ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ಕನ್ನಡ ಸಂಘ ಬಹರೈನ್ ಆಶ್ರಯದಲ್ಲಿ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಶ್ರೀ ಶನಿಪೂಜೆಯು ಶ್ರೀ ಕ್ಷೇತ್ರ ಕದ್ರಿಯ ಅರ್ಚಕ ವೇ.ಮೂ. ಕೃಷ್ಣ ಅಡಿಗರ ಪೌರೋಹಿತ್ಯದಲ್ಲಿ ನೆರವೇರಿತು. ಇದೇ ಸಂದರ್ಭದಲ್ಲಿ ಅತಿಥಿ ಕಲಾವಿದರು ಹಾಗೂ ಸಂಘದ ಕಲಾವಿದರ ಕೂಡುವಿಕೆಯಲ್ಲಿ “ಶ್ರೀ ಶನೀಶ್ವರ ಮಹಾತ್ಮೆ” ಯಕ್ಷಗಾನ ಪ್ರದರ್ಶಿಸಲ್ಪಟ್ಟಿತು. ನಾಟ್ಯಗುರು ದೀಪಕ್ ರಾವ್ ಪೇಜಾವರ ಇವರ ನಿರ್ದೇಶನದಲ್ಲಿ ಜರುಗಿದ ಯಕ್ಷಗಾನದಲ್ಲಿ ತಾಯ್ನಾಡಿನಿಂದ ಆಗಮಿಸಿದ್ದ ಅತಿಥಿ ಕಲಾವಿದರಾದ ಕದ್ರಿ ನವನೀತ ಶೆಟ್ಟಿ ಹಾಗೂ ವಿಜಯ ಕುಮಾರ್ ಶೆಟ್ಟಿ ಮೊಯ್ಲೊಟ್ಟು ಭಾಗವಹಿಸಿದ್ದರು. ಅತಿಥಿ ಭಾಗವತರಾಗಿ ರೋಶನ್ ಎಸ್. ಕೋಟ್ಯಾನ್ ಪಾಲ್ಗೊಂಡಿದ್ದರು. ಈ ವಿಶೇಷ ಕಾರ್ಯಕ್ರಮದಲ್ಲಿ ಸುಮಾರು 600 ಕ್ಕೂ ಅಧಿಕ ಭಗವದ್ಭಕ್ತರು ಪಾಲ್ಗೊಂಡು ಶ್ರೀ ದೇವರ ಪ್ರಸಾದವನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ದ್ವೀಪದ ಭಜನಾ ಕಲಾವಿದರಿಂದ ಭಜನಾ ಸಂಕೀರ್ತನೆ ಸೇವೆಯೂ ಜರುಗಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಪೂಜಾ ಅರ್ಚಕರಾದ ಕೃಷ್ಣ ಅಡಿಗ ಕದ್ರಿ, ಯಕ್ಷಗಾನದ ಅತಿಥಿ ಕಲಾವಿದರಾದ ಕದ್ರಿ ನವನೀತ್ ಶೆಟ್ಟಿ, ವಿಜಯ ಕುಮಾರ್ ಶೆಟ್ಟಿ ಮೊಯ್ಲೊಟ್ಟು, ಭಾಗವತ ರೋಶನ್ ಎಸ್. ಕೋಟ್ಯಾನ್, ಪ್ರಾಯೋಜಕರಾದ ಕರುಣಾಕರ್ ಶೆಟ್ಟಿ ಅಂಪಾರು, ಮನೋಜ್ ಆಳ್ವ ಇವರನ್ನು ಸಂಘದ ಅಧ್ಯಕ್ಷ ಅಮರನಾಥ್ ರೈ, ಉಪಾಧ್ಯಕ್ಷ ಮಹೇಶ್ ಕುಮಾರ್ ಹಾಗೂ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು. ಇದೇ ವೇದಿಕೆಯಲ್ಲಿ ಸಂಘದ ವತಿಯಿಂದ ಯಕ್ಷೋಪಾಸನ ಕೇಂದ್ರದ ನಾಟ್ಯಗುರು ದೀಪಕ್ ರಾವ್ ಪೇಜಾವರ ಅವರಿಗೆ ಯಕ್ಷ ದೀಪಕ ಎಂಬ ಬಿರುದು ನೀಡಿ ಗೌರವ ಸನ್ಮಾನದೊಂದಿಗೆ ಪುರಸ್ಕರಿಸಲಾಯಿತು. ಕನ್ನಡ ಭವನದ ಯಕ್ಷಗಾನ ಕೇಂದ್ರದ ದಾನಿ ನವೀನ್ ಶೆಟ್ಟಿ ರಿಫ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ಅಮರನಾಥ್ ರೈ ಮಾತನಾಡಿ, ಸಂಘದ ಎಲ್ಲಾ ಸದಸ್ಯರು ಮತ್ತು ದ್ವೀಪದ ಸರ್ವಧರ್ಮದ ಬಂಧುಗಳು ಸರ್ವ ರೀತಿಯ ಸಹಕಾರವನ್ನು ಕನ್ನಡ ಸಂಘಕ್ಕೆ ನೀಡುವಂತೆ ವಿನಂತಿಸಿದರು. ಈ ಮಹೋನ್ನತ ಪೂಜಾ ಕಾರ್ಯಕ್ರಮದ ಅನ್ನದಾನ ಸೇವಾಕರ್ತರಾದ ಸುಭಾಶ್ಚಂದ್ರರವರಿಗೆ ಕೃತಜ್ಞತೆ ಸಲ್ಲಿಸಲಾಯಿತು. ಶ್ರೀ ಸತ್ಯನಾರಾಯಣ ಹಾಗೂ ಶನಿಕಥಾ ಸಂಕಲ್ಪ, ಶ್ರವಣವಾಚನ ಬಳಿಕ ಮಂಗಳಾರತಿಯ ಕೊನೆಯಲ್ಲಿ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆಯ ವ್ಯವಸ್ಥೆಯನ್ನು ಮಾಡಲಾಗಿತ್ತು. ಪ್ರಧಾನ ಕಾರ್ಯದರ್ಶಿ ರಾಮಪ್ರಸಾದ್ ಅಮ್ಮೆನಡ್ಕ ಕಾರ್ಯಕ್ರಮ ನಿರೂಪಿಸಿದರು.