ಕನ್ನಡ ವೆಲ್ಫೇರ್ ಸೊಸೈಟಿಯ ಜನಪ್ರಿಯತೆಯ ಹಿನ್ನಲೆಯಲ್ಲಿ ಸೊಸೈಟಿಯ ಮಹಿಳೆಯರ ಪಾತ್ರ ಮಹತ್ತರವಾಗಿದೆ. ನಮ್ಮ ಈ ಸಂಘದಲ್ಲಿ ಮಹಿಳೆಯರು ಎಲ್ಲಾ ಸಮಾಜಪರ ಸೇವಾ ಕಾರ್ಯಗಳಲ್ಲಿ ಸದಾ ಸಕ್ರಿಯವಾಗಿ ಕೆಲಸ ಮಾಡುವುದರಿಂದ ಸಂಸ್ಥೆಯು ಸದಾ ಕ್ರಿಯಾಶೀಲವಾಗಿರುವಂತಾಗಿದೆ. ನಮ್ಮ ಸಂಸ್ಥೆಯು ಮಹಿಳೆಯರ ಯಾವುದೇ ಕಾರ್ಯಕ್ರಮಕ್ಕೂ ಉತ್ತಮ ಪ್ರೋತ್ಸಾಹವನ್ನು ನೀಡುತ್ತಾ ಬಂದಿದೆ. ಮಹಿಳೆಯರು ಸಮಾಜದಲ್ಲಿ ಮುಂದೆ ಬರಬೇಕು ಅವರ ಆತ್ಮ ವಿಶ್ವಾಸವು ಹೆಚ್ಚಿಸಬೇಕು ಎಂಬುದೇ ಕನ್ನಡ ವೆಲ್ಫೇರ್ ಸೊಸೈಟಿಯ ಉದ್ದೇಶವಾಗಿದೆ ಹಾಗೂ ಮುಖ್ಯ ಗುರಿಯಾಗಿದೆ. ಅದಕ್ಕಾಗಿ ಸಂಘದ ಎಲ್ಲಾ ಕಾರ್ಯ ಚಟುವಟಿಕೆಗಳಲ್ಲಿ ಮಹಿಳೆಯರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕನ್ನಡ ವೆಲ್ಫೇರ್ ಸೊಸೈಟಿ ಘಾಟ್ಕೋಪರ್ ನ ಅಧ್ಯಕ್ಷ ನವೀನ್ ಶೆಟ್ಟಿ ಇನ್ನ ಬಾಳಿಕೆ ತಮ್ಮಅಭಿಮತವನ್ನು ವ್ಯಕ್ತಪಡಿಸಿದರು.
ಅವರು ಮಾ.14ರ ಗುರುವಾರದಂದು ಸಂಜೆ ಘಾಟ್ಕೋಪರ್ ಪೂರ್ವದ ಕನ್ನಡ ವೆಲ್ಫೇರ್ ಸೊಸೈಟಿಯ ಮಹಿಳಾ ವಿಭಾಗದ ಆಶ್ರಯದಲ್ಲಿ ಘಾಟ್ಕೋಪರ್ ಪೂರ್ವದಲ್ಲಿನ ಕನ್ನಡ ವೆಲ್ಫೇರ್ ಸೊಸೈಟಿಯ ಮಹೇಶ್ ಎಸ್. ಶೆಟ್ಟಿ (ಬಾಬಾ ಗ್ರೂಪ್ ) ಆಡಿಟೋರಿಯಂನಲ್ಲಿ ಜರಗಿದ ಜಾಗತಿಕ ಮಹಿಳಾ ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿ ಮಾತಾನಾಡುತ್ತಿದ್ದರು. ಜಾಗತಿಕ ಮಹಿಳಾ ದಿನಾಚರಣೆಯ ಈ ಕಾರ್ಯಕ್ರಮಕ್ಕೆ ವೀಣಾ ಶೆಟ್ಟಿ ಅವರ ಪ್ರಾರ್ಥನೆ ಅತಿಥಿ ಗಣ್ಯರು ಹಾಗೂ ಮಹಿಳಾ ವಿಭಾಗದ ಪದಾಧಿಕಾರಿಗಳ ಹಸ್ತದಿಂದ ದೀಪ ಪ್ರಜ್ವಲನೆಯೊಂದಿಗೆ ಚಾಲನೆ ನೀಡಲಾಯಿತು. ಅತಿಥಿ ಗಣ್ಯರನ್ನು ವೀಣಾ ಶೆಟ್ಟಿ ಪರಿಚಯಿಸಿದರು. ಅಧ್ಯಕ್ಷ ನವೀನ್ ಶೆಟ್ಟಿ ಇನ್ನ ಬಾಳಿಕೆ ಹಾಗೂ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಜಲಾ ಅಜಿತ್ ಶೆಟ್ಟಿ ಹಾಗೂ ಪದಾಧಿಕಾರಿಗಳು ಸೇರಿ ಅತಿಥಿ ಗಣ್ಯರನ್ನು ಶಾಲು ಹೊದಿಸಿ, ಹೂಗುಚ್ಛ ನೆನಪಿನ ಕಾಣಿಕೆಯೊಂದಿಗೆ ಗೌರವಿಸಿದರು.
ಅತಿಥಿಗಳನ್ನು ಸ್ವಾಗತಿಸುತ್ತಾ ಪ್ರಾಸ್ತಾವಿಕವಾಗಿ ಮಾತನಾಡಿದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಜಲಾ ಅಜಿತ್ ಶೆಟ್ಟಿ, ನಮ್ಮ ಸಂಸ್ಥೆಯ ಮಹಿಳಾ ವಿಭಾಗವು ಮಾಡುತ್ತಿರುವ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರಿಸಿದರು ಹಾಗೂ ಎಲ್ಲರ ಸಹಕಾರ ಪ್ರೋತ್ಸಾಹದಿಂದ ಇಂತಹ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲು ಸಾಧ್ಯವಾಗುತ್ತಿದೆ. ಇನ್ನು ಮುಂದೆಯೂ ಎಲ್ಲರೂ ಸಂಘದ ಕಾರ್ಯ ಚಟುವಟಿಕೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ನುಡಿದರು.
ಸಮಾರಂಭದ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾದ ಬಾಬಾಸ್ ಗ್ರೂಪ್ ಆಡಳಿತ ನಿರ್ದೇಶಕ ಮತ್ತು ಬಂಟರ ಸಂಘ ಮುಂಬಯಿಯ ಉಪಾಧ್ಯಕ್ಷ ಮಹೇಶ್ ಎಸ್. ಶೆಟ್ಟಿ, ಬಂಟರ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ಮಾಜಿ ಕಾರ್ಯಾಧಕ್ಷೆ, ಶ್ರೇಷ್ಠ ಸಮಾಜ ಸೇವಕಿ ಲತಾ ಪ್ರಭಾಕರ್ ಶೆಟ್ಟಿ, ಮಹಿಳಾ ವಿಭಾಗದ ಉಪ ಕಾರ್ಯಾಧಕ್ಷೆ ಪ್ರಮೀಳಾ ಆರ್. ಶೆಟ್ಟಿ, ಕಾರ್ಯದರ್ಶಿ ಮಲ್ಲಿಕಾ ಆರ್. ಶೆಟ್ಟಿ, ಕೋಶಾಧಿಕಾರಿ ಧನ್ಯಾಕ್ಷಿ ಶೆಟ್ಟಿ, ಜೊತೆ ಕಾರ್ಯದರ್ಶಿ ಇಂದಿರಾ ವಿ. ಪೂಜಾರಿ, ಜೊತೆ ಕೋಶಾಧಿಕಾರಿ ಲತಾ ಎಚ್. ಶೆಟ್ಟಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮವನ್ನು ಸಂಘದ ಸದಸ್ಯೆ ವಸಂತಿ ನವೀನ್ ಪೂಜಾರಿ ಅವರು ನಿರೂಪಿಸಿದರು. ಕಾರ್ಯದರ್ಶಿ ಮಲ್ಲಿಕಾ ಆರ್. ಶೆಟ್ಟಿ ವಂದಿಸಿದರು. ಮನೋರಂಜನೆಯ ಅಂಗವಾಗಿ ಮಕ್ಕಳಿಂದ ಹಾಗೂ ಮಹಿಳಾ ವಿಭಾಗದ ಸದಸ್ಯರಿಂದ ನೃತ್ಯ ಹಾಗೂ ವಿವಿಧ ಮನೋರಂಜನಾ ಕಾರ್ಯಕ್ರಮಗಳು ಜರುಗಿದವು.