ಕಾಂದಿವಲಿ ಪಶ್ಚಿಮದಲ್ಲಿ ಬಹಳಷ್ಟು ವರ್ಷಗಳಿಂದ ಈ ಭಾಗದಲ್ಲಿ ವಾಸ್ತವ್ಯವಿರುವ ಎಲ್ಲಾ ತುಳು ಕನ್ನಡಿಗರ ಆಶೋತ್ತರಗಳಿಗೆ ಸ್ಪಂದಿಸಿ ಸದಾ ಕ್ರಿಯಾಶೀಲವಾಗಿದ್ದುಕೊಂಡ ಕಾಂದಿವಲಿ ಕನ್ನಡ ಸಂಘ (ರಿ), ದಹಾನುಕರ್ ವಾಡಿ, ತನ್ನ ಸ್ವಂತ ಕಛೇರಿಯನ್ನು ಹೊಂದಿದ್ದು , ಬಹಳಷ್ಟು ಸದಸ್ಯ ಸಂಪತ್ತಿನೊಂದಿಗೆ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ನೆಲೆಯಲ್ಲಿ ತುಳು ಕನ್ನಡಿಗರ ಸೇವೆಯನ್ನು ಗೈಯುತ್ತಾ ಬಂದಿರುತ್ತದೆ. ಈ ಸಂಸ್ಥೆಯ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಜರಗಿದ್ದು, ನಿಕಟಪೂರ್ವ ಅಧ್ಯಕ್ಷರಾದ ಪೊಲ್ಯ ಜಯಪಾಲ ಶೆಟ್ಟಿಯವರು ಅಧ್ಯಕ್ಷರಾಗಿ ಪುನರಾಯ್ಕೆಗೊಂಡರೆ, ಮಹಿಳಾ ವಿಭಾಗದ ನೂತನ ಕಾರ್ಯಾಧ್ಯಕ್ಷೆಯಾಗಿ, ಹಲವಾರು ಸಂಘ ಸಂಸ್ಥೆಗಳಲ್ಲಿ ದುಡಿದು ಅಪಾರ ಅನುಭವವನ್ನು ಹೊಂದಿದ, ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ವಿನೋದ ದೇವದಾಸ್ ಶೆಟ್ಟಿಯವರು ಆಯ್ಕೆಗೊಂಡರು.
ವಿನೋದ ಶೆಟ್ಟಿಯವರು ಪುನರಾಯ್ಕೆಗೊಂಡ ಬಳಿಕದ ಪ್ರಪ್ರಥಮ ಕಾರ್ಯಕ್ರಮವಾಗಿ ಇತ್ತೀಚೆಗೆ, ವಸಾಯಿಯಲ್ಲಿರುವ ಶ್ರದ್ಧಾನಂದ ಮಹಿಳಾ ಆಶ್ರಮ (ವಸಾಯಿ ವೃದ್ಧಾಶ್ರಮ)ಕ್ಕೆ ಭೇಟಿ ನೀಡಿ, ಒಂದು ದಿನವನ್ನು ಆಶ್ರಮ ವಾಸಿಗಳ ಜತೆ ಕಳೆದರು. ಆಶ್ರಮದ ಆ ದಿನದ ಸಂಪೂರ್ಣ ಖರ್ಚು ವೆಚ್ಚಗಳನ್ನು ಸಂಘದ ಪದಾಧಿಕಾರಿಗಳು ಮತ್ತು ಮಹಿಳಾ ವಿಭಾಗದ ಸದಸ್ಯೆಯರು ನೀಡಿ ಸಹಕರಿಸಿದರು. ದಿನಪೂರ್ತಿ ನಡೆದ ಈ ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರುಗಳಾದ ವಾರಿಜ ಕರ್ಕೇರ, ಸಬಿತಾ ಪೂಜಾರಿ, ಜಯಂತಿ ಸಾಲಿಯಾನ್, ಜಯಲಕ್ಷ್ಮಿ ಶೆಟ್ಟಿ, ಯಮುನ ಸಾಲಿಯಾನ್, ಪದ್ಮಾವತಿ ನಾಯ್ಕ್, ಚೇತನಾ ಶೆಟ್ಟಿ, ಶುಭ ಸುವರ್ಣ, ಆಶಾ ಮೊಗವೀರ ಹಾಗೂ ಸರೋಜ ಶೆಟ್ಟಿ ಪಾಲ್ಗೊಂಡಿದ್ದರು. ಇವರೆಲ್ಲರೂ ಆಶ್ರಮ ವಾಸಿಗೊಳೊಂದಿಗೆ ಭಜನೆಯನ್ನು ಹಾಡಿ, ಅವರೊಂದಿಗೆ ಸಹಭೋಜನವನ್ನು ಮಾಡಿ ಅವರ ಜೀವನದ ಸಿಹಿಕಹಿಗಳನ್ನು ಆಲಿಸಿ ಅವರ ಮನಸ್ಸನ್ನು ಹಗುರಗೊಳಿಸಿದರು.
