ಗ್ರಾಹಕರಿಗೆ ಉತ್ತಮ ಸೇವೆ ನೀಡುವುದರೊಂದಿಗೆ ಆರ್ಥಿಕ ರಂಗದಲ್ಲಿ ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯು ಪ್ರತಿಷ್ಠಿತ ಸ್ಥಾನಮಾನದೊಂದಿಗೆ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದೆ. ಸೊಸೈಟಿ ಸ್ಥಾಪನೆಯಾದಾಗಿನಿಂದ ಈವರೆಗಿನ ಕಾರ್ಯಾಧ್ಯಕ್ಷರು, ನಿರ್ದೇಶಕ ಮಂಡಳಿ ಮತ್ತು ಸಕಲ ಸಮಿತಿ ಸದಸ್ಯರ ಸೇವೆಯನ್ನು ಮರೆಯುವಂತಿಲ್ಲ. ಸಿಬ್ಬಂದಿಯ ನಿರಂತರ ಪರಿಶ್ರಮದಿಂದ ಸೊಸೈಟಿಯು ಮಹಾನಗರದಲ್ಲಿ ಪ್ರತಿಷ್ಠಿತ ಸ್ಥಾನದಲ್ಲಿ ನಿಂತಿದೆ ಎಂದು ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಉಳ್ತೂರು ಮೋಹನ್ ದಾಸ್ ಶೆಟ್ಟಿ ಹೇಳಿದರು.
ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ.ಭಂಡಾರಿ ಸಭಾಗೃಹದಲ್ಲಿ ಆಗಸ್ಟ್ 31ರಂದು ಜರಗಿದ ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ 36 ನೇಯ ವಾರ್ಷಿಕ ಮಹಾಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾರ್ವಜನಿಕ ಹಿತದೃಷ್ಟಿ ಮುಂದಿಟ್ಟುಕೊಂಡು ಬೆಳೆದಿರುವ ಮಾತೃಭೂಮಿ ಕೋ ಆಪರೇಟಿವ್ ಸೊಸೈಟಿಯ ಕಾರ್ಯ ವ್ಯಾಪ್ತಿಯು ಮುಂಬಯಿ ಮಹಾನಗರ ಹಾಗೂ ಉಪನಗರ ಸಾಕಿನಾಕ, ಥಾಣೆ, ವಸಾಯಿ, ವಾಶಿ, ಕಲ್ಯಾಣ್, ಪುಣೆ, ನಾಸಿಕ್, ರಾಯಗಢ ಜಿಲ್ಲೆಗಳಿಗೂ ವಿಸ್ತರಿಸಲಾಗಿದೆ. ನಿರಂತರ ಉತ್ತಮ ಸೇವೆ ನೀಡುವುದರೊಂದಿಗೆ 2023-24 ನೇ ಆರ್ಥಿಕ ಅವಧಿಯಲ್ಲಿ ನಿಗದಿಪಡಿಸಿದ ಗರಿಷ್ಠ ವ್ಯಾಪಾರ ಗುರಿ ಸಾಧಿಸಿದೆ ಎಂದರು.
