ನಾನು ಕೂಡ ಸರಕಾರಿ ಶಾಲೆಯಲ್ಲಿ ಕಲಿತು ಈ ಮಟ್ಟಕ್ಕೆ ಬೆಳೆದಿದ್ದೇನೆ. ಅನೇಕ ಸಾಧಕರು ಸರಕಾರಿ ಶಾಲೆಗಳಲ್ಲಿಯೇ ವಿದ್ಯಾಭ್ಯಾಸ ಮಾಡಿ ದೊಡ್ಡ ಮಟ್ಟ ತಲುಪಿದ್ದಾರೆ. ಸರಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವುದರ ಬಗ್ಗೆ ಕೀಳಂದಾಜು ಸಲ್ಲದು ಎಂದು ಚಿತ್ರನಟ, ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದರು. ಕುಂದಾಪುರದ ಕೆರಾಡಿ ಶಾಲೆಯನ್ನು ರಿಷಬ್ ಶೆಟ್ಟಿ ಫೌಂಡೇಶನ್ ನೇತೃತ್ವದಲ್ಲಿ ಮಾದರಿ ಶಾಲೆಯನ್ನಾಗಿಸುವ ನಿಟ್ಟಿನಲ್ಲಿ ನಡೆದ ಸಮಾಲೋಚನೆ, ಅಭಿವೃದ್ಧಿ ಯೋಜನೆ ಪಟ್ಟಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೆರಾಡಿ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್, ಸ್ಪೋಕನ್ ಇಂಗ್ಲಿಷ್, ಕಂಪ್ಯೂಟರ್ ಶಿಕ್ಷಣದ ಜತೆಗೆ ಕಲೆ, ಕ್ರೀಡೆ, ಯೋಗದ ಸ್ಮರ್ಧಾತ್ಮಕ ಪರೀಕ್ಷಾ ತಯಾರಿ, ವ್ಯಕ್ತಿತ್ವ ವಿಕಸನ ತರಗತಿ, ವಾಹನ ವ್ಯವಸ್ಥೆ ಮಾಡಲಾಗುವುದು. ನಮ್ಮದು ಖಾಸಗಿ ಶಾಲೆಯ ಜತೆ ಸ್ಪರ್ಧೆಯಲ್ಲ. ಆದರೆ ಕನ್ನಡ ಶಾಲೆಯನ್ನು ಮಾದರಿಯಾಗಿಸುವುದು ನಮ್ಮ ಗುರಿ. ರಿಷಬ್ ಶೆಟ್ಟಿ ಫೌಂಡೇಶನ್ ಮುಂದಿನ 5 ವರ್ಷಗಳ ಅವಧಿಗೆ ಶಾಲೆಯ ಸರ್ವಾಂಗೀಣ ಪ್ರಗತಿಗೆ ಶ್ರಮಿಸಲಿದೆ ಎಂದರು. ಕೆರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುದರ್ಶನ ಶೆಟ್ಟಿ, ಊರ ಪ್ರಮುಖರಾದ ನಾಗಪ್ಪ ಕೊಠಾರಿ, ವರಸಿದ್ಧಿ ವಿನಾಯಕ ಪ.ಪೂ. ಕಾಲೇಜಿನ ನಿರ್ದೇಶಕ ಪ್ರದೀಪ್ ಶೆಟ್ಟಿ, ಶಾಲಾ ಶಿಕ್ಷಕರು, ಪೋಷಕರು, ಮುಖಂಡರು, ಹಳೆ ವಿದ್ಯಾರ್ಥಿಗಳು, ಊರವರು ಉಪಸ್ಥಿತರಿದ್ದರು. ಎಸ್ಡಿಎಂಸಿ ಅಧ್ಯಕ್ಷ ಸತೀಶ್ ಕೊಠಾರಿ ಸ್ವಾಗತಿಸಿ, ಮುಖ್ಯ ಶಿಕ್ಷಕ ವಿಜಯ ಕುಮಾರ್ ಶೆಟ್ಟಿ ವಂದಿಸಿದರು. ದಿವ್ಯಾಧರ ಶೆಟ್ಟಿ ಮೂಡುಗಲ್ಲು ಕಾರ್ಯಕ್ರಮ ನಿರೂಪಿಸಿದರು.