ನಮ್ಮ ದೇಶದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೆಚ್ಚಿದ ಸಂದರ್ಭ ನಮ್ಮ ಕರಾವಳಿ ಕರ್ನಾಟಕವೂ ಮುಂಚೂಣಿಯ ಜವಾಬ್ದಾರಿಯನ್ನೇ ವಹಿಸಿತ್ತು. ಆಗ ಕರಾವಳಿಯ ಹೋರಾಟದ ನಿರ್ಣಾಯಕ ಹೊಣೆಯನ್ನು ಹೊತ್ತದ್ದು ಯಾವುದೇ ಫಲಾಪೇಕ್ಷೆ ಇಲ್ಲದ ಅವಿಭಜಿತ ಕಾರ್ಕಳ ತಾಲೂಕಿನ ಪಡುಕುಡೂರು ಬೀಡು ಧರ್ಮರಾಜ ಅಧಿಕಾರಿ (ಎಂ.ಡಿ.ಅಧಿಕಾರಿ) ಮಹಾನ್ ರಾಷ್ಟ್ರಪ್ರೇಮಿಯಾಗಿ ದೇಶಕ್ಕಾಗಿ ಸ್ವಾತಂತ್ರ್ಯ ಹೋರಾಟವನ್ನು ಮುನ್ನಡೆಸಿದರು. 1942 ರಲ್ಲಿ ಕ್ವಿಟ್ ಇಂಡಿಯಾ ಚಳುವಳಿ ನಡೆಯುತ್ತಿದ್ದರೆ, ಇತ್ತ ಇಡೀ ದೇಶದಲ್ಲಿ ಮಹಾತ್ಮ ಗಾಂಧೀಜಿ ಅವರ ಕರೆಯಂತೆ ಪ್ರತಿಭಟನಾ ಸಭೆಗಳು ನಡೆಯುತ್ತಿದ್ದವು. ಮಂಗಳೂರಿನ ಕೇಂದ್ರ ಮೈದಾನದಲ್ಲಿ 10 ಸಾವಿರಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಸೇರಿದ್ದರು. ಮುಗಿಲು ಮುಟ್ಟುವ “ವಂದೇ ಮಾತರಂ” ಮೊಳಗುತ್ತಿತ್ತು. ಬಿಸಿರಕ್ತದ 27 ರ ತರುಣ ದೇಶಕ್ಕಾಗಿ ಆವೇಶದಿಂದ ಭಾಷಣ ಮಾಡುತ್ತಿದ್ದರು. ಅಷ್ಟೊತ್ತರಲ್ಲಿ ಪೊಲೀಸರು ಲಾಟಿ ಬೀಸಿ ಮೈದಾನಕ್ಕೆ ನುಗ್ಗಿದರು. ಆ ಕ್ಷಣದಲ್ಲಿ ಹಲವರು ಕಾಲ್ಕಿತ್ತರೆ, ಹಲವರು ಎದೆಯೊಡ್ಡಿ ನಿಂತರು. ಆದರೇ ತರುಣ ಮಾತ್ರ ತನ್ನ ಅಬ್ಬರದ ಮಾತು ಮುಂದುವರಿಸಿದ್ದ. ವೇದಿಕೆ ಏರಿದ ಪೊಲೀಸರು ಆ ತರುಣನ ಬಾಯಲ್ಲಿ “ವಂದೇ ಮಾತರಂ” ಘೋಷಣೆ ಬರುತ್ತಿತ್ತು. ಪೋಲೀಸರ ಬಲವಾದ ಹೊಡೆತದಿಂದ ಪ್ರಜ್ಞೆ ತಪ್ಪಿದ್ದರು. ಕೆಲವರು ಅವರನ್ನು ಹೊತ್ತುಕೊಂಡು ಹೋಗಿ ಆಸ್ಪತ್ರೆ ಸೇರಿಸಿದರು. ಹಲವು ಗಂಟೆಗಳ ಬಳಿಕ ಪ್ರಜ್ಞೆ ಮರಳಿತು. ಅಲ್ಲೇ ಕಾಯುತ್ತಿದ್ದ ಪೊಲೀಸರು ಆ ತರುಣನನ್ನು ಎಳೆದುಕೊಂಡು ಹೋಗಿ ಸೆರೆಮನೆಗೆ ಹಾಕಿದರು. ಆ ತರುಣನೇ ಪಡುಕುಡೂರಿನ ಕೀರ್ತಿಯನ್ನು ವಿಶ್ವಕ್ಕೆ ಪಸರಿಸಿದ ಪಡುಕುಡೂರುಬೀಡು ಎಂ.