ಭಾರತೀಯ ಆಚಾರ ವಿಚಾರ ಸಂಸ್ಕಾರ ಸಂಸ್ಕೃತಿಗಳು ಅಳಿವಿನಂಚಿನಲ್ಲಿ ಸಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ರಾಷ್ಟ್ರ ವ್ಯಾಪಿಯಾಗಿ ಅವುಗಳನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ಪ್ರತಿಯೊಬ್ಬ ಪ್ರಜೆಯೂ ಕೈಗೊಂಡಾಗ ಖಂಡಿತ ಮುಂದಿನ ದಿನಗಳಲ್ಲಿ ಕನಿಷ್ಠ ಪಕ್ಷ ನಮ್ಮ ನಮ್ಮ ಪೀಳಿಗೆಗಳು ಕೈ ಜೋಡಿಸಬಲ್ಲರು. ಇಂದಿನ ಮಕ್ಕಳೇ ಮುಂದಿನ ಜನಾಂಗ ಎನ್ನುವ ವ್ಯಾಖ್ಯಾನದಂತೆ ಮಕ್ಕಳಲ್ಲಿರುವ ಸೂಕ್ತ ಪ್ರತಿಭೆಗಳಿಗೆ ವೇದಿಕೆಗಳನ್ನು ಒದಗಿಸಿಕೊಟ್ಟಾಗ ಶಿಕ್ಷಣದೊಂದಿಗೆ ಸಾಮಾಜಿಕ ಬದ್ಧತೆ, ಧಾರ್ಮಿಕ ನಂಬಿಕೆ, ಆಧ್ಯಾತ್ಮಿಕ ಚಿಂತನೆ, ಆಚಾರ ವಿಚಾರಗಳ ಜ್ಞಾನ ವೃದ್ಧಿಯಾಗಲು ಅವಕಾಶವಾಗಬಹುದು ಎಂದು ಶ್ರೀ ದೇವಿ ಯಕ್ಷಕಲಾ ನಿಲಯ ನಾಲಾಸೋಪಾರ ವಿರಾರ್ ಇದರ ಅಧ್ಯಕ್ಷರಾದ ಇನ್ನಂಜೆ ಶಶಿಧರ್ ಕೆ ಶೆಟ್ಟಿ ಅವರು “ಕೊಲ್ಲೂರು ಮೂಕಾಂಬಿಕಾ ಕ್ಷೇತ್ರ ಮಹಾತ್ಮೆ” ಯಕ್ಷಗಾನ ಮುಹೂರ್ತ, ಭರತನಾಟ್ಯ, ಕನ್ನಡ ಕಲಿಕಾ ಕೇಂದ್ರ, ಪುಟ್ಬಾಲ್ ಮೊದಲಾದ ತರಬೇತಿ ಕೇಂದ್ರಗಳನ್ನು “ರಿಜೆನ್ಸಿ ಬ್ಯಾಂಕ್ವಿಟ್ ಹಾಲ್ ನಾಲಾಸೋಪಾರ” ಇಲ್ಲಿ 2024 -25 ಸಾಲಿನ ತರಬೇತಿಗಳ ಪ್ರಾರಂಭಿಸುತ್ತಾ ನುಡಿಗಳನ್ನಾಡಿದರು.

ಯಕ್ಷಗಾನ ಗುರುಗಳಾದ ನಾಗೇಶ್ ಪೊಳಲಿಯವರು ಮಾತನಾಡುತ್ತಾ, ಸ್ವಾರ್ಥ ಪ್ರಪಂಚದಲ್ಲಿ ನಿಸ್ವಾರ್ಥ ಪ್ರೀತಿ ಸಿಗುವುದು ಮನಃಪೂರ್ವಕವಾಗಿ ಕಲಿಯುವ ವಿವಿಧ ಕಲಿಕೆಗಳಿಂದ ಮಾತ್ರ. ವಿದ್ಯೆಗಳೊಂದಿಗೆ ವಿವಿಧ ಮನರಂಜನಾ ಹಾಗೂ ದೈಹಿಕ ಸದೃಢ ಕಲಿಕೆಗಳು ನಮ್ಮನ್ನು ಸುಸಂಸ್ಕೃತರನ್ನಾಗಿಸುತ್ತದೆ. ಈ ಶಿಬಿರದ ಎಲ್ಲಾ ಕಲಿಕಾರ್ಥಿಗಳಿಗೂ ಶುಭವಾಗಲಿ ಎಂದು ಶುಭ ಹಾರೈಸಿದರು.

ಶಿಬಿರದಲ್ಲಿ ಸಂಸ್ಥೆಯ ಕೋಶಾಧಿಕಾರಿಗಳಾದ ಜಗನ್ನಾಥ ಡಿ ಶೆಟ್ಟಿ, ಯಕ್ಷಗಾನ ಗುರುಗಳಾದ ನಾಗೇಶ್ ಪೊಳಲಿ, ಭರತನಾಟ್ಯ ಗುರುಗಳಾದ ಸ್ಮಿತಾ ನಾಯರ್, ಭಜನಾ ಗುರುಗಳಾದ ಲೀಲಾವತಿ ಆಳ್ವ, ಫುಟ್ಬಾಲ್ ಗುರುಗಳಾದ ನಾಗೇಶ್ ಕೋಟ್ಯಾನ್, ಕನ್ನಡ ಕಲಿಕಾ ಗುರುಗಳಾದ ವಿಜಯ್ ಸಾಲ್ಯಾನ್ ಮತ್ತು ಮಲ್ಲಿಕಾ ಪೂಜಾರಿ ಉಪಸ್ಥಿತರಿದ್ದರು ಹಾಗೂ ಶಿಬಿರಾರ್ಥಿಗಳಾಗಿ ನೋಂದಾಯಿಸಿಕೊಂಡ 185 ಶಿಬಿರಾರ್ಥಿಗಳು ಉಪಸ್ಥಿತರಿದ್ದು, ಎಲ್ಲಾ ವಿದ್ಯಾರ್ಥಿಗಳಿಗೂ ಆಶೀರ್ವಾದ ಪೂರ್ವಕ ಶುಭ ನುಡಿಗಳನ್ನಾಡುತ್ತಾ ಹಾರೈಸಿದರು. ಕಾರ್ಯಕ್ರಮದಲ್ಲಿ ಎಲ್ಲಾ ಶಿಬಿರಾರ್ಥಿಗಳು ಹಾಗೂ ಶಿಬಿರಾರ್ಥಿಗಳ ಪಾಲಕ ಪೋಷಕರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿದರು. ಕಾರ್ಯದರ್ಶಿ ಪ್ರವೀಣ್ ಶೆಟ್ಟಿ ಕಣಂಜಾರ್ ಕಾರ್ಯಕ್ರಮ ನಿರೂಪಿಸಿ, ಧನ್ಯವಾದಗೈದರು.






































































































