ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್ ಮೂಲಕ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಒಟ್ಟು 10 ಲಕ್ಷ ರೂ. ಮೌಲ್ಯದ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದ ಉದ್ಘಾಟನೆ ಬೈಲೂರಿನ ಸರಕಾರಿ ಪದವಿ ಪೂರ್ವ ಕಾಲೇಜು ಇಲ್ಲಿನ ದಿ. ಡಾ. ಉದಯ್ ಕುಮಾರ್ ಹೆಗ್ಡೆ ವೇದಿಕೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಮಾಜಿ ಸಚಿವ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿ, ಅವಿನಾಶ್ ಶೆಟ್ಟಿಯವರು ಪ್ರೇರಣಾದಾಯಕ ಕೆಲಸವನ್ನು ಮಾಡುತ್ತಿದ್ದು ಕಳೆದ ಬಾರಿಯೂ ಮಕ್ಕಳಿಗೆ ನೋಟ್ ಪುಸ್ತಕ ಬ್ಯಾಗ್ ಕೊಡುವ ಮೂಲಕ ಕೆಲಸ ಮಾಡಿದ್ದರು. ಈ ಬಾರಿ ವಿದ್ಯಾರ್ಥಿ ವೇತನವನ್ನು ನೀಡುವುದರ ಮೂಲಕ ಮತ್ತೆ ಶಿಕ್ಷಣ ಪ್ರೇಮವನ್ನು ಮೆರೆದಿದ್ದಾರೆ. ಅಮ್ಮನ ನೆರವು ಇಲ್ಲದೇ ನಾವ್ಯಾರು ಬದುಕಲು ಸಾಧ್ಯವಿಲ್ಲ. ಅಂತಹ ಅಮ್ಮನ ನೆನಪಲ್ಲಿ ಟ್ರಸ್ಟ್ ಆರಂಭ ಮಾಡಿದ್ದು ಒಳ್ಳೆಯ ಸಂಗತಿ ಎಂದು ಅವರು ಶ್ಲಾಘಿಸಿದರು.
ಬಳಿಕ ಮಾತನಾಡಿದ ಕ್ರಿಯೇಟಿವ್ ಶಿಕ್ಷಣ ಸಂಸ್ಥೆ ಸ್ಥಾಪಕರಲ್ಲಿ ಓರ್ವರಾದ ಗುಣರಾಜ್ ಶೆಟ್ಟಿಯವರು, ಶಿಕ್ಷಣ ನಮಗೇನು ಕೊಟ್ಟಿದೆ ಅನ್ನುವುದಕ್ಕಿಂತ ಕಲಿತ ಶಿಕ್ಷಣದಿಂದ ಸಮಾಜಕ್ಕೆ ನಾವೇನು ನೀಡಿದ್ದೇವೆ ಎನ್ನುವುದು ಮುಖ್ಯ. ಮುಂದಿನ ದಿನಗಳಲ್ಲಿ ಅವಿನಾಶ್ ಶೆಟ್ಟಿಯವರ ಜೊತೆ ಕೈ ಜೋಡಿಸುವುದಾಗಿ ಭರವಸೆ ನೀಡಿದರು.
ನಿಕಟಪೂರ್ವ ಜಿಲ್ಲಾ ಪಂಚಾಯತ್ ಸದಸ್ಯ ಸುಮಿತ್ ಶೆಟ್ಟಿ ಕೌಡೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಅವಿನಾಶ್, ಕೃಷ್ಣರಾಜ್ ಹೆಗ್ಡೆ, ಪ್ರಶಾಂತ್ ಶೆಟ್ಟಿ, ಮೋಹನ್ ಶೆಟ್ಟಿ, ತ್ರಿವಿಕ್ರಮ್ ಕಿಣಿ, ಮಾಲಿನಿ ಜೆ ಶೆಟ್ಟಿ, ಸಂತೋಷ್ ವಾಗ್ಲೆ, ಕನಸುಗಾರ ನವೀನ್ ಬೈಲೂರ್ ಹಾಗೂ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ನಿವೃತ್ತ ಶಿಕ್ಷಕ ವಸಂತ್ ಎಂ. ಕಾರ್ಯಕ್ರಮ ನಿರ್ವಹಿಸಿದರು.