ಡಿ. ಅಧಿಕಾರಿ. ಅವರು ಕಾರ್ಕಳ ತಾಲೂಕಿನ ಇತಿಹಾಸ ಪ್ರಸಿದ್ಧ ಊರು ಪುಣ್ಯಭೂಮಿ ವರಂಗದ ಜೈನ ಕೃಷಿ ಕುಟುಂಬದ ಸುಪುತ್ರ. ಅವರ ಹಿರಿಯರು ವರಂಗದ ಬಸದಿಯನ್ನು ಅಭಿವೃದ್ಧಿಪಡಿಸಿ ಧರ್ಮಕಾರ್ಯ ಮಾಡಿದವರು. ಈ ಯುವಕನಿಗೆ ಬಾಲ್ಯದಿಂದಲೂ ರಾಷ್ಟ್ರ ಚಿಂತನೆಯ ಜೊತೆಗೆ ಗಾಂಧೀಜಿಯವರ ಪ್ರಭಾವ ಅತಿಯಾಗಿ ಬೀರಿತ್ತು.
ಪ್ರಚಾರಕ್ಕೆ ಧುಮುಕಿದ ಎಂ.ಡಿ. ಅಧಿಕಾರಿ : ಬ್ರಿಟಿಷರ ಆಡಳಿತದಲ್ಲಿ 1937 ರಲ್ಲಿ ಪ್ರಾಂತೀಯ ಅಸ್ಲೆಂಬಿ ಚುನಾವಣೆ ನಡೆಯಿತು. ಆಗ ಯುವಕ ಎಂ.ಡಿ. ಅಧಿಕಾರಿ ಕಾಂಗ್ರೆಸ್ ಕಾರ್ಯಕರ್ತನಾಗಿ ಪ್ರಚಾರಕ್ಕೆ ಧುಮುಕಿದರು. 1938 ರಲ್ಲಿ ಕಾರ್ಕಳ ಕ್ಷೇತ್ರದ ಕಾಂಗ್ರೆಸ್ ಅಧ್ಯಕ್ಷರಾದರು. 1940 ರಲ್ಲಿ ಅವಿಭಜಿತ ಮಂಗಳೂರು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರ ಸ್ಥಾನಕ್ಕೆ ಏರಿದರು. 1942 ರಲ್ಲಿ ಅಂದಿನ ಮಂಗಳೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಶ್ರೀನಿವಾಸ ಮಲ್ಯರು ಸೆರೆಮನೆಗೆ ಹೋದಾಗ ಪಡುಕುಡೂರುಬೀಡು ಧರ್ಮರಾಜ ಅಧಿಕಾರಿ ಮಂಗಳೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಸ್ವೀಕರಿಸಿದರು. ಹಳ್ಳಿಹಳ್ಳಿಯಲ್ಲಿ ಸಂಘಟನೆಯನ್ನು ಮಾಡುತ್ತಾ ಹೋರಾಟಕ್ಕಿಳಿದರು. ದೇಶಪ್ರೇಮವನ್ನು ಹೆಚ್ಚಿಸುವ ಪ್ರಖರ ಭಾಷಣ ಮಾಡಿ ಮಂಗಳೂರಿನ ಕ್ವಿಟ್ ಇಂಡಿಯಾ ಚಳುವಳಿಯ ಹೊಣೆಯನ್ನು ವಹಿಸಿದರು. ಬಳ್ಳಾರಿಯ ಸೆರೆಮನೆಯಲ್ಲಿ ಎಂ.ಡಿ.ಅಧಿಕಾರಿ ಅವರನ್ನು ಬಂಧಿಸಿಡಲಾಯಿತು. 6 ತಿಂಗಳು, 8 ತಿಂಗಳು, 1 ವರ್ಷ ಹೀಗೆ 3 ಸಲ ಜೈಲು ವಾಸ ಅನುಭವಿಸಿದರು. 1 ವರ್ಷದಲ್ಲಿ ಕಠಿಣವಾದ ಜೈಲುವಾಸ ಅನುಭವಿಸಿದರು. ಜೈಲಿನಲ್ಲಿಯೂ ಗ್ರಂಥವನ್ನು ಓದಲು ಆರಂಭಿಸಿದರು. ಶ್ರೀನಿವಾಸ ಮಲ್ಯ, ಕೆ.ಕೆ. ಶೆಟ್ಟಿ, ಹೆಚ್.ಕೆ. ತಿಂಗಳಾಯ ಮುಂತಾದವರು ಒಡನಾಟ ಸ್ವಾತಂತ್ರ್ಯದ ಹೋರಾಟದ ಕಿಚ್ಚನ್ನು ಮತ್ತೆ ಹೆಚ್ಚಿಸಿತು.
