‘ಯಕ್ಷಾಂಗಣ ಮಂಗಳೂರು’ ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆಯ ವತಿಯಿಂದ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನಾ ಸಮಾರಂಭವು ನಗರದ ಬಲ್ಮಠ ಹೋಟೆಲ್ ಕುಡ್ಲ ಪೆವಿಲಿಯನ್ ನಲ್ಲಿ ಜುಲೈ 11 ರಂದು ಗುರುವಾರ ಜರಗಲಿದೆ ಎಂದು ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ. ಬೆಂಗಳೂರಿನ ಆರ್ಯಭಟ ಸಾಂಸ್ಕೃತಿಯ ಸಂಸ್ಥೆಯಿಂದ 2024 ನೇ ಸಾಲಿನ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಯನ್ನು ಇತ್ತೀಚೆಗೆ ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಸ್ವೀಕರಿಸಿರುವ ಯಕ್ಷಾಂಗಣದ ಗೌರವ ಉಪಾಧ್ಯಕ್ಷ, ಉದ್ಯಮಿ ಹಾಗೂ ಧಾರ್ಮಿಕ ಸೇವಾಕರ್ತ ಕೆ.ಕೆ.ಶೆಟ್ಟಿ ಅಹ್ಮದ್ ನಗರ, ಸಾಮಾಜಿಕ ಮತ್ತು ಶೈಕ್ಷಣಿಕ ಧುರೀಣ ರವೀಂದ್ರ ಶೆಟ್ಟಿ ಉಳಿದೊಟ್ಟು ಹಾಗೂ ಯಕ್ಷಾಂಗಣದ ಉಪಾಧ್ಯಕ್ಷರಾದ ನಿವೃತ್ತ ಬ್ಯಾಂಕ್ ಅಧಿಕಾರಿ ಮತ್ತು ಸಮಾಜ ಸೇವಾಸಕ್ತ ಲ|ಎಂ. ಸುಂದರ ಶೆಟ್ಟಿ ಬೆಟ್ಟಂಪಾಡಿ ಇವರನ್ನು ಗಣ್ಯರ ಸಮ್ಮುಖದಲ್ಲಿ ಗೌರವಿಸಲಾಗುವುದು.
ಯಕ್ಷಾಂಗಣದ ಗೌರವಾಧ್ಯಕ್ಷ ಹಾಗೂ ಕದ್ರಿ ಮಂಜುನಾಥ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ಎ ಜೆ. ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸುವರು. ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಅಭಿನಂದನಾ ಭಾಷಣ ಮಾಡುವರು ಎಂದು ಭಾಸ್ಕರ ರೈ ಕುಕ್ಕುವಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.