ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈಯವರನ್ನು ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ. ನ್ಯಾಯವಾದಿಯಾಗಿ ತುಳು ಸಾಹಿತಿ, ತುಳು ನಾಟಕ ರಚನೆಕಾರರಾಗಿ, ನಟರಾಗಿ, ತುಳು ಸಂಘಟಕರಾಗಿ ಗುರುತಿಸಿಕೊಂಡಿರುವ ಕುಂಬ್ರ ದುರ್ಗಾಪ್ರಸಾದ್ ರೈಯವರು ಈ ಹಿಂದೆಯೂ 3 ವರ್ಷಗಳ ಕಾಲ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
ಪುತ್ತೂರು ತುಳು ಕೂಟದ ಅಧ್ಯಕ್ಷರಾಗಿ 7 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಇವರು ಕಾವು, ಪರ್ಪುಂಜ, ಕುಂಬ್ರ ಮತ್ತು ಪುತ್ತೂರಿನಲ್ಲಿ ತುಳು ಸಮ್ಮೇಳನವನ್ನು ಆಯೋಜನೆ ಮಾಡಿದ ಹೆಗ್ಗಳಿಕೆ ಹೊಂದಿದ್ದಾರೆ. ಸವಣೂರಿನಲ್ಲಿ ನಡೆದ ವಿಶ್ವ ತುಳುವೆರೆ ಸಮ್ಮೇಳನದ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ, ಧರ್ಮಸ್ಥಳದಲ್ಲಿ ನಡೆದ ವಿಶ್ವ ತುಳು ಸಮ್ಮೇಳನದ ಪುತ್ತೂರು ತಾಲೂಕಿನ ಸ್ವಾಗತ ಸಮಿತಿಯ ಪದಾಧಿಕಾರಿಯಾಗಿ, ಒಡಿಯೂರು ತುಳು ತೇರ್ ಒಯಿಪುಗ ಇದರ ಪುತ್ತೂರು ಸಮಿತಿಯ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಇದಲ್ಲದೆ ಇವರ ಕಾಲೇಜು ದಿನಗಳಲ್ಲಿ ಪುತ್ತೂರು ವಿವೇಕಾನಂದ ಪದವಿ ಕಾಲೇಜಿನಲ್ಲಿ ತುಳು ಕೂಟ ಆರಂಭಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ತುಳು ಸಂಘಟನೆಗಳಲ್ಲಿ ಅಲ್ಲದೇ ಇತರ ಸಂಘ ಸಂಸ್ಥೆಗಳಲ್ಲಿಯೂ ತನ್ನನ್ನು ತೊಡಗಿಸಿಕೊಂಡಿರುವ ಕುಂಬ್ರ ದುರ್ಗಾಪ್ರಸಾದ್ ರೈಯವರು ಪುತ್ತೂರು ವಕೀಲರ ಸಂಘದ ಮಾಜಿ ಅಧ್ಯಕ್ಷರಾಗಿ, ಬಂಟರ ಮಾತೃ ಸಂಘದ ನಿರ್ದೇಶಕರಾಗಿ, ರಾಮಕೃಷ್ಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಸದಸ್ಯರಾಗಿ, ರಾಮಕೃಷ್ಣ ಪ್ರೌಢಶಾಲಾ ಆಡಳಿತ ಮಂಡಳಿಯ ಸದಸ್ಯರಾಗಿ, ಕುಂಬ್ರ ಕೆಪಿಎಸ್ ಮೇಲುಸ್ತುವಾರಿ ಸಮಿತಿ ಸದಸ್ಯರಾಗಿ, ಕಾರ್ಯಾಧ್ಯಕ್ಷರಾಗಿ, ಫಿಲೋಮಿನಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕುಂಬ್ರ ವರ್ತಕರ ಸಂಘದ ಗೌರವ ಸಲಹೆಗಾರರಾಗಿ, ಬಾಂದಲಪ್ಪು ಜನಸೇವಾ ಸಮಿತಿಯ ಗೌರವ ಅಧ್ಯಕ್ಷರಾಗಿ, ಕುಂಬ್ರ ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷರಾಗಿ, ಜೇಸಿ ವಲಯ ಅಧಿಕಾರಿಯಾಗಿ, ಒಳಮೊಗ್ರು ಕುಕ್ಕುಮುಗೇರ್ ಇರ್ವೆರ್ ಉಳ್ಳಾಕುಲು ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾಗಿ ಹೀಗೆ ಹಲವು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ.
ಇವರು ತನ್ನ ಪ್ರಾಥಮಿಕ ಶಿಕ್ಷಣವನ್ನು ತನ್ನ ಹುಟ್ಟೂರಾದ ಪುಣಚ ಪರಿಯಾಲ್ತಡ್ಕದಲ್ಲಿ ಹಾಗೇ ಪ್ರೌಢ ಶಿಕ್ಷಣವನ್ನು ಪುಣಚ ದೇವಿನಗರ ಮತ್ತು ಪುತ್ತೂರು ಫಿಲೋಮಿನಾದಲ್ಲಿ, ಪಿಯುಸಿ ಶಿಕ್ಷಣವನ್ನು ಕೊಂಬೆಟ್ಟು ಜ್ಯೂನಿಯರ್ ಕಾಲೇಜಿನಲ್ಲಿ ಹಾಗೂ ಪದವಿ ಶಿಕ್ಷಣವನ್ನು ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಪಡೆದಿದ್ದಾರೆ. ಮಂಗಳೂರಿನ ಎಸ್ ಡಿಎಂ ಲಾ ಕಾಲೇಜಿನಲ್ಲಿ ಕಾನೂನು ಶಿಕ್ಷಣವನ್ನು ಪೂರೈಸಿದ್ದಾರೆ. 1988ರಲ್ಲಿ ವಕೀಲ ವೃತ್ತಿ ಆರಂಭಿಸಿದ ಇವರು ಆರಂಭದಲ್ಲಿ ಸುಳ್ಯದಲ್ಲಿ ಬಳಿಕ ಪುತ್ತೂರಿನಲ್ಲಿ ವೃತ್ತಿ ಮುಂದುವರಿಸುತ್ತಿದ್ದಾರೆ. ಪ್ರಸ್ತುತ ಪುತ್ತೂರಿನಲ್ಲಿ ರೈ ಆಂಡ್ ರೈ ಎಸೋಸಿಯೇಟ್ಸ್ ಎಂಬ ಕಚೇರಿಯನ್ನು ಹೊಂದಿ ವಕೀಲ ವೃತ್ತಿ ನಡೆಸುತ್ತಿದ್ದಾರೆ. ಪತ್ನಿ ಹೀರಾ ಡಿ. ರೈ, ಪುತ್ರಿಯರಾದ ವಿಭಾ ರೈ ಮತ್ತು ಯಶ ರೈ ಜೊತೆ ಕುಂಬ್ರ ತರವಾಡು ಮನೆಯಲ್ಲಿ ವಾಸ್ತವ್ಯ ಹೊಂದಿದ್ದಾರೆ.