ಪೆರ್ಡೂರಿನಲ್ಲಿ 1991 ರಲ್ಲಿ ಅಸ್ತಿತ್ವಕ್ಕೆ ಬಂದ ಬಂಟರ ಸಂಘ ಪೆರ್ಡೂರು ಮಂಡಲದ ನೇತೃತ್ವದಲ್ಲಿ ಸಮಾಜಮುಖಿ ಚಿಂತಕ ಕೆ. ಶಾಂತಾರಾಮ ಸೂಡ ಅವರ ಮುಂದಾಳತ್ವದಲ್ಲಿ ಸಮಾಜ ಬಾಂಧವರು ಹಾಗೂ ದಾನಿಗಳ ನೆರವಿನೊಂದಿಗೆ ಪೆರ್ಡೂರಿನಲ್ಲಿ ಅತ್ಯಾಧುನಿಕ ಸೌಲಭ್ಯದ ಶ್ರೀಮತಿ ಸರ್ವಾಣಿ ಪಳ್ಳಿ ಶ್ರೀನಿವಾಸ ಹೆಗ್ಡೆ ಸಮುದಾಯ ಭವನ ಜ. 14 ರಂದು ಲೋಕಾರ್ಪಣೆಗೊಳ್ಳಲಿದೆ.
ಉಡುಪಿ – ಆಗುಂಬೆ ರಾ. ಹೆ. 169(ಎ) ಕ್ಕೆ ತಾಗಿಕೊಂಡು ಪೆರ್ಡೂರು ಸಮೀಪ ಜೋಗಿಬೆಟ್ಟಿನ 3.5 ಎಕರೆ ಪ್ರದೇಶದಲ್ಲಿ ಭವನ ನಿರ್ಮಾಣಗೊಂಡಿದೆ. ಉಡುಪಿ, ದ.ಕ. ಜಿಲ್ಲೆ ಮಾತ್ರವಲ್ಲದೇ ರಾಜ್ಯ ಹಾಗೂ ಹೊರ ರಾಜ್ಯದ ಜನರನ್ನು ಆಕರ್ಷಿಸುವಂತೆ ಸಮುದಾಯ ಭವನ ಸಿದ್ಧಗೊಂಡಿದ್ದು ಸಹಸ್ರ ಸಂಖ್ಯೆಯಲ್ಲಿ ಜನ ಸೇರುವ ಮದುವೆ ಇನ್ನಿತರ ಕಾರ್ಯಕ್ರಮಗಳಿಗೆ ಯೋಗ್ಯವಾಗಿದೆ.
ಅತ್ಯಾಕರ್ಷಕ ಒಳಾಂಗಣ ವಿನ್ಯಾಸ, 900 ಕ್ಕೂ ಅಧಿಕ ಜನ ಕುಳಿತುಕೊಳ್ಳುವ ಹವಾನಿಯಂತ್ರಿತ ಸಭಾಂಗಣ, 600 ಕ್ಕೂ ಹೆಚ್ಚು ಜನ ಕುಳಿತುಕೊಳ್ಳಬಹುದಾದ ಊಟದ ಹವಾನಿಯಂತ್ರಿತ ಹಾಲ್, ವಿಶಾಲ ವೇದಿಕೆ, ಗ್ರೀನ್ ರೂಮ್, ಸಸ್ಯಾಹಾರ ಹಾಗೂ ಮಾಂಸಹಾರಕ್ಕೆ ಪ್ರತ್ಯೇಕ ಅತ್ಯಾಧುನಿಕ ಕಿಚನ್ ಹಾಲ್, ಉಳಿದುಕೊಳ್ಳಲು ಯೋಗ್ಯವಾದ ಆಧುನಿಕ ಹವಾನಿಯಂತ್ರಿತ ಕೊಠಡಿ ವ್ಯವಸ್ಥೆ, ದಿನದ 24 ಗಂಟೆ ಲಿಫ್ಟ್ ಹಾಗೂ ನೀರಿನ ವ್ಯವಸ್ಥೆ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲಿದೆ.