ಹೊರನಾಡ ಕನ್ನಡ ರತ್ನ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಸುಧಾಕರ ಶೆಟ್ಟಿ ಅವರ ಹೆಸರು ಕೇಳದವರು ತುಂಬಾ ಕಡಿಮೆ. ಮೂಡುಬಿದಿರೆ ಮೂಲದವರಾಗಿರುವ ಡಾ.ಸುಧಾಕರ ಶೆಟ್ಟಿ ಪುಣೆಯಲ್ಲಿ ಖ್ಯಾತ ಮಕ್ಕಳ ತಜ್ಞರಾಗಿ ಕಳೆದ ಮೂರು ದಶಕಗಳ ಅವರ ಸೇವೆಗಾಗಿ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಲಭಿಸಿದೆ. ಮೂಡುಬಿದಿರೆಯಲ್ಲೂ ಅವರು ಕಳೆದೊಂದು ವರ್ಷದಿಂದ ಬೇಬಿ ಫ್ರೆಂಡ್ ಎಂಬ ಸಂಚಾರಿ ಕ್ಲಿನಿಕ್ ನಡೆಸುತ್ತಿದ್ದು, ನೂರಾರು ಕಡೆಗಳಲ್ಲಿ ಆರೋಗ್ಯ ತಪಾಸಣಾ ಶಿಬಿರ ನಡೆಸಿ ಮನೆಮಾತಾಗಿದ್ದಾರೆ.
ವೈದ್ಯಕೀಯ, ಸಮಾಜ ಸೇವೆ ಮೂಲಕ ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನೆ ಮಾತಾಗಿರುವ ಇವರು ದಕ್ಷಿಣ ಕನ್ನಡದ ಮೂಡುಬಿದಿರೆಯ ಪ್ರತಿಷ್ಠಿತ ಬಂಟ ಮನೆತನದ ಹಿನ್ನಲೆ ಹೊಂದಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಪುಣೆಯಲ್ಲಿದ್ದ ಒಂದೂವರೆ ಸಾವಿರಕ್ಕೂ ಅಧಿಕ ಮಂದಿ ಕನ್ನಡಿಗರಿಗೆ ಚಿಕಿತ್ಸೆ ನೀಡಿದ ಡಾ. ಸುಧಾಕರ್ ಶೆಟ್ಟಿಯವರ ವೈದ್ಯಕೀಯ ತಂಡಕ್ಕೆ ಸತತ 4 ಬಾರಿ ಕೇಂದ್ರ ಸರಕಾರದ ರಕ್ಷಾ ಮಂತ್ರಿ ಅವಾರ್ಡ್ ಬಂದಿದೆ. ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಹೊರನಾಡ ಕನ್ನಡ ರತ್ನ ಪ್ರಶಸ್ತಿ, ಚಾರ್ ಸಹಿ ಬಜಾದೆ ಅವಾರ್ಡ್, ಕಂಟೋನ್ಮೆಂಟ್ ನಿಂದ ಶ್ರೇಷ್ಠತೆಯ ಪ್ರಮಾಣ ಪತ್ರ ಪಡೆದಿರುವ ಡಾ. ಸುಧಾಕರ್ ಶೆಟ್ಟಿಯವರು ಪುಣೆಯ ಹೆಸರಾಂತ ಆಸ್ಪತ್ರೆಗಳಲ್ಲಿ ಪ್ರೊಫೆಸರ್ ಆಗಿದ್ದಾರೆ.
ಇದೀಗ ಡಾ.ಸುಧಾಕರ ಶೆಟ್ಟಿ ಅವರು ಬಹು ಭಾಷಾ ಚಿತ್ರ ನಿರ್ದೇಶಕ ವೆಂಕಟ್ ಭಾರದ್ವಾಜ್ ಅವರ ನಿರ್ದೇಶನದ ‘ಹೇ ಪ್ರಭು’ ಎಂಬ ಚಿತ್ರದಲ್ಲಿ ವೈದ್ಯಕೀಯ ಪ್ರೊಫೆಸರ್ ಆಗಿ ಅಭಿನಯಿಸಲು ಬಣ್ಣ ಹಚ್ಚಿದ್ದು, ಅವರ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಬೆಂಗಳೂರಿನ ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿನಲ್ಲಿ ಈ ಚಿತ್ರದ ಚಿತ್ರೀಕರಣ ನಡೆದಿದ್ದು ‘ಹೇ ಪ್ರಭು’ ಚಿತ್ರವು ಮುಂದಿನ ದಿನಗಳಲ್ಲಿ ಕನ್ನಡ, ಹಿಂದಿ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಬಿಡುಗಡೆಗೊಳ್ಳಲಿದೆ. ಹಳ್ಳಿಗೆ ಹೋಗಲಿಚ್ಚಿಸದ ಚಿತ್ರದ ನಾಯಕ ಯುವ ವೈದ್ಯನಿಗೆ ಗ್ರಾಮೀಣ ವೈದ್ಯಕೀಯದ ಮಹತ್ವವನ್ನು ತಿಳಿಸುವ ಪಾತ್ರದಲ್ಲಿ ಡಾ. ಸುಧಾಕರ್ ಶೆಟ್ಟಿಯವರು ನೈಜ ಅಭಿನಯ ನೀಡಿದ್ದಾರೆ.
ಚಿತ್ರೀಕರಣದ ವೇಳೆ ಮಾತುಗಳನ್ನಾಡಿದ ನಿರ್ದೇಶಕ ವೆಂಕಟ್ ಭಾರದ್ವಜ್ ಅವರು, ಡಾ. ಸುಧಾಕರ್ ಶೆಟ್ಟಿಯವರು ಹೆಸರಾಂತ ಹಾಗೂ ಹಿರಿಯ ಅನುಭವಿ ಜನಪ್ರಿಯ ವೈದ್ಯರಾಗಿದ್ದು ಈ ಚಿತ್ರದ ವೈದ್ಯಕೀಯ ಪ್ರೊಫೆಸರ್ ಪಾತ್ರಕ್ಕೆ ನೈಜತೆಗೆ ಹೆಚ್ಚು ಒತ್ತು ಕೊಡುವ ದೃಷ್ಟಿಯಿಂದ ಅವರನ್ನು ಆಯ್ಕೆ ಮಾಡಲಾಯಿತು ಮತ್ತು ಅವರು ಪಾತ್ರಕ್ಕೆ ನಿರೀಕ್ಷೆಗಿಂತ ಹೆಚ್ಚು ನ್ಯಾಯ ಒದಗಿಸಿದ್ದಾರೆ ಎಂದಿದ್ದಾರೆ. ಹೇ ಪ್ರಭು ಚಿತ್ರದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ಮಕ್ಕಳ ವೈದ್ಯಕೀಯ ವಿಭಾಗದ ಮುಖ್ಯಸ್ಥರಾದ ಡಾ. ಆದರ್ಶ್ ಅವರು ಕೂಡಾ ಡಾ. ಸುಧಾಕರ್ ಶೆಟ್ಟಿಯವರ ಜೊತೆ ಅಭಿನಯಿಸಿದ್ದಾರೆ.