ಬದುಕಿನುದ್ದಕ್ಕೂ ಹತ್ತಾರು ರೀತಿಯ ಬವಣೆಗಳನ್ನು ಅನುಭವಿಸಿ, ಕೊನೆಗೆ ಯಾವುದೇ ದಾರಿ ಕಾಣದೇ ನಿರ್ಲಿಪ್ತ ಭಾವದಿಂದ ಆಶ್ರಮದ ಆಶ್ರಯವನ್ನು ಪಡೆದಿರುವ ದುಃಖತಪ್ತ ಮನಸ್ಸುಗಳಿಗೆ ಒಂದಷ್ಟು ಧೈರ್ಯವನ್ನು ತುಂಬುವ, ಅವರ ಮುಖದಲ್ಲಿ ಕೆಲವು ಕ್ಷಣಗಳಿಗಾದರೂ ನಗೆಯನ್ನು ಚೆಲ್ಲುವ ಸಣ್ಣ ಪ್ರಯತ್ನವನ್ನು ಮಾಡುವ ಈ ಅರ್ಥಪೂರ್ಣ ಕಾರ್ಯಕ್ರಮವು ಕಾರ್ಯಾಧ್ಯಕ್ಷೆ ವಿನೋದಾ ಶೆಟ್ಟಿಯವರ ಕನಸಾಗಿತ್ತು.
ಈ ಸಂದರ್ಭದಲ್ಲಿ ಆಶ್ರಮ ವಾಸಿಗಳನ್ನು ಉದ್ದೇಶಿಸಿ ಮಾತನಾಡಿದ ವಿನೋದ ಶೆಟ್ಟಿ ಅವರು ಪ್ರತಿಯೊಬ್ಬನ ಬದುಕು ಕಟ್ಟುವುದಕ್ಕೆ ಮಹಿಳೆಯ ಪಾತ್ರ ಮಹತ್ತರವಾಗಿರುತ್ತದೆ. ಆದರೆ ಅವಳ ಒಳ ಮನಸ್ಸಿನ ದುಃಖಗಳನ್ನು ಮನೆಯವರು ಅರಿತುಕೊಳ್ಳುವುದು ಕಡಿಮೆ. ಆದ್ದರಿಂದ ಪ್ರತಿಯೊಬ್ಬ ಮಹಿಳೆಯು ಮನೆ ಕೆಲಸದೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿದಾಗ ಅವಳು ಯಾವುದೇ ಕಷ್ಟ- ದುಃಖಗಳು ಎದುರಾದರೂ ಅದನ್ನು ಧೈರ್ಯದಿಂದ ಎದುರಿಸುವ ಶಕ್ತಿವಂತಳಾಗುತ್ತಾಳೆ. ಈ ಆಶ್ರಮದಲ್ಲಿ ಇರುವ ಎಲ್ಲಾ ಮಹಿಳೆಯರಿಗೆ ನಮ್ಮ ಸದಾ ಸಹಕಾರವಿದೆ ಎಂದು ನುಡಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂಘದ ಸದಸ್ಯರೆಲ್ಲರೂ ವೃದ್ಧಾಶ್ರಮದ ಮಹಿಳೆಯರೊಂದಿಗೆ ಬೆರೆತು ಸಂಭ್ರಮವನ್ನು ಹಂಚಿಕೊಂಡರು.