2024 ಮಾ. 31ರ ವರೆಗಿನ ಲೆಕ್ಕ ಪರಿಶೋಧಕರ ವರದಿಯಂತೆ ಮಾತೃಭೂಮಿ ಸೊಸೈಟಿಯ ಶೇರು ಬಂಡವಾಳವು 25.50 ಕೋಟಿ ರೂ. ಗಳಿಗೇರಿದ್ದು, ಒಟ್ಟು ಸಂಗ್ರಹ 35.61 ಕೋಟಿ ರೂ, ಒಟ್ಟು ಠೇವಣಿ 147.20ಕೋಟಿ ರೂ. ಗಳಿಗೆ ತಲುಪಿದೆ. ಒಟ್ಟು ಮುಂಗಡ ಮೊತ್ತ 173.96 ಕೋಟಿ ರೂ, ನಿವ್ವಳ ಲಾಭ 57.45 ಕೋಟಿ ರೂ. ಗಳಿಗೆ ವೃದ್ಧಿಯಾಗಿದೆ ಎಂದು ತಿಳಿಸಲು ಸಂತೋಷವಾಗುತ್ತಿದೆ. ಈ ಸಂದರ್ಭ ಶೇರುದಾರರಿಗೆ ಶೇ. 12ರಷ್ಟು ಡಿವಿಡೆಂಡ್ ಅನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು ಎಂದು ಅವರು ಘೋಷಿಸಿದರು. ಗೌರವ ಕಾರ್ಯದರ್ಶಿ ಕಿಶೋರ್ ಕುಮಾರ್ ಶೆಟ್ಟಿ ಕುತ್ಯಾರ್ ಮಾತೃಭೂಮಿ ಸೊಸೈಟಿಯ ವಾರ್ಷಿಕ ವರದಿ ಹಾಗೂ ವ್ಯವಹಾರಗಳ ಬಗ್ಗೆ ತಿಳಿಸಿದರು. ಗೌರವ ಕೋಶಾಧಿಕಾರಿ ಸಿಎ ಹರೀಶ್ ಡಿ. ಶೆಟ್ಟಿ ವಾರ್ಷಿಕ ಲೆಕ್ಕಪತ್ರಗಳ ವಿವರ ನೀಡಿದರು. ನಿರ್ದೇಶಕ ಮಹೇಶ್ ಎಸ್ ಶೆಟ್ಟಿ ಸಾಲ ಮರುಪಾವತಿ ಬಗ್ಗೆ ವಿವರಿಸಿದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಬಾಂಬೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಸಿಎ ಸುರೇಂದ್ರ ಕೆ. ಶೆಟ್ಟಿ, ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಉಪ ಕಾರ್ಯಾಧ್ಯಕ್ಷ ಡಾ| ಆರ್.ಕೆ. ಶೆಟ್ಟಿ, ನಿರ್ದೇಶಕ ಮಂಡಳಿಯ ಶಶಿಧರ ಕೆ. ಶೆಟ್ಟಿ ಇನ್ನಂಜೆ, ಸಿಎ ಜಗದೀಶ್ ಬಿ. ಶೆಟ್ಟಿ, ಸುನಂದಾ ಡಿ. ಶೆಟ್ಟಿ, ಸಿಎ ರಾಜಶ್ರೀ ಜಿ. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಮಾತೃಭೂಮಿಯ ಸಲಹಾ ಸಮಿತಿಯ ಸದಸ್ಯರು, ಮಾಜಿ ಪದಾಧಿಕಾರಿಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಪಾಲ್ಗೊಂಡರು. ಸಭಿಕರ ಪರವಾಗಿ ಮಾಜಿ ಕಾರ್ಯಾಧ್ಯಕ್ಷ ರತ್ನಾಕರ್ ಶೆಟ್ಟಿ ಮುಂಡ್ಕೂರು, ಬಂಟರ ಸಂಘದ ಮಾಜಿ ಕಾರ್ಯದರ್ಶಿ ಸಿಎ ಸದಾಶಿವ ಶೆಟ್ಟಿ, ಸಿಎ ಐ.ಆರ್ ಶೆಟ್ಟಿ, ಸಂತೋಷ್ ಹೆಗ್ಡೆ ಮೊದಲಾದವರು ತಮ್ಮ ಸಲಹೆ ಸೂಚನೆ ನೀಡಿದರು. ಇದೇ ಸಂದರ್ಭ ಉತ್ತಮ ಠೇವಣಿ ಸಂಗ್ರಹಿಸಿದವರನ್ನು ಗೌರವಿಸಲಾಯಿತು. ಗೌರವ ಕಾರ್ಯದರ್ಶಿ ಕಿಶೋರ್ ಕುಮಾರ್ ಶೆಟ್ಟಿ ಕುತ್ಯಾರ್ ವಂದಿಸಿದರು.