ಸಾಥ್ ನೀಡಿದ ಧರ್ಮಪತ್ನಿ ಕಮಲಾವತಿ ಅಧಿಕಾರಿ : ಗಂಡ ಧರ್ಮರಾಜ ಅಧಿಕಾರಿ ಅವರ ಹೋರಾಟಕ್ಕೆ ಧರ್ಮಪತ್ನಿ ಕಮಲಾವತಿ ಅಧಿಕಾರಿ ಕೂಡ ಸಾಥ್ ನೀಡಿದರು. ಕೃಷಿಯ ಹೊಣೆಯನ್ನು ಹೊತ್ತು ಕುಟುಂಬವನ್ನು ಮುನ್ನಡೆಸಿದರು. ಗಂಡನ ಹೋರಾಟದ ಖರ್ಚಿಗಾಗಿ ತಾಳಿಯನ್ನೇ ಅಡವಿಟ್ಟರು. ಆದರೂ ಒಕ್ಕಲಿನವರು, ನಂಬಿದವರನ್ನು ಚೆನ್ನಾಗಿ ನೋಡಿಕೊಂಡರು. ತನ್ನ ಗಂಡನಿಂದ ಪ್ರೇರಣೆಗೊಂಡು ಕಮಲಾವತಿ ಅಧಿಕಾರಿಯವರು ಕೂಡ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು. ದಂಪತಿಗಳಿಬ್ಬರೂ ಜೈಲು ವಾಸ ಅನುಭವಿಸಿದರು. ಸ್ವಾತಂತ್ರ್ಯ ದೊರೆತಾಗ ಹೆಮ್ಮೆಯಿಂದ ಸಂಭ್ರಮಿಸಿದರು.
ಇವರು ಯಾವುದೇ ಹುದ್ದೆ ಅಧಿಕಾರವನ್ನು ಕೇಳಿಕೊಂಡು ಹೋಗಲಿಲ್ಲ. ಮನಸ್ಸು ಮಾಡಿದ್ದರೇ ಯಾವ ಹುದ್ದೆ ಅಧಿಕಾರವನ್ನು ತಲುಪುವ ಅವಕಾಶಗಳಿತ್ತು. ಆದರೆ ಕೃಷಿಕರಾಗಿ ಉಳಿದುಬಿಟ್ಟರು. ಧರ್ಮರಾಜ ಅಧಿಕಾರಿ ಮತ್ತು ಕಮಲಾವತಿ ಅಧಿಕಾರಿಯವರು ಸ್ವಾತಂತ್ರ್ಯ ಹೋರಾಟ ಮಾಡಿ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಯಾದರು. ಮುದ್ರಾಡಿ ಬೀಡು ಮತ್ತು ಪಡುಕುಡೂರು ಬೀಡಿನ ಹೆಸರನ್ನು ಎತ್ತರಕ್ಕೆ ಏರಿಸಿದರು. ಕರಾವಳಿ ಕರ್ನಾಟಕದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮಂಗಳೂರಿನಲ್ಲಿ ಮಹಾತ್ಮ ಗಾಂಧೀಜಿ ಮತ್ತು ಕಸ್ತೂರ್ಬಾ ಹೆಸರಿನಲ್ಲಿ ನಿಧಿಯನ್ನು ಸ್ಥಾಪಿಸಿದರು. ಭಾರತ ಸರ್ಕಾರ ನೀಡುವ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುವ ಮಾಶಾಸನ ನಿರಾಕರಿಸಿದರು. ಧರ್ಮಪತ್ನಿಗೂ ಮಾಶಾಸನ ಪಡೆಯದಂತೆ ಅಪ್ಪಣೆ ಕೊಟ್ಟರು. ದಂಪತಿಗಳಿಬ್ಬರೂ ಕೊನೆಯ ಕ್ಷಣದವರೆಗೂ ದೇಶಕ್ಕಾಗಿ ಬದುಕಿ ಅಜರಾಮರರಾದರು. ಭೂ ಮಸೂದೆಯ ಕಾನೂನು ಜಾರಿಗೆ ಬಂದಾಗಲೂ ಧನಿ ಒಕ್ಕಲು ಸಂಬಂಧವನ್ನು ಚೆನ್ನಾಗಿ ನೋಡಿಕೊಂಡು ಸರ್ವರ ಪ್ರೀತಿಗೆ ಪಾತ್ರರಾದರು. ಸಹಕಾರಿ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿ ವರಂಗ ವ್ಯವಸಾಯಿಕ ಸೇವಾ ಸಹಕಾರಿ ಸಂಘದ ಸ್ಥಾಪಕಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಈಗ ಸಹಕಾರಿ ಕ್ಷೇತ್ರದ ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆದಿದೆ. ನಿಸ್ವಾರ್ಥವಾಗಿ ಸ್ವಾತಂತ್ರ್ಯ ಹೋರಾಟ, ಜನಸೇವೆ ದೇಶ ಸೇವೆ ಮಾಡಿದ ಆದರ್ಶ ದಂಪತಿಗಳು ನಿತ್ಯ ಸ್ಮರಣಿಯರು.
ಎಂ.ಡಿ. ಅಧಿಕಾರಿ ಅವರ ಹೆಸರು ಶಾಶ್ವತವಾಗಬೇಕು : ಪಡುಪರ್ಕಳ ಶಂಕರ ಶೆಟ್ಟಿ, ಪುತ್ಥಳಿ ಸ್ಥಾಪನೆಯ ರೂವಾರಿ
ಮಾಡುವ ಅತ್ಯುತ್ತಮ ಸೇವೆ ಕಾರ್ಯವನ್ನು ತಾನೊಬ್ಬನೇ ಮಾಡಬಾರದು. ಊರಿನವರು, ಹತ್ತು ಸಮಸ್ತರು, ಪ್ರಮುಖರು ಗಣ್ಯರು ಸೇರಿ ಮಾಡಬೇಕು ಎಂಬುದು ನನ್ನ ಆಶಯ. ಅದರಂತೆ ನಡೆಯುತ್ತದ್ದೇವೆ. ಸಿದ್ಧತೆಗಳು ಭರದಿಂದ ನಡೆಯುತ್ತಿದೆ. ಪುತ್ಥಳಿ ಪ್ರತಿಷ್ಠೆಯ ಐತಿಹಾಸಿಕ ಸಂಭ್ರಮವಾಗಲಿದೆ. ನಮ್ಮೂರು ಪಡುಕುಡೂರು ಮತ್ತು ಎಂ.ಡಿ. ಅಧಿಕಾರಿ ಅವರ ಹೆಸರನ್ನು ಮುಂದಿನ ತಲೆಮಾರಿಗೂ ಪರಿಚಯಿಸಿ ಶಾಶ್ವತವಾಗಿಸುವುದು ನಮ್ಮ ಉದ್ದೇಶ.
