ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯದಲ್ಲಿ ಜುಲೈ 19 ರಂದು ನಾಡಿನ ಹಿರಿಯ ಸಾಹಿತಿ, ಶಿಕ್ಷಕ ಕೆ.ವಿ. ಭಟ್ ಕುದಬೈಲ್ ವಿರಚಿತ ಮಾತನ ಮರ್ಮ ಕೃತಿಯನ್ನು ಬಿಡುಗಡೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಅವರೊಂದಿಗೆ ಸಾಹಿತ್ಯ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕೃಷ್ಣ ಭಟ್ ಅವರು ಇದು ಬಯಸದೇ ಬಂದ ಭಾಗ್ಯ. ನಾನು ಶಿಕ್ಷಕನಾಗಿ ಬಹು ಕಾಲ ಕೆಲಸ ಮಾಡಿದವನು. ಮಕ್ಕಳ ಮನೋವಿಕಾಸದ ದೃಷ್ಟಿಯಿಂದ ಬರವಣಿಗೆ ಮಾಡಿರುವೆ. ಛಂದೋಬದ್ಧ ಕವಿತೆಗಳನ್ನು ಬರೆಯುವುದು ಅದರಲ್ಲೂ ಭಾಮಿನಿ ಷಟ್ಪದಿ ರಚನೆ ನನಗೆ ಇಷ್ಟ. ಸದ್ಯ ಎಲ್ಲರೂ ಮೊಬೈಲ್ ಮುಖಿಗಳಾಗಿರುವುದರಿಂದ ಓದುಗರ ಸಂಖ್ಯೆ ಕಡಿಮೆಯಾಗುತ್ತಿರುವುದಕ್ಕೆ ಅವರು ಇದೇ ಸಂದರ್ಭದಲ್ಲಿ ಕಳವಳ ವ್ಯಕ್ತಪಡಿಸಿದರು. ಮುಂಬಯಿ ವಿವಿ ಕನ್ನಡ ವಿಭಾಗ ಹೊರನಾಡಿನಲ್ಲಿ ಮಾಡುತ್ತಿರುವ ಕನ್ನಡ ಪರಿಚಾರಿಕೆ ದೊಡ್ಡದು ಗುಣಗಾನಗೈದರು.
ಮಾತಿನ ಮರ್ಮ ಕೃತಿಯನ್ನು ಬಿಡುಗಡೆಗೊಳಿಸಿದ ನಂತರ ವಿಭಾಗದ ಮುಖ್ಯಸ್ಥ ಪ್ರೊ. ಜಿ. ಎನ್. ಉಪಾಧ್ಯ ಅವರು ಮಾತನಾಡುತ್ತಾ, ಕೃಷ್ಣ ಭಟ್ ಅವರದ್ದು ವಿದ್ವತ್ತಿನಿಂದ ಪ್ರೌಢವೂ ಲೋಕಾನುಭವ ಜೀವನಾನುಭವಗಳಿಂದ ಪರಿಷ್ಕೃತವೂ ಆದ ಮಾದರಿ ವ್ಯಕ್ತಿತ್ವ. ಅವರ ಆಸಕ್ತಿಗೆ ನಾನಾ ಮುಖಗಳು. ಅವರು ಬರವಣಿಗೆಯನ್ನು ಆರಂಭಿಸಿದ್ದು ನಾಟಕ ರಚನೆಯ ಮೂಲಕ. ಕೃಷಿ ಸಂಸ್ಕೃತಿ, ಗ್ರಾಮೀಣ ಹಿನ್ನೆಲೆಯಿಂದ ಬಂದ ಅವರು ತಮ್ಮನ್ನು ತಾವು ರೂಪಿಸಿಕೊಂಡವರು. ಭಟ್ ಅವರ ಪ್ರತಿಭೆ, ಕೌಶಲಗಳು ಸುವ್ಯಕ್ತವಾದುದು. ಮುಖ್ಯವಾಗಿ ಕಾವ್ಯ, ನಾಟಕ ಕ್ಷೇತ್ರಗಳಲ್ಲಿ. ಅಸಾಧಾರಣವಾದ ಪ್ರತಿಭೆಯನ್ನು ಹೊಂದಿರುವ ಭಟ್ ಅವರು ಬರೆದದ್ದು ಕಡಿಮೆಯೇ. ಬರೆದದ್ದನ್ನೆಲ್ಲಾ ಅಚ್ಚು ಹಾಕಬೇಕು ಎಂಬ ಹಪಹಪಿಯು ಅವರಿಗಿಲ್ಲ. ಹಿಂದಿ, ಸಂಸ್ಕೃತ ಮೊದಲಾದ ಭಾಷೆಗಳಲ್ಲಿ ಒಳ್ಳೆಯ ಹಿಡಿತವಿದ್ದರೂ ಅವರು ತಮ್ಮ ಧೀಶಕ್ತಿಯನ್ನು ಕನ್ನಡಕ್ಕಾಗಿಯೇ ಮೀಸಲಾಗಿಟ್ಟವರು. ಬಿಂಕ ಬಿಗುಮಾನಗಳಿಲ್ಲದ ಭಟ್ ಅವರು ಸ್ನೇಹ, ಸೌಜನ್ಯಕ್ಕೆ ಹೆಸರಾದವರು. ಅವರು ಒಬ್ಬ ಆದರ್ಶ ಶಿಕ್ಷಕರು, ಒಳ್ಳೆಯ ವಾಗ್ಮಿ, ಅಧ್ಯಾಪಕರಾಗಿ ಅವರು ಆ ಹುದ್ದೆಗೆ ವಿಶೇಷವಾದ ಗೌರವ ತಂದುಕೊಟ್ಟವರು. ಎಂಬತ್ತರ ಪ್ರಾಯದಲ್ಲೂ ಬರವಣಿಗೆಯಲ್ಲಿ ನಿರತರಾಗಿರುವುದು ಮಾದರಿ ಉಪಕ್ರಮ ಎಂದು ಸಂತಸ ವ್ಯಕ್ತಪಡಿಸಿದರು.
ಮಾತಿನ ಮರ್ಮ ಒಂದು ಒಳ್ಳೆಯ ನಾಟಕ. ಇದು ರಂಗ ಪ್ರದರ್ಶನಕ್ಕೆ ಯೋಗ್ಯವಾಗಿದೆ ಎಂಬುದಾಗಿ ಡಾ ಪೂರ್ಣಿಮಾ ಶೆಟ್ಟಿ ಅವರು ಅಭಿಪ್ರಾಯಪಟ್ಟರು. ಲೇಖಕ ಕೆ. ವಿ. ಭಟ್ ಅವರನ್ನು ಇದೇ ಸಂದರ್ಭದಲ್ಲಿ ಶಾಲು ಹೊದಿಸಿ, ಗ್ರಂಥ ಗೌರವ ನೀಡಿ ಸತ್ಕರಿಸಲಾಯಿತು. ಕಲಾ ಭಾಗ್ವತ್ ಅವರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಅಶ್ವಿನ್ ಭಾಗ್ವತ್ ಅವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.