ್ ಕುಮಾರ್ ತೋನ್ಸೆ ಸಂಗೀತ ನೀಡಿದ್ದಾರೆ. ಸೆಪ್ಟೆಂಬರ್ 10 ರಂದು ಉಡುಪಿಯ ಕಲ್ಪನಾ ಚಿತ್ರಮಂದಿರದಲ್ಲಿ ಬಿಡುಗಡೆಗೊಳ್ಳಲಿರುವ ‘ಮಿಡ್ಲ್ ಕ್ಲಾಸ್ ಫ್ಯಾಮಿಲಿ’ ಸಿನಿಮಾದ ಹಾಡು ಬಿಡುಗಡೆ ಸಂದರ್ಭದಲ್ಲಿ ವಿವಿಧ ಪಕ್ಷದ ರಾಜಕೀಯ ನಾಯಕರು, ವಿವಿಧ ಕ್ಷೇತ್ರದ ಗಣ್ಯರು, ತುಳು ಚಿತ್ರರಂಗದ ಹಿರಿಯ ಕಿರಿಯ ಕಲಾವಿದರು ಭಾಗವಹಿಸುವುದರೊಂದಿಗೆ, ಉಡುಪಿ ಭಾಗದ ತುಳುವರನ್ನು ಸೆಳೆಯಲು ಚಿತ್ರತಂಡ ಅದ್ದೂರಿ ಕಾರ್ಯಕ್ರಮವನ್ನು ಆಯೋಜಿಸಿ, ಸರ್ವರಿಗೂ ಭಾಗವಹಿಸಲು ಅವಕಾಶ ನೀಡಿರುತ್ತಾರೆ.