ಮಹಾನ್ ಕಾರ್ಯದಲ್ಲಿ ಸೇವೆ ಸಲ್ಲಿಸುವುದು ಭಾಗ್ಯ : ಜಗದೀಶ ಹೆಗ್ಡೆ ಪಟೇಲರ ಮನೆ, ಅಧ್ಯಕ್ಷರು ಪುತ್ಥಳಿ ಪ್ರತಿಷ್ಠಾಪನಾ ಸಮಿತಿ
ಸ್ವಾತಂತ್ರ್ಯ ಸೇನಾನಿ ಪಡಕುಡೂರುಬೀಡು ಎಂ.ಡಿ. ಅಧಿಕಾರಿ ಅವರ ಪುತ್ಥಳಿ ಪ್ರತಿಷ್ಠಾಪನೆಯ ರೂವಾರಿ ಪಡುಪರ್ಕಳ ಶಂಕರ ಶೆಟ್ಟಿ. ಎಲ್ಲಾ ಯೋಜನೆ ಯೋಚನೆ ಅವರದ್ದೇ. ಇಂತಹ ಮಹಾನ್ ಕಾರ್ಯದಲ್ಲಿ ಪುತ್ಥಳಿ ಪ್ರತಿಷ್ಠಾಪನಾ ಸಮಿತಿಯ ಅಧ್ಯಕ್ಷತೆ ಹೊಣೆಯನ್ನು ಕೊಟ್ಟು ಸೇವೆ ಮಾಡಲು ಅವಕಾಶ ನೀಡಿರುವುದಕ್ಕೆ ನಾನು ಸರ್ವರಿಗೂ ವಂದಿಸುವೆ. ಇದು ನನ್ನ ಜೀವನದ ಸೌಭಾಗ್ಯ. ಪಡುಕುಡೂರಿನಲ್ಲಿ ಈ ಕಾರ್ಯ ಐತಿಹಾಸಿಕ ಸಂಭ್ರಮವಾಗಲಿದೆ.
ಕನಸು ನನಸಿನ ಹೆಮ್ಮೆ : ಪಡುಪರ್ಕಳ ಹರೀಶ ಶೆಟ್ಟಿ,
ಪ್ರಧಾನ ಕಾರ್ಯದರ್ಶಿ ಪುತ್ಥಳಿ ಪ್ರತಿಷ್ಠಾಪನಾ ಸಮಿತಿ
ನಮ್ಮೂರಿಗೆ ಕೀರ್ತಿ ತಂಡ ಪಡುಕುಡೂರುಬೀಡು ಎಂ.ಡಿ. ಅಧಿಕಾರಿ ಅವರ ಪುತ್ಥಳಿ ಪ್ರತಿಷ್ಠಾಪನೆಯನ್ನು ಸಾರ್ವಜನಿಕ ಸ್ಥಳದಲ್ಲಿ ಮಾಡಿ ಮುಂದಿನ ತಲೆಮಾರಿಗೆ ಪರಿಚಯಿಸಬೇಕೆನ್ನುವ ಕನಸನ್ನು ನಮ್ಮ ಮಾವನವರಾದ ಪಡುಪರ್ಕಳ ಶಂಕರ ಶೆಟ್ಟಿಯವರು ಕಂಡಿದ್ದರು. ಅದೀಗ ನನಸಾಗುತ್ತಿರುವುದು ಅತ್ಯಂತ ಹೆಮ್ಮೆ ತಂದಿದೆ. ಯಶಸ್ಸಿನ ಹಿಂದೆ ಹಲವಾರು ಮಂದಿ ಹಲವು ದಿನಗಳಿಂದ ಶ್ರಮಿಸುತ್ತಿದ್ದಾರೆ. ಸಮಾಜಸೇವಕರು, ಅಧಿಕಾರಿಗಳು, ಸಮರ್ಪಣಾ ಭಾವದ ಯುವಕರ ತಂಡ, ಊರಿನವರು, ಪ್ರಮುಖರು, ಗಣ್ಯರು, ದಾನಿಗಳು, ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳು, ಮಹಿಳಾ ಸಂಘಟನೆಗಳು, ಸ್ವಯಂಸೇವಾ ಸಂಸ್ಥೆಗಳು, ಪಡುಕುಡೂರಿನ ವಿವಿಧ ಮಹಿಳಾ ಸದಸ್ಯರು ಸೇರಿ ಸರ್ವರೂ ಕೈ ಜೋಡಿಸಿದ್ದರಿಂದ ನಮ್ಮೆಲ್ಲರ ಕನಸು ನನಸಾಗುತ್ತಿದೆ.
ಸರ್ವರಿಗೂ ಮನದಾಳದ ನಮನಗಳು.